HEALTH TIPS

ಬಿಕ್ಕಟ್ಟಿನ ನೆರಳಲ್ಲಿ ಬ್ರಿಕ್ಸ್ ಶೃಂಗಸಭೆ: ಭಾರತದ ಆತಿಥ್ಯದಲ್ಲಿ ನಾಳೆಯಿಂದ ಆರಂಭ

ನವದೆಹಲಿ (PTI/ AFP): ಭಾರತ ಆತಿಥ್ಯ ವಹಿಸಿರುವ 18ನೇ 'ಬ್ರಿಕ್ಸ್‌' ಶೃಂಗಸಭೆಯು ಇಲ್ಲಿನ 'ಭಾರತ ಮಂಟಪ'ದಲ್ಲಿ ಸೆಪ್ಟೆಂಬರ್‌ 12 ಮತ್ತು 13ರಂದು ನಡೆಯಲಿದೆ. 


ಪಶ್ಚಿಮ ಏಷ್ಯಾ ಸಂಘರ್ಷ, ಹೊರ್ಮುಜ್‌ ಜಲಸಂಧಿ ಬಿಕ್ಕಟ್ಟು, ರಷ್ಯಾ-ಉಕ್ರೇನ್‌ ಯುದ್ಧದ ಪರಿಣಾಮದಿಂದ ಉಂಟಾಗಿರುವ ಆರ್ಥಿಕ ಅಸ್ಥಿರತೆ ಮತ್ತು ಜಾಗತಿಕ ಸವಾಲುಗಳ ಕುರಿತ ಚರ್ಚೆಗೆ ಈ ಬಾರಿಯ ಸಮ್ಮೇಳನ ನಿರ್ಣಾಯಕ ವೇದಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌, ಇರಾನ್ ಅಧ್ಯಕ್ಷ ಮಸೂದ್‌ ಪೆಜೆಶ್ಕಿಯಾನ್, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌, ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ, ಇಂಡೊನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ ಸೇರಿ 'ಬ್ರಿಕ್ಸ್‌' ಒಕ್ಕೂಟದ 11 ಸದಸ್ಯ ರಾಷ್ಟ್ರಗಳ ಹಲವು ನಾಯಕರು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

'ಜಾಗತಿಕ ವ್ಯಾಪಾರ ಉದ್ವಿಗ್ನತೆಯನ್ನು ಸಮತೋಲಿತ ಹಾದಿಗೆ ತರುವ ನಿಟ್ಟಿನಲ್ಲಿ ಭಾರತವು 'ಬ್ರಿಕ್ಸ್‌' ಶೃಂಗಸಭೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಯೋಜನೆ ರೂಪಿಸಿದೆ. ಇಂಧನ ಭದ್ರತೆ ಸೇರಿದಂತೆ ದಕ್ಷಿಣದ ಅಭಿವೃದ್ಧಿ ಆದ್ಯತೆಗಳನ್ನು ಪ್ರತಿಪಾದಿಸಲು ದೇಶವು ಈ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಳ್ಳಲಿದೆ' ಎಂದು ಅಧಿಕಾರಿಗಳು ಹೇಳಿದ್ದಾರೆ.

'ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆ' ಎಂಬ ನಾಲ್ಕು ಆಧಾರಸ್ತಂಭಗಳ ಮೇಲೆ ಈ ಬಾರಿಯ ಬ್ರಿಕ್ಸ್‌ ಸಭೆಯ ಅಧ್ಯಕ್ಷತೆಯನ್ನು ಭಾರತ ಅಲಂಕರಿಸಿದೆ. ಇದು 'ಮಾನವೀಯತೆ ಮೊದಲು' ಎಂಬ ಆಶಯದಲ್ಲಿ ಜನಕೇಂದ್ರಿತ ವಿಧಾನದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ' ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ಹೇಳಿದೆ.

