HEALTH TIPS

ಸರ್ಕಾರದ ಉನ್ನತ ಹುದ್ದೆಗಳಲ್ಲಿ 7 ಸಂಬಂಧಿಕರು: ಹೀಗಿದೆ ಸಿಇಸಿ ಜ್ಞಾನೇಶ್ ಬಯೊಡೇಟಾ

ನವದೆಹಲಿ: ಅದು 2024ರ ಲೋಕಸಭಾ ಚುನಾವಣೆಯ ಹೊತ್ತು. ಆಗ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಅರುಣ್ ಗೋಯೆಲ್ ಅವರು ಏಕಾಏಕಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ಅರುಣ್‌ ಅವರ ಸ್ಥಾನಕ್ಕೆ ಜ್ಞಾನೇಶ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗುತ್ತದೆ. 2024ರ ಮಾರ್ಚ್ 15ರಂದು ಕುಮಾರ್ ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ.  


ಕುಮಾರ್ ಅವರ ಆಯ್ಕೆಗೆ ಮುನ್ನ 2023ರ ಡಿಸೆಂಬರ್ 23ರಲ್ಲಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಮತ್ತು ಚುನಾವಣಾ ಆಯುಕ್ತರ (ಇಸಿ) ನೇಮಕಾತಿಗೆ ಸಂಬಂಧಿಸಿದ ತಿದ್ದುಪಡಿ ಕಾಯ್ದೆಗೆ ರಾಷ್ಟ್ರಪತಿ ಅವರ ಅಂಕಿತ ಬೀಳುತ್ತದೆ.

ತಿದ್ದುಪಡಿ ಕಾಯ್ದೆಯು ಸಿಇಸಿ ಮತ್ತು ಇಸಿಗಳಿಗೆ ತಮ್ಮ ಅಧಿಕಾರಾವಧಿಯಲ್ಲಿ ತೆಗೆದುಕೊಂಡ ನಿರ್ಧಾರಗಳಿಗೆ ನಿವೃತ್ತಿಯ ನಂತರ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳಿಂದ ವಿನಾಯಿತಿ ನೀಡಿತ್ತು. ಅಲ್ಲದೇ, ಆಯ್ಕೆ ಸಮಿತಿಯಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನು ಹೊರಗಿಡಲಾಗಿತ್ತು. ಮತದಾನ ಮುಗಿದ 45 ದಿನಗಳ ನಂತರ ಮತಗಟ್ಟೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಅಳಿಸುವ ಅವಕಾಶವನ್ನೂ ಕಾಯ್ದೆಯಲ್ಲಿ ಕಲ್ಪಿಸಲಾಗಿತ್ತು.

ಕಾಯ್ದೆಗೆ ತಿದ್ದುಪಡಿ ಮಾಡಿದ ಬಳಿಕ ಸಿಇಸಿಯಾಗಿ ಅಧಿಕಾರ ವಹಿಸಿಕೊಂಡ ಮೊದಲಿಗರು ಜ್ಞಾನೇಶ್ ಕುಮಾರ್. ಮುಖ್ಯ ಚುನಾವಣಾ ಆಯುಕ್ತರಾಗಿ ಸುಮಾರು 30 ತಿಂಗಳು ಪೂರೈಸಿರುವ ಅವರು, ಕಳೆದ ಐದಾರು ತಿಂಗಳಿನಿಂದ ಒಂದಲ್ಲಾ ಒಂದು ವಿವಾದ ಮೂಲಕ ಸುದ್ದಿಯಲ್ಲಿದ್ದಾರೆ.

ಉತ್ತರ ಪ್ರದೇಶದವರಾದ ಜ್ಞಾನೇಶ್ ಕುಮಾರ್ ಅವರು 1988ರಲ್ಲಿ ಕೇರಳದ ಪತ್ತನಂತಿಟ್ಟದಲ್ಲಿ ಉಪ ಜಿಲ್ಲಾಧಿಕಾರಿ ಆಗಿ ತಮ್ಮ ವೃತ್ತಿಜೀವನವನ್ನು ಆರಂಭಿಸುತ್ತಾರೆ. ಜನವರಿ 2024ರಲ್ಲಿ ಕೇಂದ್ರ ಸಹಕಾರ ಸಚಿವಾಲಯದ ಕಾರ್ಯದರ್ಶಿಯಾಗಿ ನಿವೃತ್ತರಾದ ಅವರು, ನಂತರ ಮುಖ್ಯ ಚುನಾವಣಾ ಆಯುಕ್ತರಾಗಿ ನಿಯುಕ್ತಿಗೊಳ್ಳುತ್ತಾರೆ.

