ಮುಂಬೈ (PTI): ದೇಶದ ಫಿನ್‌ಟೆಕ್ ವ್ಯವಸ್ಥೆಯ ಭಾಗವಾಗಿರುವವರು ಏಕೀಕೃತ ಪಾವತಿ ವ್ಯವಸ್ಥೆಯ (ಯುಪಿಐ) ವ್ಯಾಪ್ತಿಯನ್ನು ಜಾಗತಿಕ ಮಟ್ಟದಲ್ಲಿಯೂ ಹೆಚ್ಚಿಸಬೇಕು, ಅದನ್ನು ಬೇರೆ ದೇಶಗಳ ವ್ಯವಸ್ಥೆಗಳ ಜೊತೆ ಬೆಸೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಹೀಗೆ ಮಾಡುವ ಮೂಲಕ, ವಿದೇಶಗಳಲ್ಲಿ ವಾಸಿಸುತ್ತಿರುವ ಭಾರತ ಮೂಲದ ವರು ತಾಯ್ನಾಡಿಗೆ ಹಣ ರವಾನೆ ಮಾಡು ವಾಗ ಆಗುವ ವೆಚ್ಚವನ್ನು ತಗ್ಗಿಸಲು ನೆರ ವಾಗಬೇಕು ಎಂದು ಅವರು ಹೇಳಿದ್ದಾರೆ.
ಜಾಗತಿಕ ಫಿನ್‌ಟೆಕ್ ಉತ್ಸವದ ಏಳನೆಯ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ, 'ಯುಪಿಐ ವ್ಯವಸ್ಥೆಯು ಈಗ 11 ದೇಶಗಳಲ್ಲಿ ಬಳಕೆಗೆ ಬಂದಿದೆ. ಸಿಂಗಪುರದಲ್ಲಿ ಸ್ಥಳೀಯ ವ್ಯವಸ್ಥೆಯ ಜೊತೆ ಸಂಪರ್ಕ ಹೊಂದಿದೆ' ಎಂದಿದ್ದಾರೆ.
ಕಳೆದ ದಶಕದಲ್ಲಿ ಆದ ಸಾಧನೆಯನ್ನು ಕಂಡು ವಿರಮಿಸಬಾರದು ಎಂದು ಫಿನ್‌ಟೆಕ್ (ಹಣಕಾಸು ತಂತ್ರಜ್ಞಾನ) ವ್ಯವಸ್ಥೆಯ ಪಾಲುದಾರರಿಗೆ ಕಿವಿಮಾತು ಹೇಳಿದ ಅವರು, ಯುಪಿಐ ವ್ಯಾಪ್ತಿಯನ್ನು ಹಿಗ್ಗಿಸುವುದು ಮುಂದಿನ ಗುರಿ ಆಗಬೇಕು ಎಂದು ಕರೆ ನೀಡಿದ್ದಾರೆ.
ಭಾರತ ಮೂಲದವರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಯಾಗಿರುವ ದೇಶಗಳಿಗೆ, ಭಾರತದ ಜೊತೆ ಹೆಚ್ಚು ವ್ಯಾಪಾರ ವಹಿವಾಟು ನಡೆಸುವ ದೇಶಗಳಿಗೆ, ಭಾರತದ ಜೊತೆ ಪಾಲುದಾರಿಕೆ ಹೊಂದಲು ಆಸಕ್ತಿ ತೋರುವ ದೇಶಗಳಿಗೆ ಆದ್ಯತೆ ನೀಡಬೇಕು ಎಂದು ಅವರು ಹೇಳಿದ್ದಾರೆ.
'ಭಾರತೀಯರು ಬೇರೆ ದೇಶಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತಕ್ಕೆ ಹಣ ವರ್ಗಾವಣೆ ಮಾಡುವಲ್ಲಿ ಅವರು ಮುಂದಿದ್ದಾರೆ. ಅವರು ವರ್ಗಾವಣೆ ಮಾಡುವ ಹಣದಲ್ಲಿ ಒಂದು ಪಾಲು ವಹಿವಾಟು ವೆಚ್ಚದ ರೂಪದಲ್ಲಿ ಖರ್ಚಾ ಗುತ್ತದೆ. ಈ ವೆಚ್ಚದಲ್ಲಿ ಉಳಿತಾಯ ಮಾಡಲು ಯುಪಿಐ ಸಹಾಯ ಮಾಡು ತ್ತದೆ. ಅಲ್ಲದೆ, ಅವರು ಕಳಿಸುವ ಹಣವು ಕುಟುಂಬಗಳಿಗೆ ತ್ವರಿತವಾಗಿ ತಲುಪುತ್ತದೆ' ಎಂದು ಪ್ರಧಾನಿ ಹೇಳಿದ್ದಾರೆ.
ಯುಪಿಐ ಎಂಬುದು ತಂತ್ರಜ್ಞಾನಕ್ಕೆ ಸಂಬಂಧಿಸಿದ ಯಶೋಗಾಥೆ ಮಾತ್ರವೇ ಅಲ್ಲ, ಅದು ನಾಗರಿಕತೆಯೊಂದರ ಕಥೆಯೂ ಹೌದು ಎಂದು ಫ್ರಾನ್ಸ್‌ನ ಅಧ್ಯಕ್ಷ ಎಮ್ಯಾನ್ಯುವಲ್ ಮ್ಯಾಕ್ರನ್ ಹೇಳಿದ್ದನ್ನು ಮೋದಿ ಪುನರುಚ್ಚರಿಸಿದರು.