ಭಾರತವು 'ಬ್ರಿಕ್ಸ್‌'ನ ಸ್ಥಾಪಕ ಸದಸ್ಯ ರಾಷ್ಟ್ರವಾಗಿದ್ದು, ಈ ಹಿಂದೆ 2012, 2016 ಮತ್ತು 2021ರಲ್ಲಿ ಅಧ್ಯಕ್ಷತೆಯನ್ನು ವಹಿಸಿದೆ. ಜಾಗತಿಕ ಆರ್ಥಿಕತೆಯು ಪ್ರತಿಕೂಲ ಪರಿಣಾಮಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಭಾರತವು 'ಬ್ರಿಕ್ಸ್‌' ಶೃಂಗಸಭೆಯ ಆತಿಥ್ಯ ವಹಿಸಿರುವುದು ಸದಸ್ಯ ರಾಷ್ಟ್ರಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ ಎಂದು ಮೂಲಗಳು ಹೇಳಿವೆ.

ವಿಶ್ವದ ಪ್ರಮುಖ 11 ಆರ್ಥಿಕ ಶಕ್ತಿಗಳನ್ನು ಒಗ್ಗೂಡಿಸುವ ಮೂಲಕ 'ಬ್ರಿಕ್ಸ್' ಇತ್ತೀಚಿನ ವರ್ಷಗಳಲ್ಲಿ ಪ್ರಭಾವಶಾಲಿ ಗುಂಪಾಗಿ ಹೊರಹೊಮ್ಮಿದೆ. ಈ ಒಕ್ಕೂಟವು ಜಾಗತಿಕ ಜನಸಂಖ್ಯೆಯ ಶೇ 49.5ರಷ್ಟು, ಜಾಗತಿಕ ಜಿಡಿಪಿಯ ಶೇ 40ರಷ್ಟು ಮತ್ತು ಜಾಗತಿಕ ವ್ಯಾಪಾರದ ಶೇ 26ರಷ್ಟನ್ನು ಪ್ರತಿನಿಧಿಸುತ್ತದೆ.