2016ರಿಂದಲೂ ಕೇಂದ್ರ ಸರ್ಕಾರದ ವಿವಿಧ ಇಲಾಖೆಯಲ್ಲಿ ಕೆಲಸ ಮಾಡಿದ್ದ ಅವರು, ಗೃಹ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿದ್ದಾಗ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

370ನೇ ವಿಧಿಯಡಿ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು 2019ರಲ್ಲಿ ಹಿಂಪಡೆದ ಸಂದರ್ಭದಲ್ಲಿ ಕುಮಾರ್ ಅವರು ಗೃಹ ಸಚಿವಾಲಯದಲ್ಲಿ ಜಮ್ಮು ಮತ್ತು ಕಾಶ್ಮೀರ ವಿಭಾಗದ ಮುಖ್ಯಸ್ಥರಾಗಿದ್ದರು. ವಿಶೇಷ ಸ್ಥಾನಮಾನ ಹಿಂಪಡೆದ ನಂತರ ಕಣಿವೆ ರಾಜ್ಯದ ಭದ್ರತಾ ಪರಿಸ್ಥಿತಿಯನ್ನು ನಿಭಾಯಿಸುವ ಜವಾಬ್ದಾರಿಯನ್ನೂ ನಿರ್ವಹಿಸಿದ್ದರು. ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಯುಪಿಎ ಆಡಳಿತಾವಧಿಯಲ್ಲಿ, 2007ರಿಂದ 2012ರವರೆಗೆ ರಕ್ಷಣಾ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿ (ರಕ್ಷಣಾ ಉತ್ಪಾದನೆ) ಕಾರ್ಯನಿರ್ವಹಿಸಿದ್ದರು.

ಕೇರಳದಲ್ಲಿದ್ದಾಗ ಹಣಕಾಸು ಸಂಪನ್ಮೂಲ, ಫಾಸ್ಟ್ ಟ್ರ್ಯಾಕ್ ಯೋಜನೆಗಳು, ಲೋಕೋಪಯೋಗಿ ಇಲಾಖೆ, ಸರ್ಕಾರಿ ಕಾರ್ಯಕ್ರಮಗಳ ಆಧುನೀಕರಣ ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳಂತಹ ವಿವಿಧ ಇಲಾಖೆಗಳನ್ನು ನಿರ್ವಹಿಸಿದ್ದರು.

ಅವರು ಕೇರಳ ರಾಜ್ಯ ಸಹಕಾರ ಬ್ಯಾಂಕ್ ಮತ್ತು ತಿರುವನಂತಪುರ ವಿಮಾನ ನಿಲ್ದಾಣ ಅಭಿವೃದ್ಧಿ ಸಂಘದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಅಲ್ಲದೇ, ನವದೆಹಲಿಯ ಕೇರಳ ಹೌಸ್‌ನ ರೆಸಿಡೆಂಟ್ ಕಮಿಷನರ್ ಆಗಿಯೂ ಸೇವೆ ಸಲ್ಲಿಸಿದ್ದರು.

ಎಸ್‌ಐಆರ್‌ನಿಂದ ಆರಂಭವಾದ ವಿವಾದ

2025ರಲ್ಲಿ ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ನಡೆಸಲು ಚುನಾವಣಾ ಆಯೋಗ ನಿರ್ಧರಿಸಿತು. ಇದಾದ ಬಳಿಕ ಹಲವು ರಾಜ್ಯಗಳಲ್ಲೂ ಎಸ್‌ಐಆರ್ ನಡೆಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಕರಡು ಮತದಾರರ ಪಟ್ಟಿಯಿಂದ ಕೋಟಿ ಕೋಟಿ ಮತದಾರರ ಹೆಸರುಗಳು ಹೊರಬಿದ್ದಿವೆ.

