ರಾಷ್ಟ್ರಪತಿ ಭವನದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲಿ ರಾಷ್ಟ್ರಪತಿಯವರ ಸುತ್ತ ಅನೇಕ ಭದ್ರತಾ ಸಿಬ್ಬಂದಿ, ಹಿರಿಯ ಅಧಿಕಾರಿಗಳು ನೆರೆದಿರುತ್ತಾರೆ. ಇವರೆಲ್ಲರ ಮಧ್ಯೆ, ಇತ್ತೀಚಿಗೆ ಯುವ ಸೇನಾ ಅಧಿಕಾರಿ ಮೇಜರ್ ನವ್ಯಾ ಶೇಖಾವತ್ ಗಮನ ಸೆಳೆದಿದ್ದಾರೆ.
ಮೇಜರ್ ನವ್ಯಾ ಶೇಖಾವತ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಎಡಿಸಿಯಾಗಿ (ಂiಜe-ಜe-ಅಚಿmಠಿ) ನೇಮಕಗೊಂಡಿದ್ದಾರೆ.
ಈ ಮೂಲಕ, ಭಾರತೀಯ ಸೇನೆಯಿಂದ ಈ ಹುದ್ದೆಗೆ ನೇಮಕಗೊಂಡ ಮೊದಲ ಮಹಿಳಾ ಅಧಿಕಾರಿಯಾಗಿದ್ದಾರೆ. ಈ ಹಿಂದೆ ಭಾರತೀಯ ನೌಕಾಪಡೆಯಿಂದ 2025ರಲ್ಲಿ ಲೆಫ್ಟಿನೆಂಟ್ ಕಮಾಂಡರ್ ಯಶಸ್ವಿ ಸೋಲಂಕಿ ಎಡಿಸಿಯಾಗಿ ನೇಮಕವಾದ ಮೊದಲ ಮಹಿಳಾ ಅಧಿಕಾರಿ ಎನಿಸಿಕೊಂಡಿದ್ದರು.
ಎಡಿಸಿ ಕೆಲಸವೇನು?
ರಾಷ್ಟ್ರಪತಿಗಳಿಗೆ ಸಾಮಾನ್ಯವಾಗಿ ಐವರು ಎಡಿಸಿಗಳಿರುತ್ತಾರೆ. ಇವರಲ್ಲಿ ಮೂವರು ಸೇನೆಯಿಂದ, ಒಬ್ಬರು ನೌಕಾಪಡೆಯಿಂದ ಮತ್ತು ಇನ್ನೊಬ್ಬರು ವಾಯುಸೇನೆಯಿಂದ ನೇಮಕಗೊಂಡಿರುತ್ತಾರೆ.
ಈ ಅಧಿಕಾರಿಗಳು ಅಧಿಕೃತ ಕಾರ್ಯಕ್ರಮಗಳಲ್ಲಿ ರಾಷ್ಟ್ರಪತಿಯವರು ಭಾಗವಹಿಸುವ ವೇಳೆ ಎಲ್ಲಾ ರೀತಿಯ ಭದ್ರತೆ ಒದಗಿಸುತ್ತಾರೆ. ಅಲ್ಲದೆ ರಾಷ್ಟ್ರಪತಿಗಳ ಸುರಕ್ಷತೆಯ ಕಾವಲುಗಾರರಾಗಿರುತ್ತಾರೆ.
ಯಾರು ನವ್ಯಾ ಶೇಖಾವತ್?
ನವ್ಯಾ ಅವರು ಕಂಬೈನ್ಡ್ ಡಿಫೆನ್ಸ್ ಸರ್ವಿಸ್ (ಸಿಡಿಎಸ್) ಪರೀಕ್ಷೆಯ ಮೂಲಕ ಸೇನೆಗೆ ಸೇರಿದ್ದರು. ಈ ಪರೀಕ್ಷೆಯನ್ನು ಕೇಂದ್ರ ಲೋಕಸೇವಾ ಆಯೋಗ ನಡೆಸುತ್ತದೆ.
