ನವದೆಹಲಿ: ವಾರದಲ್ಲಿ ಐದು ದಿನಗಳ ಕೆಲಸದ ನಿಯಮ ಜಾರಿ ಗೊಳಿಸಬೇಕು ಮತ್ತು ವೇತನ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ದೇಶವ್ಯಾಪಿ ಮುಷ್ಕರ ನಡೆಸಲು ಬ್ಯಾಂಕ್ ನೌಕರರ ಸಂಘಟನೆಗಳ ಸಂಯುಕ್ತ ವೇದಿಕೆ (ಯುಎಫ್ಬಿಯು) ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.
ಈ ಹಿನ್ನೆಲೆಯಲ್ಲಿ ಶುಕ್ರವಾರ ದೇಶದಾದ್ಯಂತ ವಿಶೇಷವಾಗಿ ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ ಸೇವೆಗಳು ವ್ಯತ್ಯಯಗೊಂಡಿವೆ.
ದಾಗಿ ಖಾಸಗಿ ವಲಯದ ಬ್ಯಾಂಕುಗಳ ಕಾರ್ಯಾಚರಣೆಯ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.
ನೌಕರರು ಮತ್ತು ಅಧಿಕಾರಿಗಳು ಮುಷ್ಕರದಲ್ಲಿ ಪಾಲ್ಗೊಂಡಿದ್ದರಿಂದ ದೇಶದಾದ್ಯಂತ ಸಾರ್ವಜನಿಕ ವಲಯದ ಹೆಚ್ಚಿನ ಬ್ಯಾಂಕ್ ಶಾಖೆಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿವೆ ಎಂದು ಮೂಲಗಳು ತಿಳಿಸಿವೆ.
ಸಾರ್ವಜನಿಕ ವಲಯದ ಬ್ಯಾಂಕುಗಳು (PSBs) ಮತ್ತು ಕೆಲವು ಹಳೆಯ ತಲೆಮಾರಿನ ಖಾಸಗಿ ವಲಯದ ಬ್ಯಾಂಕ್ ಶಾಖೆಗಳಲ್ಲಿ ನಗದು ಠೇವಣಿ, ನಗದು ಹಿಂಪಡೆಯುವಿಕೆ, ಚೆಕ್ ಕ್ಲಿಯರೆನ್ಸ್ ಮತ್ತು ಆಡಳಿತಾತ್ಮಕ ಕೆಲಸಗಳಂತಹ ಸೇವೆಗಳಲ್ಲಿ ಅಡಚಣೆ ಉಂಟಾಗಿದೆ ಎಂದು ವರದಿಯಾಗಿದೆ.
ಆದಾಗ್ಯೂ, ಯುಪಿಐ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಸೇರಿದಂತೆ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.
'ಕೇಂದ್ರ ಸರ್ಕಾರದಿಂದ ಯಾವುದೇ ಸಕಾರಾತ್ಮಕ ಫಲಿತಾಂಶ ಬಾರದಿರುವ ಕಾರಣ ಮುಷ್ಕರಕ್ಕೆ ಕರೆ ನೀಡಿದ್ದೇವೆ. ನಮಗೆ ತಾರತಮ್ಯ ಮಾಡಲಾಗುತ್ತದೆ ಎಂದು ಬ್ಯಾಂಕ್ ಉದ್ಯೋಗಿಗಳು ಮತ್ತು ಅಧಿಕಾರಿಗಳು ತೀವ್ರ ಅಸಮಾಧಾನಗೊಂಡಿದ್ದಾರೆ' ಎಂದು ಯುಎಫ್ಬಿಯುನ ಭಾಗವಾಗಿರುವ ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಸಿ. ಎಚ್. ವೆಂಕಟಾಚಲಂ ಹೇಳಿದ್ದಾರೆ.
ಈ ಮಧ್ಯೆ, ಎಸ್ಬಿಐ ಸೇರಿದಂತೆ ಸಾರ್ವಜನಿಕ ವಲಯದ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಕಾರ್ಯಾಚರಣೆಯ ಮೇಲಾಗುವ ಮುಷ್ಕರದ ಪರಿಣಾಮದ ಬಗ್ಗೆ ಮುಂಚಿತವಾಗಿಯೇ ಮಾಹಿತಿ ನೀಡಿದ್ದವು.
ಎಲ್ಲಾ ಶನಿವಾರಗಳನ್ನು ರಜಾದಿನಗಳೆಂದು ಘೋಷಿಸಬೇಕೆಂದು ಯೂನಿಯನ್ಗಳು ಆಗ್ರಹಿಸುತ್ತಿವೆ. 2024ರ ಮಾರ್ಚ್ನಲ್ಲಿ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (ಐಬಿಎ) ಜತೆ ಸಹಿ ಹಾಕಲಾದ 12ನೇ ದ್ವಿಪಕ್ಷೀಯ ಒಪ್ಪಂದದ ವೇಳೆ ಈ ವಿಷಯಕ್ಕೆ ಒಪ್ಪಿಗೆ ನೀಡಲಾಗಿತ್ತು. ಆದರೆ, ಸರ್ಕಾರದಿಂದ ಅಧಿಸೂಚನೆ ಬಂದಿಲ್ಲ.