ಎಸ್‌ಐಆರ್‌ ವಿಚಾರವಾಗಿ ವಿರೋಧ ಪಕ್ಷಗಳು ಜ್ಞಾನೇಶ್ ಕುಮಾರ್ ಅವರ ಕಾರ್ಯವೈಖರಿಯನ್ನು ಪ್ರಶ್ನಿಸಿವೆ. ಬಿಜೆಪಿಗೆ ನೆರವಾಗಲು ಎಸ್‌ಐಆರ್ ನಡೆಸಲಾಗುತ್ತಿದೆ ಎಂದು ಆರೋಪಿಸಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಒಂದು ಹೆಜ್ಜೆ ಮುಂದೆ ಹೋಗಿ, ಜ್ಞಾನೇಶ್ ಕುಮಾರ್ ವಿರುದ್ಧ ಮತಗಳ್ಳತನದ ಆರೋಪ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಜ್ಞಾನೇಶ್ ಕುಮಾರ್, ರಾಹುಲ್ ಗಾಂಧಿ ಅವರು ತಮ್ಮ ಆರೋಪಗಳ ಬಗ್ಗೆ ಸಹಿ ಮಾಡಿದ ಅಫಿಡವಿಟ್ ನೀಡಬೇಕು ಅಥವಾ ಏಳು ದಿನಗಳೊಳಗೆ ದೇಶದ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದರು. ಆದರೆ, ರಾಹುಲ್ ಗಾಂಧಿ ಅದಕ್ಕೆ ಬಗ್ಗಲಿಲ್ಲ. ಜ್ಞಾನೇಶ್ ಕುಮಾರ್ ಕೂಡ ಆ ವಿಚಾರವನ್ನು ಮುಂದುವರಿಸಲಿಲ್ಲ.

ಇದಷ್ಟೇ ಅಲ್ಲ, ಚುನಾವಣೆ ಸಮಯದಲ್ಲಿ ಆಯೋಗದ ಕಚೇರಿಗಳು ವಿರೋಧ ಪಕ್ಷದ ನಾಯಕರಿಗೆ ಮುಕ್ತವಾಗಿದ್ದರೂ, ರಾಜ್ಯಸಭಾ ಚುನಾವಣೆಗೆ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕರಿಸಿದ್ದರ ವಿರುದ್ಧ ದೂರು ನೀಡಲು ಹೋದ ಕಾಂಗ್ರೆಸ್ ನಾಯಕರಿಗೆ ಕಚೇರಿ ಪ್ರವೇಶಿಸಲು ಬಿಡದಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗಿತ್ತು.

ಕುಮಾರ್‌ ನಡೆಗೆ ಆಕ್ರೋಶಗೊಂಡ ವಿರೋಧ ಪಕ್ಷಗಳು ಅವರನ್ನು ವಜಾಗೊಳಿಸುವಂತೆ ಸಂಸತ್ತಿನಲ್ಲಿ ನೋಟಿಸ್ ನೀಡಿದ್ದವು. ಆದರೆ, ಆ ನೋಟಿಸ್ ತಿರಸ್ಕೃತಗೊಂಡಿತ್ತು.

ಆಯುಕ್ತರ ನಡುವೆ ಭಿನ್ನಮತ ಎತ್ತಿತೋರಿಸಿದ ವರದಿ

ಎಸ್‌ಐಆರ್‌ಗೆ ಸಂಬಂಧಿಸಿದ ಆದೇಶಗಳನ್ನು ಜ್ಞಾನೇಶ್ ಕುಮಾರ್ ಅವರು ಏಕಪಕ್ಷೀಯವಾಗಿ ತೆಗೆದುಕೊಂಡಿದ್ದಾರೆ ಎಂದು ಚುನಾವಣಾ ಆಯುಕ್ತರಾದ ವಿವೇಕ್ ಜೋಶಿ ಮತ್ತು ಸುಖ್‌ಬೀರ್ ಸಿಂಗ್ ಸಂಧು ಕಳೆದ 10 ತಿಂಗಳಲ್ಲಿ 14 ಬಾರಿ ಆಕ್ಷೇಪ ದಾಖಲಿಸಿದ್ದರು ಎಂದು ಇಂಗ್ಲಿಷ್ ದೈನಿಕವೊಂದು ವರದಿ ಮಾಡಿದೆ.

