ನವದೆಹಲಿ: ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರ ಪ್ರಯಾಣಕ್ಕಾಗಿ 'ಏರ್ ಚೀನಾ' ಸಂಸ್ಥೆಯ ಬೋಯಿಂಗ್ 747-8 ವಿಮಾನವನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮಾರ್ಪಡಿಸಲಾಗಿದೆ.
2014ರಲ್ಲಿ ಪ್ರಯಾಣಿಕರ ವಿಮಾನವಾಗಿ 'ಏರ್ ಚೀನಾ' ತನ್ನ ಪ್ರಯಾಣ ಆರಂಭಿಸಿತು. ನಂತರ ಈ ವಿಮಾನವನ್ನು ವಾಣಿಜ್ಯ ಸೇವೆಯಿಂದ ಹಿಂಪಡೆದು ಅತ್ಯುನ್ನತ ಭದ್ರತಾ ವ್ಯವಸ್ಥೆ ಹಾಗೂ ವಿಐಪಿ ಸೌಲಭ್ಯಗಳನ್ನು ಅಳವಡಿಸಲಾಯಿತು.
2016ರಿಂದ 'ಏರ್ ಚೀನಾ' ಬೋಯಿಂಗ್ ವಿಮಾನ ಅಧ್ಯಕ್ಷರ ಅಧಿಕೃತ ವಿಮಾನವಾಯಿತು.
ಈ ವಿಮಾನ 76.4 ಮೀಟರ್ ಉದ್ದವಿದ್ದು ನಾಲ್ಕು ಜನರಲ್ ಎಲೆಕ್ಟ್ರಿಕ್ ಟರ್ಬೋಫ್ಯಾನ್ ಎಂಜಿನ್‌ಗಳನ್ನು ಹೊಂದಿದೆ. ಗಂಟೆಗೆ ಸುಮಾರು 982 ಕಿ.ಮೀ. ವೇಗದಲ್ಲಿ ಚಲಿಸಬಲ್ಲದು ಎಂದು ಏರ್ ಚೀನಾ ಹೇಳಿದೆ.
ಈ ವಿಮಾನದಲ್ಲಿ ಉಪಗ್ರಹ ಆಧಾರಿತ ಎನ್‌ಕ್ರಿಪ್ಟೆಡ್ ಸಂಪರ್ಕ ವ್ಯವಸ್ಥೆಯಿದೆ. ಇದರಿಂದಾಗಿ ಅಧ್ಯಕ್ಷರು ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ತಮ್ಮ ಸೇನೆ ಮತ್ತು ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿರಬಹುದು. ವಿಮಾನದ ಮೇಲಿನ ದಾಳಿಯನ್ನು ಮೊದಲೇ ಪತ್ತೆಹಚ್ಚುವ ವ್ಯವಸ್ಥೆ, ಕ್ಷಿಪಣಿ ನಿರೋಧಕ ತಂತ್ರಜ್ಞಾನ ಹಾಗೂ ಎಲೆಕ್ಟ್ರೋಮ್ಯಾಗ್ನೆಟಿಕ್ ಪಲ್ಸ್ (ಇಎಂಪಿ) ನಿರೋಧಕ ಕವಚಗಳನ್ನು ಅಳವಡಿಸಲಾಗಿದೆ. ಇಎಂಪಿ ನಿರೋಧಕವು ಬಾಂಬ್, ಕ್ಷಿಪಣಿ ದಾಳಿಯ ಸಂದರ್ಭದಲ್ಲಿ ವಿಮಾನದ ಸಂಪರ್ಕ ವ್ಯವಸ್ಥೆ ಹಾಳಾಗದಂತೆ ರಕ್ಷಿಸುತ್ತದೆ.
ಈ ಅಧಿಕೃತ ವಿಮಾನವನ್ನು ಬಳಸಲು ಚೀನಾ ಅಧ್ಯಕ್ಷರಿಗೆ ಹಾಗೂ ಪ್ರಧಾನಿಗೆ ಮಾತ್ರ ಅವಕಾಶವಿದೆ. ಚೀನಾದ ಇತರ ರಾಜ್ಯಗಳ ನಾಯಕರು 'ಏರ್ ಚೀನಾ' ಸಂಸ್ಥೆಯ ಚಾರ್ಟರ್ಡ್ ವಿಮಾನಗಳನ್ನು ಬಳಸುತ್ತಾರೆ.
ಏರ್ ಚೀನಾ ವಿಮಾನವನ್ನು ಬಳಸುವ ಮುನ್ನ ಚೀನಾ ನಾಯಕರು ಸಾಮಾನ್ಯ ವಾಣಿಜ್ಯ ಬೋಯಿಂಗ್ ವಿಮಾನಗಳಲ್ಲೇ ಪ್ರಯಾಣಿಸುತ್ತಿದ್ದರು. ವಿದೇಶ ಪ್ರವಾಸಕ್ಕೆ 20 ದಿನ ಮುಂಚಿತವಾಗಿ ಚೀನಾ ವಾಯುಪಡೆಯು ಆ ವಿಮಾನಗಳಲ್ಲಿ ತಾತ್ಕಾಲಿಕ ವಿಐಪಿ ಕ್ಯಾಬಿನ್, ಸೋಫಾ ಹಾಗೂ ಹಾಸಿಗೆಗಳನ್ನು ಅಳವಡಿಸುತ್ತಿತ್ತು. ಪ್ರವಾಸ ಮುಗಿದ ತಕ್ಷಣ ಅದನ್ನು ಮರಳಿ ಪ್ರಯಾಣಿಕರ ವಿಮಾನವಾಗಿ ಪರಿವರ್ತಿಸಲಾಗುತ್ತಿತ್ತು.
2001ರಲ್ಲಿ ಚೀನಾದ ಅಂದಿನ ಅಧ್ಯಕ್ಷ ಜಿಯಾಂಗ್ ಝೆಮಿನ್ ಅಮೆರಿಕಕ್ಕೆ ಭೇಟಿ ಕೊಟ್ಟಿದ್ದರು. ಈ ವೇಳೆ ಅಮೆರಿಕ ಅವರಿಗಾಗಿ 'ಏರ್ ಫೋರ್ಸ್ ಒನ್' ಮಾದರಿಯಲ್ಲಿ ವಿಮಾನವೊಂದನ್ನು ಸಿದ್ಧಪಡಿಸಿಕೊಟ್ಟಿತ್ತು. ಅವರು ಅಲ್ಲಿಂದ ಬೀಜಿಂಗ್‌ಗೆ ಬಂದಿಳಿದ ಬಳಿಕ ಇಲ್ಲಿನ ವಾಯುಪಡೆ ಅಧಿಕಾರಿಗಳು ವಿಮಾನವನ್ನು ತಪಾಸಣೆ ಮಾಡಿದ್ದರು. ಈ ವೇಳೆ 27 ಗೂಢಚರ್ಯೆ ಸಾಧನಗಳನ್ನು ಅಡಗಿಸಿಟ್ಟಿರುವುದು ಪತ್ತೆಯಾಗಿತ್ತು.
ಈ ಘಟನೆಯನ್ನು ಚೀನಾ ಅಧಿಕೃತವಾಗಿ ದೃಢೀಕರಿಸದಿದ್ದರೂ, ಅಮೆರಿಕ ದೇಶಕ್ಕೆ ಚೀನಾದ ಮೇಲೆ ಗೂಢಚರ್ಯೆ ನಡೆಸುವ ಅಗತ್ಯವಿರಲಿಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ಆ ಬಳಿಕ ಪ್ರತಿಕ್ರಿಯಿಸಿದ್ದರು.