7 ವರ್ಷಗಳ ಬಳಿಕ ಜಿನ್‌ಪಿಂಗ್ ಭಾರತ ಭೇಟಿ

ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರು ಏಳು ವರ್ಷಗಳ ಬಳಿಕ ಮೊದಲ ಬಾರಿ ಭಾರತಕ್ಕೆ ಭೇಟಿ ನೀಡುತ್ತಿದ್ದು ಭಾರತ-ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧ ಸುಧಾರಣೆ ನಿಟ್ಟಿನಲ್ಲಿ ಪ್ರಧಾನಿ ಮೋದಿ ಮತ್ತು ಜಿನ್‌ಪಿಂಗ್‌ ನಡುವಿನ ಮಾತುಕತೆ ಮಹತ್ವದ್ದಾಗಲಿದೆ ಎಂದು ಮೂಲಗಳು ಹೇಳಿವೆ. ಗಡಿಯಲ್ಲಿ 2019ರಲ್ಲಿ ನಡೆದ ಸೇನಾ ಸಂಘರ್ಷದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಹಳಸಿತ್ತು. ಇತ್ತೀಚಿನ ವರ್ಷಗಳಲ್ಲಿ ವಿಮಾನಯಾನ ವೀಸಾ ಸೌಲಭ್ಯ ಸೇರಿ ಏಷ್ಯಾದ ಎರಡು ಪ್ರಮುಖ ಆರ್ಥಿಕ ಶಕ್ತಿಗಳ ನಡುವಿನ ಸಂಬಂಧಗಳಲ್ಲಿ ಸುಧಾರಣೆ ಕಂಡುಬರುತ್ತಿದೆ. ಮೋದಿ ಮತ್ತು ಜಿನ್‌ಪಿಂಗ್‌ ನಡುವೆ ಕೊನೆಯ ಬಾರಿ 2025ರಲ್ಲಿ ಟಿಯಾಂಜಿನ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ದ್ವಿಪಕ್ಷೀಯ ಮಾತುಕತೆ ನಡೆದಿತ್ತು. ವ್ಲಾದಿಮಿರ್‌ ಪುಟಿನ್‌ ಮತ್ತು ಪೆಜೆಶ್ಕಿಯಾನ್ ಅವರು ಶುಕ್ರವಾರ ನವದೆಹಲಿಗೆ ಆಗಮಿಸಲಿದ್ದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಲಿದ್ದಾರೆ. ಇರಾನ್‌ ಒತ್ತಡ ಸಾಧ್ಯತೆ: ಇರಾನ್‌ ಅಧ್ಯಕ್ಷರಾದ ಬಳಿಕ ಪೆಜೆಶ್ಕಿಯಾನ್ ಅವರ ಮೊದಲ ಭಾರತ ಭೇಟಿ ಇದಾಗಿದೆ. ಇರಾನ್‌ ಮೇಲಿನ ಅಮೆರಿಕದ ಮಿಲಿಟರಿ ದಾಳಿಯ ವಿರುದ್ಧ ಬಲವಾದ ನಿಲುವನ್ನು ತೆಗೆದುಕೊಳ್ಳುವಂತೆ ಅವರು 'ಬ್ರಿಕ್ಸ್‌' ಸಭೆಯನ್ನು ಒತ್ತಾಯಿಸುವ ನಿರೀಕ್ಷೆ ಇದೆ. ಯುಎಇ ತನ್ನ ಪ್ರಿನ್ಸ್‌ ಶೇಖ್‌ ಖಲೀದ್‌ ಬಿನ್‌ ಮಹಮದ್‌ ಬಿನ್‌ ಜಾಯೆದ್‌ ಅಲ್‌ ನಹ್ಯಾನ್‌ ಅವರನ್ನು ಸಭೆಗೆ ಕಳುಹಿಸುವುದಾಗಿ ಹೇಳಿದೆ. ಆದರೆ ಸೌದಿ ಅರೇಬಿಯಾ ತನ್ನ ದೇಶವನ್ನು ಪ್ರತಿನಿಧಿಸುವವರು ಯಾರು ಎಂಬುದನ್ನು ಸ್ಪಷ್ಟಪಡಿಸಿಲ್ಲ.

ರಾಷ್ಟ್ರ ರಾಜಧಾನಿಯಲ್ಲಿ ಬಿಗಿ ಭದ್ರತೆ

ಬ್ರಿಕ್ಸ್‌ ಶೃಂಗಸಭೆಯ ಅಂಗವಾಗಿ ರಾಷ್ಟ್ರ ರಾಜಧಾನಿಯಲ್ಲಿ ಇದೇ 14ರವರೆಗೆ ವಿದೇಶಿ ಗಣ್ಯರ ಸಂಚಾರ ಇರುವುದರಿಂದ ಬಹುಹಂತದ ಭದ್ರತೆಗಾಗಿ 15 ಸಾವಿರ ಸಿಬ್ಬಂದಿ ಅರೆಸೇನಾ ಪಡೆಯ 200 ತುಕಡಿಗಳನ್ನು ನಿಯೋಜಿಸಲಾಗಿದೆ. 'ಸಾರ್ವಜನಿಕರಿಗೆ ಕನಿಷ್ಠ ತೊಂದರೆ ಮತ್ತು ಗಣ್ಯರಿಗೆ ಗರಿಷ್ಠ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಕಾನೂನು ಸುವ್ಯವಸ್ಥೆ ಭದ್ರತೆ ಮತ್ತು ವಾಹನ ದಟ್ಟಣೆ ನಿರ್ವಹಣೆಗಾಗಿ ದೊಡ್ಡ ಪ್ರಮಾಣದಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ' ಎಂದು ವಿಶೇಷ ಪೊಲೀಸ್‌ ಆಯುಕ್ತ ಮನೀಷ್‌ ಕುಮಾರ್ ಅಗರ್‌ವಾಲ್‌ ತಿಳಿಸಿದ್ದಾರೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries