ನವದೆಹಲಿ: ಶ್ರೀಲಂಕಾದ ಆಡಳಿತಾರೂಢ ಪಕ್ಷವಾದ ಜನತಾ ವಿಮುಕ್ತಿ ಪೆರಮುನದ(ಜೆವಿಪಿ) 5 ಜನರ ನಿಯೋಗವು ನಾಲ್ಕು ದಿನಗಳ ಕಾಲ ಭಾರತದ ಪ್ರವಾಸ ಮಾಡಲಿದೆ. ಈ ವೇಳೆ ವಿದೇಶಾಂಗ ಸಚಿವ ಎಸ್. ಜೈಶಂಕರ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರನ್ನು ಭೇಟಿಯಾಗಲಿದೆ ಎಂದು ಭಾರತೀಯ ಜನತಾ ಪಾರ್ಟಿ(ಬಿಜೆಪಿ) ತಿಳಿಸಿದೆ.
ಜೆವಿಪಿ ಪ್ರಧಾನ ಕಾರ್ಯದರ್ಶಿ ತಿಲ್ವಿನ್ ಸಿಲ್ವಾ ನೇತೃತ್ವದ ನಿಯೋಗವು 'ಬಿಜೆಪಿ ತಿಳಿಯಿರಿ' ಅಭಿಮಾನದ ಭಾಗವಾಗಿ ಸೆ.27ರಂದು ಭಾರತಕ್ಕೆ ಭೇಟಿ ನೀಡಲಿದೆ ಎಂದು ಮಾಹಿತಿ ನೀಡಿದೆ.
ಜೆವಿಪಿ ಕೇಂದ್ರ ಸಮಿತಿ ಸದಸ್ಯೆ ಚಂದ್ರಿಕಾ ಅಧಿಕಾರಿ, ಸಂಸದ ಅಬೂಬಕ್ಕರ್ ಆತಂಬಾವ, ಜಿಲ್ಲಾ ಸಮಿತಿ ಸದಸ್ಯ ಕಬಿಲನ್ ಸುಂತಾರಮೂರ್ತಿ, ಪಕ್ಷದ ಅಂತರರಾಷ್ಟ್ರೀಯ ವಿಭಾಗದ ಸದಸ್ಯೆ ಕಲ್ಪನಾ ಮಧುಭಾಷಿಣಿ ಅವರು ಕೂಡ ಈ ನಿಯೋಗದಲ್ಲಿದ್ದಾರೆ. ಇವರೆಲ್ಲರೂ ಸೆ.27ರಂದು ಭಾರತಕ್ಕೆ ಆಗಮಿಸಲಿದ್ದು, ಅ.1ರವರೆಗೆ ಇಲ್ಲಿ ಇರಲಿದ್ದಾರೆ ಎಂದು ತಿಳಿಸಿದೆ.
ಈ ಕುರಿತು ಮಾತನಾಡಿರುವ ಬಿಜೆಪಿ ವಿದೇಶಾಂಗ ವ್ಯವಹಾರಗಳ ವಿಭಾಗದ ಉಸ್ತುವಾರಿ ವಿಜಯ್ ಚೌಥೈವಾಲೆ, 'ನಮ್ಮ ಆಹ್ವಾನದ ಮೇರೆಗೆ ಶ್ರೀಲಂಕಾದ ನಿಯೋಗವು ಭಾರತಕ್ಕೆ ಆಗಮಿಸುತ್ತಿದೆ. ಈ ವೇಳೆ ಅವರು ಪಕ್ಷದ ಪ್ರಮುಖ ನಾಯಕರನ್ನು ಭೇಟಿ ಮಾಡಲಿದ್ದು, ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಪಕ್ಷದ ಮುಖ್ಯ ಕಚೇರಿ, ದೆಹಲಿ ಬಿಜೆಪಿ ಕಚೇರಿ ಮತ್ತು ಸಂಸತ್ ಭವನಕ್ಕೆ ಭೇಟಿ ನೀಡಲಿದ್ದಾರೆ' ಎಂದು ತಿಳಿಸಿದ್ದಾರೆ.
'ಬಿಜೆಪಿ-ವಿಜೆಪಿ ನಡುವಿನ ಸಂಪರ್ಕವನ್ನು ಬಲಪಡಿಸುವುದು ಮತ್ತು ಎರಡು ರಾಜಕೀಯ ಪಕ್ಷಗಳ ನಡುವಿನ ಸಂಬಂಧಗಳನ್ನು ಬಲಪಡಿಸುವ ಉದ್ದೇಶದಿಂದ ಈ ಭೇಟಿ ಮುಖ್ಯವಾಗಿದೆ' ಎಂದು ಹೇಳಿದ್ದಾರೆ.

