ಮುಂಬೈ: ಹಬ್ಬದ ಋತುವಿನ ಆರಂಭಕ್ಕೂ ಮುನ್ನವೇ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ವಾಣಿಜ್ಯ ನಗರಿ ಮುಂಬೈಯಲ್ಲಿ ಎಮ್ಮೆ ಹಾಲಿನ ದರವು ಲೀಟರ್‌ಗೆ ₹9 ಹೆಚ್ಚಾಗಿದ್ದು, ಪ್ರತಿ ಲೀಟರ್ ₹102ಕ್ಕೆ ತಲುಪಿದೆ.
ಗಣೇಶ ಚತುರ್ಥಿ, ನವರಾತ್ರಿ, ದೀಪಾವಳಿ, ಕ್ರಿಸ್‌ಮಸ್, ಮದುವೆ ಸೀಸನ್, ರಂಜಾನ್ ಸೇರಿದಂತೆ ಪ್ರಮುಖ ಹಬ್ಬಗಳಿಗಿಂತ ಮುಂಚಿತವಾಗಿ ದರ ಏರಿಕೆ ಮಾಡಲಾಗಿದೆ.
'ಎಮ್ಮೆಗಳ ಖರೀದಿ ವೆಚ್ಚದಲ್ಲಿನ ಶೇ 60ರಿಂದ 70 ರಷ್ಟು ಏರಿಕೆ ಮತ್ತು ಮೇವಿನ ಬೆಲೆಯಲ್ಲಿನ ಶೇ 25ರಷ್ಟು ಹೆಚ್ಚಳವನ್ನು ಸರಿದೂಗಿಸಲು ದರ ಪರಿಷ್ಕರಣೆ ಮಾಡಲಾಗಿದೆ. ಪರಿಷ್ಕೃತ ದರವು 2027ರ ಫೆಬ್ರುವರಿ 28ರವರೆಗೆ ಜಾರಿಯಲ್ಲಿರುತ್ತದೆ' ಎಂದು ಮುಂಬೈ ಹಾಲು ಉತ್ಪಾದಕರ ಕಲ್ಯಾಣ ಸಂಘ (ಎಂಎಂಪಿಎ) ತಿಳಿಸಿದೆ.
ಸೆಪ್ಟೆಂಬರ್ 1ರಿಂದ ಸಾಗಟು ದರ ಲೀಟರ್‌ಗೆ ₹9 ಏರಿಕೆಯಾಗಿರುವುದರಿಂದ, ಗ್ರಾಹಕರು ಮತ್ತು ಸ್ಥಳೀಯ ಬೇಡಿಕೆಗೆ ಅನುಗುಣವಾಗಿ ಚಿಲ್ಲರೆ ದರವು ಲೀಟರ್‌ಗೆ ₹115ರಿಂದ ₹125 ಅಥವಾ ಅದಕ್ಕಿಂತ ಹೆಚ್ಚಿನ ಮಟ್ಟಕ್ಕೆ ತಲುಪಬಹುದು ಎಂದು ಎಂಎಂಪಿಎ ಅಧ್ಯಕ್ಷ ಸಿ. ಕೆ. ಸಿಂಗ್ ತಿಳಿಸಿದ್ದಾರೆ.
ಡೈರಿಗಳು, ಚಿಲ್ಲರೆ ವ್ಯಾಪಾರಿಗಳ ಮೂಲಕ ತಾಜಾ ಎಮ್ಮೆ ಹಾಲನ್ನು ಪೂರೈಸುವ ಎಂಎಂಪಿಎಯ ದ್ವೈವಾರ್ಷಿಕ ಸಭೆಯಲ್ಲಿ ಸಾಗಟು ದರ ಹೆಚ್ಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
70 ವರ್ಷಗಳ ಇತಿಹಾಸ ಹೊಂದಿರುವ ಈ ಸಂಘದ ಇತಿಹಾಸದಲ್ಲೇ ಮೊದಲ ಬಾರಿ ಹೆಚ್ಚನ ದರ ಏರಿಕೆ ಮಾಡಿದಂತಾಗಿದೆ. ಇದಕ್ಕೂ ಮೊದಲು 2026ರ ಫೆಬ್ರುವರಿಯಲ್ಲಿ ಲೀಟರ್‌ಗೆ ₹2 ಏರಿಸಲಾಗಿತ್ತು.
ಮನೆಗಳು ಮತ್ತು ವಾಣಿಜ್ಯ ಮಳಿಗೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿಹಿತಿಂಡಿಗಳನ್ನು ತಯಾರಿಸುವ ಹಬ್ಬದ ಮತ್ತು ಮದುವೆ ಸೀಸನ್‌ನಲ್ಲಿ ಹಾಲಿನ ಬೇಡಿಕೆ ಸಾಮಾನ್ಯವಾಗಿ ಶೇ 35ರಿಂದ 40ರಷ್ಟು ಹೆಚ್ಚಾಗುತ್ತದೆ. ಈ ನಿರ್ಧಾರದಿಂದ ಹಾಲಿನ ಬೇಡಿಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಜತೆಗೆ, ಹಾಲು ಆಧಾರಿತ ಪಾನೀಯಗಳು ಸೇರಿದಂತೆ ಇತರ ಡೈರಿ ಉತ್ಪನ್ನಗಳ ಬೆಲೆಯೂ ಹೆಚ್ಚಳವಾಗುವ ಸಾಧ್ಯತೆಯಿದೆ.
ಎಮ್ಮೆಗಳ ನಿರ್ವಹಣೆ ಮತ್ತು ಮೇವಿನ ವೆಚ್ಚ ಹೆಚ್ಚಾಗಿರುವುದೇ ದರ ಏರಿಕೆಗೆ ಕಾರಣ ಎಂದು ಎಂಎಂಪಿಎಯ ಸದಸ್ಯರು ಹೇಳಿದ್ದಾರೆ.
ಮುಂಬೈನಲ್ಲಿ ಪ್ರತಿದಿನ 50 ಲಕ್ಷ ಲೀಟರ್‌ಗಿಂತಲೂ ಹೆಚ್ಚು ಎಮ್ಮೆ ಹಾಲು ಸಂಗ್ರಹವಾಗುತ್ತಿದ್ದು, ಅದರಲ್ಲಿ ಎಂಎಂಪಿಎಯ 7 ಲಕ್ಷ ಲೀಟರ್‌ಗಿಂತಲೂ ಹೆಚ್ಚು ಹಾಲನ್ನು ಪೂರೈಸುತ್ತದೆ ಎಂದು ವರದಿಯಾಗಿದೆ.