ಮನಿಕಂಟ್ರೋಲ್ ವರದಿಯ ಪ್ರಕಾರ, ಚೆನ್ನೈನಲ್ಲಿ ತರಬೇತಿ ಪಡೆದ ನವ್ಯಾ, ಆರ್ಮಿ ಸರ್ವಿಸ್ ಕಾರ್ಪ್ಸ್(ಎಎಸ್‌ಸಿ)ಗೆ ನೇಮಕಗೊಂಡಿದ್ದರು. ಈ ಹುದ್ದೆಯಲ್ಲಿರುವವರು ಮುಖ್ಯವಾಗಿ ಸೇನಾ ಸರಕು ಸಾಗಣೆ ಸೇರಿದಂತೆ ಮಿಲಿಟರಿಗೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.
2021ರಲ್ಲಿ ನವ್ಯಾ ಅವರು ಮೇಜರ್ ಹುದ್ದೆಯನ್ನು ಪಡೆದುಕೊಂಡಿದ್ದರು. ಈಗ ರಾಷ್ಟ್ರಪತಿ ಎಡಿಸಿಯಾಗಿ ನೇಮಕಗೊಂಡಿದ್ದಾರೆ. ಈ ಮೂಲಕ ಐದು ವರ್ಷಗಳ ಸೇವಾ ಅವಧಿಯಲ್ಲೇ ಅತ್ಯುನ್ನತ ಹುದ್ದೆಯನ್ನು ಪಡೆದುಕೊಂಡಿದ್ದಾರೆ.
ಎರಡನೇ ಮಹಿಳಾ ಎಡಿಸಿ
ರಾಷ್ಟ್ರಪತಿಯವರ ಎಡಿಸಿಯಾಗಿ ನೇಮಕವಾದ ಮೊದಲ ಮಹಿಳಾ ಸೇನಾ ಅಧಿಕಾರಿ ಎನ್ನುವ ಹೆಗ್ಗಳಿಕೆಗೆ ನವ್ಯಾ ಶೇಖಾವತ್ ಪಾತ್ರರಾಗಿದ್ದಾರೆ. ಒಟ್ಟಾರೆಯಾಗಿ ಎಡಿಸಿ ಆದ ಎರಡನೇ ಮಹಿಳೆ ಇವರು.
ಈ ಹಿಂದೆ 2025ರಲ್ಲಿ ಯಶಸ್ವಿ ಸೋಲಂಕಿ ನೌಕಪಡೆಯಿಂದ ನೇಮಕಗೊಂಡು, ಮೊದಲ ಮಹಿಳಾ ಎಡಿಸಿಯಾಗಿ ಇತಿಹಾಸ ನಿರ್ಮಿಸಿದ್ದರು. ಇವರ ನೇಮಕದಿಂದ, ಭಾರತೀಯ ಸೇನೆಯಲ್ಲಿದ್ದ ಮಹಿಳಾ ಅಧಿಕಾರಿಗಳಿಗೂ ಅವಕಾಶದ ಬಾಗಿಲು ತೆರೆದಿತ್ತು.
1990ರ ದಶಕದ ಆರಂಭದಲ್ಲಿ 'ಶಾರ್ಟ್ ಸರ್ವಿಸ್ ಕಮಿಷನ್' ಮೂಲಕ ಮಹಿಳೆಯರು ಸೇನೆಯಲ್ಲಿ ಅಧಿಕಾರಿಗಳಾಗಿ ಸೇರಲು ಪ್ರಾರಂಭಿಸಿದರು. 2020ರಲ್ಲಿ, 'ಬಬಿತಾ ಪುನಿಯಾ' ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ನಂತರ, ಸರ್ಕಾರವು 'ಆರ್ಮಿ ಸರ್ವಿಸ್ ಕಾರ್ಪ್ಸ್' ಸೇರಿದಂತೆ ಸೇನೆಯ 10 ವಿಭಾಗಗಳಲ್ಲಿ ಮಹಿಳಾ ಅಧಿಕಾರಿಗಳಿಗೆ 'ಪರ್ಮನೆಂಟ್ ಕಮಿಷನ್' ನೀಡಲು ಅಧಿಕೃತ ಅನುಮೋದನೆ ನೀಡಿತು.

