ನವದೆಹಲಿ: ಸಾರ್ವತ್ರಿಕ ಆರೋಗ್ಯ ಸುರಕ್ಷೆಯನ್ನು ಸಾಧಿಸಲು ಆಯುಷ್ಮಾನ್ ಭಾರತ್-ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (ಎಬಿ-ಪಿಎಂಜೆಎವೈ) ಯನ್ನು ಐದು ವರ್ಷಕ್ಕಿಂತ ಕೆಳವಯಸ್ಸಿನ ಎಲ್ಲಾ ಮಕ್ಕಳು ಹಾಗೂ 60 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರಿಗೆ ವಿಸ್ತರಿಸಬೇಕೆಂದು ಸಂಸದೀಯ ಸಮಿತಿಯು ಶಿಫಾರಸು ಮಾಡಿದೆ.
ಮಕ್ಕಳು ಹಾಗೂ ಹಿರಿಯ ನಾಗರಿಕರಿಗೆ ಅವರ ಸಾಮಾಜಿಕ ಆರ್ಥಿಕ ಸ್ಥಿತಿಗತಿ ಅಥವಾ ಭೌಗೋಳಿಕ ಸ್ಥಳವನ್ನು ಪರಿಗಣನೆಗೆ ತೆಗೆದುಕೊಳ್ಳದೆ ಎಬಿ-ಪಿಎಂ-ಜೆಎವೈ ಯೋಜನೆಯನ್ನು ಒದಗಿಸಬೇಕೆಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಗೆ ಸಂಬಂಧಪಟ್ಟ ಸಂಸದೀಯ ಸ್ಥಾಯಿ ಸಮಿತಿಯು ಶಿಫಾರಸು ವರದಿಯಲ್ಲಿ ತಿಳಿಸಿದೆ.
"ತನ್ನ ಶಿಫಾರಸನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಸಚಿವಾಲಯವು, ಯೋಜನೆಗೆ ಸಮರ್ಪಕವಾದ ವಿತ್ತೀಯ ನಿಯಮಗಳನ್ನು ರೂಪಿಸುವುದನ್ನು ಖಾತರಿಪಡಿಸಬೇಕು. ಫಲಾನುಭವಿಗಳ ನೋಂದಣಿ ಕಾರ್ಯವಿಧಾನಗಳನ್ನು ತಡೆರಹಿತವಾಗಿ ನಡೆಸಬೇಕು ಹಾಗೂ ನ್ಯಾಯಯುತವಾದ, ಸಕಾಲಿಕವಾದ ಹಾಗೂ ಯೋಗ್ಯದರದಲ್ಲಿ ಆರೋಗ್ಯ ಶುಶ್ರೂಷೆ ಸೇವೆಗಳನ್ನು ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ದೊರೆಯುವಂತೆ ನೋಡಿಕೊಳ್ಳಬೇಕು'' ಎಂದು ಸಮಿತಿ ಸೂಚಿಸಿದೆ.
ಪಿಎಂಜೆಎವೈ ಯೋಜನೆಯನ್ನು ಹೊರರೋಗಿ ಸಮಾಲೋಚನೆ (ಓಪಿಡಿ ಕನ್ಸಲ್ಟೇಶನ್), ರೋಗನಿರ್ಣಯ, ಔಷಧಿ ವೆಚ್ಚಗಳು ಹಾಗೂ ಆಸ್ಪತ್ರೆಯಿಂದ ಬಿಡುಗಡೆಗೊಂಡ ಆನಂತರದ ವೈದ್ಯಕೀಯ ಶುಶ್ರೂಷೆಗೂ ವಿಸ್ತರಿಸಬೇಕೆಂದು ಪ್ರೊ. ರಾಮಗೋಪಾಲ್ ಯಾದವ್ ನೇತೃತ್ವದ ಸಮಿತಿ ಸಲಹೆ ನೀಡಿದೆ.
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಆಯುಷ್ಮಾನ್ ಭಾರತ್-ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (ಎಬಿ-ಪಿಎಂಜೆಎವೈ)ಯನ್ನು 2018ರಲ್ಲಿ ಆರಂಭಿಸಲಾಗಿತ್ತು. 50 ಕೋಟಿಗೂ ಅಧಿಕ ಮಂದಿ ಫಲಾನುಭವಿಗಳಿಗೆ ವಾರ್ಷಿಕವಾಗಿ ಪ್ರತಿ ಕುಟುಂಬಕ್ಕೆ ವೈದ್ಯಕೀಯ ಚಿಕಿತ್ಸೆಗೆ 5 ಲಕ್ಷ ರೂ. ಅನ್ನು ಈ ಯೋಜನೆ ನೀಡುತ್ತದೆ. ಆನಂತರ ಈ ಯೋಜನೆಯನ್ನು 37 ಲಕ್ಷಕ್ಕೂ ಅಧಿಕ 'ಆಶಾ' ಕಾರ್ಯಕರ್ತೆಯರಿಗೆ ವಿಸ್ತರಿಸಲಾಗಿತ್ತು. ಆನಂತರ 70 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿ ಹಿರಿಯ ನಾಗರಿಕರಿಗೂ ಈ ಯೋಜನೆಯನ್ನು ವಿಸ್ತರಿಸಲಾಗಿತ್ತು.

