ಪ್ಯಾರಿಸ್ (PTI): ಮೂರು ಹೊಸ ಒಪ್ಪಂದಗಳಿಗೆ ಸಹಿ ಹಾಕುವ ಮೂಲಕ ಬಾಹ್ಯಾಕಾಶ ವಲಯದಲ್ಲಿ ಸಹಕಾರ ವೃದ್ಧಿಗೆ ಭಾರತ ಮತ್ತು ಫ್ರಾನ್ಸ್ ದೇಶಗಳು ಅಡಿ ಇಟ್ಟಿವೆ.
ಉಪಗ್ರಹ ಉಡಾವಣೆ, ಬಾಹ್ಯಾಕಾಶ ಕಣ್ಗಾವಲು, ಸಣ್ಣ ಉಪಗ್ರಹ ತಂತ್ರಜ್ಞಾನಕ್ಕೆ ಸಂಬಂಧಿಸಿ 50 ಲಕ್ಷ ಯೂರೊ (₹55 ಕೋಟಿ) ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಪ್ಯಾರಿಸ್‌ನಲ್ಲಿ ಸೆ.9 ಮತ್ತು 10ರಂದು ನಡೆದ ಅಂತರರಾಷ್ಟ್ರೀಯ ಬಾಹ್ಯಾಕಾಶ ಶೃಂಗಸಭೆಯ ಮೊದಲ ಆವೃತ್ತಿಯಲ್ಲಿ ಈ ಕುರಿತು ಅಧಿಕೃತ ಘೋಷಣೆ ಹೊರಬಿದ್ದಿದೆ.
ಒಪ್ಪಂದದ ಪ್ರಕಾರ, 2027ರಿಂದ 2030ರ ಅವಧಿಯಲ್ಲಿ ಬಾಹ್ಯಾಕಾಶ ಕಣ್ಗಾವಲಿಗಾಗಿ 52 ಉಪಗ್ರಹಗಳ ಸಮೂಹವನ್ನು ರಚಿಸಲು ಭಾರತವು ಉದ್ದೇಶಿಸಿದ್ದು, ಅದಕ್ಕೆ ಬಳಕೆಯಾಗುವ ಸಂವಹನ ವ್ಯವಸ್ಥೆ, ಸ್ವಯಂ ನಿಯಂತ್ರಿತ ಪಥದರ್ಶಕ ಸಾಧನಗಳು, ಆಪ್ಟಿಕಲ್ ಪೇಲೋಡ್‌ಗಳು ಮತ್ತು ಸಂಪರ್ಕ ಕೇಂದ್ರಗಳನ್ನು ಫ್ರಾನ್ಸ್‌ನ ಸ್ಯಾಫ್ರನ್ ಸ್ಪೇಸ್ ಸಂಸ್ಥೆಯು ಭಾರತದ ಧ್ರುವ ಸ್ಪೇಸ್ ಸಂಸ್ಥೆಗೆ ಪೂರೈಸಲಿದೆ.
ಇನ್ನೊಂದು ಒಪ್ಪಂದದಲ್ಲಿ, ಫ್ರಾನ್ಸ್‌ನ ಉಡ್ಡಯನ ಸೇವಾದಾತ ಸಂಸ್ಥೆ ರೈಡ್ ಸಂಸ್ಥೆಯು, ಕಕ್ಷೆಯಲ್ಲಿ ಸುತ್ತಾಡುವ ಭಾರತದ ಮೊದಲ ದತ್ತಾಂಶ ಕೇಂದ್ರದ ವಿನ್ಯಾಸ ಮಾಡಿದ ಸಂಸ್ಥೆ ಎಂದು ಗುರುತಿಸಲಾದ 'ಟೇಕ್‌ಮಿಟುಆರ್ಬಿಟ್'ಗಾಗಿ ಎರಡು ಉಪಗ್ರಹಗಳನ್ನು ಉಡಾವಣೆ ಮಾಡಿಕೊಡಲಿದೆ.
ಫ್ರಾನ್ಸ್‌ನ ಯು-ಸ್ಪೇಸ್ ಮತ್ತು ಭಾರತದ ಆಯಕ್ಸಿಸ್‌ಕೇಡ್ಸ್ ನಡುವೆ ಏರ್ಪಟ್ಟ ಮತ್ತೊಂದು ಒಪ್ಪಂದದಲ್ಲಿ, ಭಾರತದ ಸಣ್ಣ ಉಪಗ್ರಹ ಮಾರುಕಟ್ಟೆಯನ್ನು ಅನ್ವೇಷಿಸುವುದು ಮತ್ತು ಹೆಚ್ಚುತ್ತಿರುವ ವಾಣಿಜ್ಯ-ಸಾಂಸ್ಥಿಕ ಬೇಡಿಕೆಗೆ ಸ್ಪಂದಿಸುವ ಕಾರ್ಯ ನಡೆಯಲಿದೆ.
ಸಾರ್ವಜನಿಕ ಹಿತಕ್ಕಾಗಿ ದತ್ತಾಂಶ: ಮೋದಿ
ನವದೆಹಲಿ (ಪಿಟಿಐ): 'ಅಂತರರಾಷ್ಟ್ರೀಯ ಕಾನೂನ ಆಶಯದಂತೆ ಸುರಕ್ಷಿತ, ಸುಭದ್ರ, ಸುಸ್ಥಿರ ಬಾಹ್ಯಾಕಾಶ ಕ್ಷೇತ್ರವನ್ನ ಭಾರತವು ಬೆಂಬಲಿಸುತ್ತದೆ. ವೈಜ್ಞಾನಿಕ ದತ್ತಾಂಶವು ಮುಕ್ತ ಮತ್ತು ಸಮಗ್ರವಾಗಿ ಸಾರ್ವಜನಿಕ ಹಿತ ಸಾಧಿಸಬೇಕು' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಶೃಂಗಸಭೆಯಲ್ಲಿ ವರ್ಚುವಲ್ ವೇದಿಕೆ ಮೂಲಕ ಮಾತನಾಡಿದ ಅವರು, 'ಇಸ್ರೊದ ತಂತ್ರಜ್ಞಾನಗಳು ಮತ್ತು ಪಾಲುದಾರಿಕೆಗಳು ಭಾರತಕ್ಕೆ ಮಾತ್ರವೇ ಅಲ್ಲ, ಇಡೀ ಜಗತ್ತಿಗಾಗಿ ಕೆಲಸ ಮಾಡುತ್ತವೆ' ಎಂದರು.
'2035ಕ್ಕೆ ಭಾರತದ್ದೇ ಬಾಹ್ಯಾಕಾಶ ನಿಲ್ದಾಣ ನಿರ್ಮಿಸುವ ಹಾಗೂ 2040ರ ಹೊತ್ತಿಗೆ ಭಾರತೀಯರನ್ನು ಚಂದ್ರನಿಗೆ ಕಳುಹಿಸುವ ಗುರಿ ಹೊಂದಲಾಗಿದೆ' ಎಂದರು.

