ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ನಡೆದ ವಾಗ್ವಾದದ ಬಳಿಕ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‍ಎಫ್) ಯೋಧನೊಬ್ಬ ಸಹೋದ್ಯೋಗಿಗಳ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು, ಹಿರಿಯ ಅಧಿಕಾರಿ ಸೇರಿದಂತೆ ನಾಲ್ವರು ಸಿಬ್ಬಂದಿ ಮೃತಪಟ್ಟಿದ್ದಾರೆ.
ಕಥುವಾದ ಜಲವಿದ್ಯುತ್ ಯೋಜನೆ ಘಟಕದಲ್ಲಿ ನಿಯೋಜನೆಗೊಂಡಿದ್ದ ಭದ್ರತಾ ಪಡೆಗಳ ನಡುವೆ ಮಂಗಳವಾರ ಸಂಜೆ 6.40ರ ಸುಮಾರಿಗೆ ಮಾತಿನ ಚಕಮಕಿ ನಡೆದ ಬಳಿಕ ಸಿಐಎಸ್‍ಎಫ್ ಹೆಡ್ ಕಾನ್‌ಸ್ಟೆಬಲ್ ಅವಧೇಶ್ ಕುಮಾರ್ ಸಿಂಗ್ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಾವಿ ನದಿಯ ಉಪನದಿಗೆ ಅಡ್ಡಲಾಗಿ ನಿರ್ಮಿಸಲಾದ ಜಲವಿದ್ಯುತ್ ಘಟಕದ ಭದ್ರತೆಗಾಗಿ ಈ ಘಟಕವನ್ನು ನಿಯೋಜಿಸಲಾಗಿತ್ತು.
ದಾಳಿಯಲ್ಲಿ ಸಹಾಯಕ ಕಮಾಂಡೆಂಟ್ ಅಂಕಿತ್ ಕುಮಾರ್ ಪಾಂಡೆ, ಸಬ್ ಇನ್‌ಸ್ಪೆಕ್ಟರ್ ಲಕ್ಷ್ಮಣ್ ಸಿಂಗ್, ಕಾನ್‌ಸ್ಟೆಬಲ್ ರಫೀಕ್ ಅಹಮದ್, ಸಂದೀಪ್ ಕುಮಾರ್ ಮೃತಪಟ್ಟ ದುರ್ದೈವಿಗಳು.
ಆರೋಪಿ ಅವಧೇಶ್ ಕುಮಾರ್ ಸಿಂಗ್ ತನ್ನ ಬಳಿಯಿದ್ದ ಎಕೆ-47 ರೈಫಲ್‌ನಿಂದ ಕಚೇರಿ ಆವರಣದಲ್ಲಿ ದಿಢೀರ್ ಗುಂಡಿನ ದಾಳಿ ನಡೆಸಿದ್ದಾನೆ. ದಾಳಿಯ ವೇಳೆ ಆತನ ಬಳಿ ಜೀವಂತ ಗುಂಡುಗಳಿದ್ದವು ಎಂದು ಸಿಐಎಸ್‌ಎಫ್ ತಿಳಿಸಿದೆ.
ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ನಾಲ್ವರನ್ನು ಹಿಮಾಚಲ ಪ್ರದೇಶದ ಎನ್‌ಎಚ್‌ಪಿಸಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಆರೋಪಿ ಅವಧೇಶ್ ಕುಮಾರ್ ಸಿಂಗ್‌ನನ್ನು ವಶಕ್ಕೆ ಪಡೆದಿದ್ದಾರೆ.