ಈ ಬೆಳವಣಿಗೆ ಚುನಾವಣಾ ಆಯೋಗದಲ್ಲೇ ಭಿನ್ನಮತ ತಲೆದೋರಿರುವುದನ್ನು ಪರೋಕ್ಷವಾಗಿ ಸೂಚಿಸಿದೆ. ಇದರ ಬೆನ್ನಲ್ಲೇ ಜ್ಞಾನೇಶ್ ಕುಮಾರ್ ಅವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿವೆ. ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಕೂಡ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದೆ.

ಉನ್ನತ ಹುದ್ದೆಗಳಲ್ಲಿ ಕುಮಾರ್‌ ಕುಟುಂಬ ಸದಸ್ಯರು

ಜ್ಞಾನೇಶ್ ಕುಮಾರ್ ಅವರ ಕುಟುಂಬದಲ್ಲಿ ನಾಲ್ವರು ಐಎಎಸ್ ಅಧಿಕಾರಿಗಳು, ಇಬ್ಬರು ಐಆರ್‌ಎಸ್ ಅಧಿಕಾರಿಗಳು, ಒಬ್ಬ ಐಪಿಎಸ್ ಅಧಿಕಾರಿ ಇದ್ದಾರೆ ಎಂದು ವರದಿಯೊಂದು ತಿಳಿಸಿದೆ.

1988ರ ಕೇಡರ್‌ನ ಐಎಎಸ್ ಅಧಿಕಾರಿಯಾಗಿರುವ ಜ್ಞಾನೇಶ್ ಕುಮಾರ್ ಅವರು ಪ್ರಸ್ತುತ ದೇಶದ ಮುಖ್ಯ ಚುನಾವಣಾ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ತಂದೆ ಡಾ. ಸುಬೋಧ್ ಕುಮಾರ್ ಗುಪ್ತ ಅವರು ವೈದ್ಯಕೀಯ ಇಲಾಖೆಯ ಉನ್ನತ ಹುದ್ದೆಯಿಂದ ನಿವೃತ್ತರಾಗಿದ್ದಾರೆ.

ಜ್ಞಾನೇಶ್ ಕುಮಾರ್ ಅವರ ಹಿರಿಯ ಪುತ್ರಿ ಮೇಧಾ ರೂಪಂ ಉತ್ತರ ಪ್ರದೇಶ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದು, ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಪತಿ ಮನೀಷ್ ಬನ್ಸಲ್ ಕೂಡ ಐಎಎಸ್ ಅಧಿಕಾರಿಯಾಗಿದ್ದಾರೆ.

ಕಿರಿಯ ಪುತ್ರಿ ಅಭಿಶ್ರೀ ಇಂಡಿಯನ್ ರೆವೆನ್ಯೂ ಸರ್ವಿಸ್ (ಐಆರ್‌ಎಸ್) ಅಧಿಕಾರಿಯಾಗಿದ್ದು, ಆದಾಯ ತೆರಿಗೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಪತಿ ಅಕ್ಷಯ್ ಲಾಬ್ರು ಕೂಡ ಐಎಎಸ್ ಅಧಿಕಾರಿಯಾಗಿದ್ದಾರೆ.

ಕುಟುಂಬದ ಮತ್ತೊಬ್ಬ ಸದಸ್ಯರಾದ ಜ್ಞಾನೇಶ್ ಕುಮಾರ್ ಅವರ ಸಹೋದರ ಮನೀಷ್ ಕುಮಾರ್ ಐಆರ್‌ಎಸ್ ಅಧಿಕಾರಿಯಾಗಿದ್ದಾರೆ. ಅವರ ಸಹೋದರಿ ರೋಲಿ ಅವರ ಪತಿ ಉಪೇಂದ್ರ ಜೈನ್ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries