ಮುಂಬೈ: ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಧಾರ್ಮಿಕ ಕೇಂದ್ರವಾಗಿರುವ ಇಂದಿನ 'ನಾಲಾಸೋಪಾರಾ ' ಹಿಂದೆ ಸೋಪಾರಾ ಎಂದೇ ಜಗತ್ಪ್ರಸಿದ್ಧಿಯಾಗಿತ್ತು. ಅಲ್ಲದೇ ಪಶ್ಚಿಮ ಭಾರತವನ್ನು ಅರೇಬಿಯಾ, ಮೆಡಿಟರೇನಿಯನ್ ಸಮುದ್ರ ಮತ್ತು ಆಗ್ನೇಯ ಏಷ್ಯಾದೊಂದಿಗೆ ಸಂಪರ್ಕಿಸುವ ಸಮೃದ್ಧ ಬಂದರು ನಗರವಾಗಿತ್ತು.
ಸದ್ಯ ಈ ನಗರದ ಹೆಸರು ಬದಲಾವಣೆ ಸಿದ್ಧತೆಗಳು ನಡೆಯುತ್ತಿವೆ.
ಪಾಲ್ಘಾರ್ ಜಿಲ್ಲೆಯ ವಸಾಯಿ ತಾಲ್ಲೂಕಿಗೆ ಒಳಪಡುವ ಈ ಉಪನಗರದ ಹೆಸರನ್ನು ಬದಲಾಯಿಸಲು ವಸಾಯಿ-ವಿರಾರ್ ಮಹಾನಗರ ಪಾಲಿಕೆ (ವಿವಿಸಿಎಂಸಿ) ಪ್ರಸ್ತಾವನೆ ಸಲ್ಲಿಸಿದ್ದು, ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ.
ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
'ನಾಲಾಸೋಪಾರಾ' ಇನ್ನು ಶೂರ್ಪರಕ: ಮರುನಾಮಕರಣಕ್ಕೆ ಸಜ್ಜಾದ ಅಂತರರಾಷ್ಟ್ರೀಯ ಧಾರ್ಮಿಕ ಕೇಂದ್ರ
ಒಂದು ಸಾಲಿನಲ್ಲಿಮಹಾರಾಷ್ಟ್ರದ ನಾಲಾಸೋಪಾರಾ ನಗರವನ್ನು ಅದರ ಐತಿಹಾಸಿಕ ಮತ್ತು ಪೌರಾಣಿಕ ಮಹತ್ವವನ್ನು ಪರಿಗಣಿಸಿ 'ಶೂರ್ಪರಕ' ಎಂದು ಮರುನಾಮಕರಣ ಮಾಡಲು ವಸಾಯಿ-ವಿರಾರ್ ಮಹಾನಗರ ಪಾಲಿಕೆ ಮುಂದಾಗಿದೆ.
ಏನು? ಏಕೆ? ಹೇಗೆ?
ನಾಲಾಸೋಪಾರಾವನ್ನು ಶೂರ್ಪರಕ ಎಂದು ಏಕೆ ಬದಲಾಯಿಸಲಾಗುತ್ತಿದೆ?
ಈ ಪ್ರದೇಶಕ್ಕೆ ಪುರಾತನ ಕಾಲದಿಂದಲೂ 'ಶೂರ್ಪರಕ' ಎಂಬ ಐತಿಹಾಸಿಕ ಹಾಗೂ ಪೌರಾಣಿಕ ಹೆಸರಿದ್ದು, ತನ್ನ ಸಾಂಸ್ಕೃತಿಕ ಗುರುತನ್ನು ಮರುಸ್ಥಾಪಿಸುವ ಉದ್ದೇಶದಿಂದ ಈ ಬದಲಾವಣೆಗೆ ಮುಂದಾಗಲಾಗಿದೆ.
ನಾಲಾಸೋಪಾರಾ ಪ್ರದೇಶದ ಐತಿಹಾಸಿಕ ಹಿನ್ನೆಲೆ ಏನು?
ಪ್ರಾಚೀನ ಕಾಲದಲ್ಲಿ ಇದು ಅರೇಬಿಯಾ ಮತ್ತು ಆಗ್ನೇಯ ಏಷ್ಯಾದೊಂದಿಗೆ ಸಂಪರ್ಕ ಹೊಂದಿದ್ದ ಪ್ರಮುಖ ಬಂದರು ನಗರವಾಗಿತ್ತು. ರಾಮಾಯಣ, ಮಹಾಭಾರತಗಳಲ್ಲೂ ಈ ಪ್ರದೇಶದ ಉಲ್ಲೇಖವಿದೆ.
ಬೌದ್ಧ ಧರ್ಮದ ಇತಿಹಾಸದೊಂದಿಗೆ ಈ ನಗರಕ್ಕಿರುವ ನಂಟೇನು?
ಹ್ಯುಯೆನ್ ತ್ಸಾಂಗ್ ತಮ್ಮ ಪುಸ್ತಕದಲ್ಲಿ ದಾಖಲಿಸಿದಂತೆ, ಅಶೋಕ ಚಕ್ರವರ್ತಿ ನಿರ್ಮಿಸಿದ ಬೃಹತ್ ಸ್ತೂಪ ಮತ್ತು ಬೌದ್ಧ ವಿಹಾರಗಳು ಇಲ್ಲಿವೆ ಎಂದು ನಂಬಲಾಗಿದೆ.
ನಾಲಾಸೋಪಾರಾ ಎಂಬ ಹೆಸರು ಹೇಗೆ ಬಂದಿತು?
ಬ್ರಿಟಿಷರ ಆಡಳಿತಾವಧಿಯಲ್ಲಿ ರೈಲ್ವೆ ನಿಲ್ದಾಣವನ್ನು ನಿರ್ಮಿಸುವಾಗ, ಸಮೀಪದಲ್ಲಿದ್ದ 'ನಾಲಾ' ಮತ್ತು 'ಸೋಪಾರಾ' ಎಂಬ ಎರಡು ಗ್ರಾಮಗಳ ಹೆಸರುಗಳನ್ನು ಸೇರಿಸಿ ಈ ನಾಮಕರಣ ಮಾಡಲಾಯಿತು.
ಈ ಪ್ರದೇಶದ ಉತ್ಖನನದಲ್ಲಿ ಸಿಕ್ಕಿದ ಐತಿಹಾಸಿಕ ವಸ್ತುಗಳು ಯಾವುವು?
1882ರಲ್ಲಿ ನಡೆದ ಉತ್ಖನನದಲ್ಲಿ ಅಶೋಕನ ಶಾಸನಗಳು, ಬೌದ್ಧ ಧರ್ಮದ ಕಂಚಿನ ವಿಗ್ರಹಗಳು ಮತ್ತು ಬುದ್ಧನ ಭಿಕ್ಷಾಪಾತ್ರೆಯ ತುಣುಕುಗಳಂತಹ ಬೆಲೆಬಾಳುವ ಅವಶೇಷಗಳು ಪತ್ತೆಯಾಗಿವೆ.
ಪ್ರಮುಖ ಅಂಕಿಅಂಶಗಳು
1882ಸ್ತೂಪದ ಉತ್ಖನನ ನಡೆದ ವರ್ಷ60 ಕಿ.ಮೀಮುಂಬೈ ನಗರದಿಂದ ಇರುವ ಅಂತರ
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆ
ಪೌರಾಣಿಕವಾಗಿ ಈ ಕ್ಷೇತ್ರವು ಭಗವಾನ್ ಪರಶುರಾಮನಿಗೆ ಸಂಬಂಧಿಸಿದ್ದು ಎನ್ನಲಾಗಿದೆ. ಹಿಂದೆ ಇದನ್ನು 'ಶೂರ್ಪರಕ' ಎಂದೇ ಕರೆಯಲಾಗುತ್ತಿತ್ತು. ರಾಮಾಯಣ, ಮಹಾಭಾರತ ಹಾಗೂ ಪುರಾಣಗಳಲ್ಲೂ ಈ ಕ್ಷೇತ್ರದ ಬಗ್ಗೆ ಉಲ್ಲೇಖಗಳಿವೆ.
ಬೈಬಲ್‌ನ 'ಓಫಿರ್' ನಗರ: ಕೆಲವು ಇತಿಹಾಸಕಾರರು ಪ್ರಾಚೀನ ಸೋಪಾರಾವನ್ನು ಬೈಬಲ್‌ನಲ್ಲಿ ಉಲ್ಲೇಖವಾಗಿರುವ ರಹಸ್ಯಮಯ 'ಓಫಿರ್' ನಗರಕ್ಕೆ ಹೋಲಿಸುತ್ತಾರೆ. ಸೊಲೊಮನ್ ರಾಜನು ಚಿನ್ನ, ಬೆಳ್ಳಿ ಮತ್ತು ಶ್ರೀಗಂಧದ ವ್ಯಾಪಾರ ನಡೆಸುತ್ತಿದ್ದ ಪ್ರಸಿದ್ಧ ವ್ಯಾಪಾರ ಕೇಂದ್ರವೇ ಈ ಸೋಪಾರಾ ಆಗಿರಬಹುದು ಎಂಬುದು ಅವರ ಅಭಿಪ್ರಾಯ
ಭಗವಾನ್ ಬುದ್ಧ ಸ್ವತಃ ಈ ಪ್ರದೇಶಕ್ಕೆ (ಸೋಪಾರಾ) ಭೇಟಿ ನೀಡಿದ್ದರು ಎಂಬ ನಂಬಿಕೆಯಿದೆ. ಆದರೆ ಯಾವುದೇ ಐತಿಹಾಸಿಕ ದಾಖಲೆಗಳಿಲ್ಲ. ಶತಮಾನಗಳಿಂದ ಇದು ಶೂರ್ಪರಕ, ಸೋಪಾರಾ ಮತ್ತು ನಾಲಾಸೋಪಾರಾ ಎಂದು ಕರೆಯಲ್ಪಡುತ್ತಿದೆ.
ಮುಂಬೈನ ಜನನಿಬಿಡ ಉಪನಗರ:
ಮುಂಬೈ ನಗರದಿಂದ ಸುಮಾರು 60 ಕಿ.ಮೀ ದೂರದಲ್ಲಿರುವ, ವೆಸ್ಟರ್ನ್ ರೈಲ್ವೆ ಮತ್ತು ಮುಂಬೈ-ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯ ಮೂಲಕ ತಲುಪಬಹುದಾದ ಈ ನಾಲಾಸೋಪಾರಾ ನಗರವು ಮಹಾರಾಷ್ಟ್ರದ ಪಲ್ಘಾರ್ ಜಿಲ್ಲೆಯ ವಸಾಯಿ ತಾಲೂಕಿನ ಭಾಗವಾಗಿದೆ.
ಸದ್ಯ ಇದನ್ನು (ನಾಲಾಸೋಪಾರಾ) 'ಶೂರ್ಪರಕ' ಎಂದು ಮರುನಾಮಕರಣ ಮಾಡಲು ವಸಾಯಿ-ವಿರಾರ್ ಮಹಾನಗರ ಪಾಲಿಕೆ ಪ್ರಸ್ತಾವನೆ ಸಲ್ಲಿಸಿದೆ.
ಅಜೀವ್ ಪಾಟೀಲ್, ಬಹುಜನ ವಿಕಾಸ ಅಘಾಡಿ ನಾಯಕ ಹಾಗೂ ವಸಾಯಿ-ವಿರಾರ್ ಮೇಯರ್ ನಾಲಾಸೋಪಾರಾವನ್ನು 'ಶೂರ್ಪರಕ' ಎಂದು ಮರುನಾಮಕರಣ ಮಾಡಲು ನಾವು ನಿರ್ಧರಿಸಿದ್ದೇವೆ. ಕಾನೂನು ಸಲಹೆಗಳನ್ನು ಪಡೆಯಲಾಗುತ್ತಿದ್ದು, ಅದರಂತೆ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ
'ನಾಲಾಸೋಪಾರಾ' ಹೆಸರು ಬಂದಿದ್ದು ಹೇಗೆ?
ಬ್ರಿಟಿಷರ ಆಡಳಿತಾವಧಿಯಲ್ಲಿ ರೈಲ್ವೆ ನಿಲ್ದಾಣವನ್ನು ನಿರ್ಮಿಸುವಾಗ, ಹತ್ತಿರದಲ್ಲಿದ್ದ 'ನಾಲಾ' ಮತ್ತು 'ಸೋಪಾರಾ' ಎಂಬ ಎರಡು ಗ್ರಾಮಗಳ ಹೆಸರುಗಳನ್ನು ಸಂಯೋಜಿಸಿ 'ನಾಲಾಸೋಪಾರಾ' ಎಂದು ನಾಮಕರಣ ಮಾಡಲಾಯಿತು. ಮೂಲತಃ 'ಸೋಪಾರಾ' ಎಂಬುದು 'ಶೂರ್ಪರಕ' ಎಂಬುದರ ಅಪಭ್ರಂಶ ರೂಪವಾಗಿದೆ.
ನಾಲಾಸೋಪಾರಾಗೆ ಸಮೃದ್ಧ ಇತಿಹಾಸವಿದೆ. ಜಗತ್ತಿನ ವಿವಿಧ ಭಾಗಗಳಿಂದ ವ್ಯಾಪಾರ ಸಂಪರ್ಕ ಹೊಂದಿದ್ದ ಹಡಗುಗಳು ಇಲ್ಲಿನ ವೈತರಣ ಹಾಗೂ ವಸಾಯಿ ಬಂದರುಗಳಿಗೆ ಬಂದು ತಲುಪುತ್ತಿದ್ದವು.
ವಸಾಯಿ ತಾಲೂಕಿನ ನಾಲಾಸೋಪಾರಾದ ಬಗ್ಗೆ ಪುರಾಣ ಮತ್ತು ಐತಿಹಾಸದಲ್ಲಿ ಉಲ್ಲೇಖಗಳಿವೆ ಎನ್ನುತ್ತಾರೆ ಕೆಎಂಸಿ ಹಾಲಿಡೇಸ್ ಆಯಂಡ್ ಆಫ್‌ಷೋರ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕ-ನಿರ್ದೇಶಕ ಕಿರಣ್ ಭೋಯಿರ್.
ಪ್ರಾಚೀನ ಸೋಪಾರಾವು ಅರೇಬಿಯನ್ ಸಮುದ್ರಕ್ಕೆ ವ್ಯಾಪಾರ ಸಂಪರ್ಕವನ್ನು ಹೊಂದಿದ್ದ ಸಮೃದ್ಧ ಬಂದರಾಗಿತ್ತು. ಹಿಂದೂ, ಬೌದ್ಧ ಮತ್ತು ಜೈನ ಧರ್ಮದ ಗ್ರಂಥಗಳಲ್ಲೂ ಈ ಪ್ರದೇಶದ ಉಲ್ಲೇಖವಿದೆ. ಇಲ್ಲಿ ಹಲವಾರು ಹಳೆಯ ಚರ್ಚ್‌ಗಳು ಮತ್ತು ಮಸೀದಿಗಳೂ ಇವೆ.
'ಈ ಪ್ರದೇಶದ ಸುದೀರ್ಘ ಇತಿಹಾಸವನ್ನು ಗಮನದಲ್ಲಿಟ್ಟುಕೊಂಡು ನಾಲಾಸೋಪಾರಾದ ಹೆಸರನ್ನು ಆದಷ್ಟು ಬೇಗ 'ಶೂರ್ಪರಕ' ಎಂದು ಮರುನಾಮಕರಣ ಮಾಡಬೇಕು' ಎಂದು ವಸಾಯಿ ನಿವಾಸಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಸಿದ್ಧಿ ಧಾಮ್ನೆ ಆಗ್ರಹಿಸಿದ್ದಾರೆ.
ಇತಿಹಾಸಕಾರ ಡಾ. ಸೂರಜ್ ಪಂಡಿತ್ ಅವರು ಬರೆದಿರುವ 'Mumbai Beyond Bombay' ಎಂಬ ಪುಸ್ತಕದಲ್ಲಿ ಈ ಪ್ರದೇಶದ ಐತಿಹಾಸಿಕ ಪ್ರಾಮುಖ್ಯತೆ ವಿವರಿಸಿದ್ದಾರೆ. ಇದರಲ್ಲಿ ಅವರು ಚೀನಿ ಪ್ರವಾಸಿ ಹ್ಯುಯೆನ್ ತ್ಸಾಂಗ್ ಅವರ ಭೇಟಿಯ ಬಗ್ಗೆ ವಿವರವಾಗಿ ಉಲ್ಲೇಖಿಸಿದ್ದಾರೆ.
ಮುಂಬೈನಲ್ಲಿ ಬೌದ್ಧ ಸನ್ಯಾಸಿಗಳು ಭಿಕ್ಷುಗಳು ವಾಸಿಸುತ್ತಿದ್ದರೆಂದು ಹ್ಯುಯೆನ್ ತ್ಸಾಂಗ್ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಅಷ್ಟೇ ಅಲ್ಲದೆ ಅಶೋಕ ಚಕ್ರವರ್ತಿ ನಿರ್ಮಿಸಿದ ಬೃಹತ್ ಸ್ತೂಪ ಒಂದರ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಅದುವೇ ಈ ಸೋಪಾರಾದಲ್ಲಿರುವ ಸ್ತೂಪ. ಈ ಸ್ತೂಪದ ದಕ್ಷಿಣಕ್ಕಿರುವ ಬೆಟ್ಟಗಳಲ್ಲಿ ನಿರ್ಮಿಸಲಾದ ಬೌದ್ಧ ವಿಹಾರದ ಬಗ್ಗೆಯೂ ಅವರು ವಿವರವಾಗಿ ಬರೆದಿದ್ದಾರೆ.
ಈ ವಿವರಣೆಯು ಕನ್ಹೇರಿಯಲ್ಲಿರುವ ವಿಹಾರಕ್ಕೆ ನಿಖರವಾಗಿ ಹೋಲುತ್ತದೆ. ಬೆಟ್ಟದ ಇಳಿಜಾರಿನಲ್ಲಿ ಮೂರು ಹಂತಗಳಲ್ಲಿ ವಿಹಾರಗಳನ್ನು ಕೊರೆದಿರುವುದನ್ನು ಮತ್ತು ಪ್ರವೇಶದ್ವಾರದಲ್ಲಿ ಕಲ್ಲಿನ ಆನೆಯನ್ನು ಕೆತ್ತಲಾಗಿತ್ತು ಎಂದು ಅವರು ಉಲ್ಲೇಖಿಸಿದ್ದಾರೆ ಎಂದು ಡಾ. ಪಂಡಿತ್ ಬರೆದಿದ್ದಾರೆ.
ಸ್ತೂಪದ ಉತ್ಖನನ
1882ರಲ್ಲಿ ಖ್ಯಾತ ಪುರಾತತ್ವಶಾಸ್ತ್ರಜ್ಞ ಪಂಡಿತ್ ಭಗವಾನ್‌ಲಾಲ್ ಇಂದ್ರಾಜಿ ಅವರು ನಾಲಾಸೋಪಾರಾದಲ್ಲಿನ ಬೌದ್ಧ ಸ್ತೂಪವೊಂದರ ಉತ್ಖನನ ನಡೆಸಿದರು. ಈ ಸ್ಥಳವು ಮೌರ್ಯ ಸಾಮ್ರಾಜ್ಯದ ನಂಟನ್ನು ಹೊಂದಿದ್ದು, ಇಲ್ಲಿ ಅಶೋಕನ ಎರಡು ಶಾಸನಗಳೂ ಪತ್ತೆಯಾಗಿವೆ.
ಈ ಸ್ತೂಪದ ಮಧ್ಯಭಾಗದಲ್ಲಿ, ಕ್ರಿ.ಶ. 8-9ನೇ ಶತಮಾನಕ್ಕೆ ಸೇರಿದ ಎಂಟು ಅಪರೂಪದ ಬೌದ್ಧ ಕಂಚಿನ ವಿಗ್ರಹಗಳನ್ನು ಒಳಗೊಂಡಿದ್ದ ದೊಡ್ಡ ಕಲ್ಲಿನ ಪೆಟ್ಟಿಗೆಯೊಂದು ಸಿಕ್ಕಿತು. ಇದರ ಜೊತೆಗೆ ತಾಮ್ರ, ಬೆಳ್ಳಿ, ಕಲ್ಲು, ಸ್ಪಟಿಕ ಹಾಗೂ ಚಿನ್ನದ ಭರಣಿಗಳು (ದಾಖಲೆ ಪೆಟ್ಟಿಗೆಗಳು) ಮತ್ತು ಸ್ವತಃ ಗೌತಮ ಬುದ್ಧನೇ ಬಳಸಿದ್ದರೆನ್ನಲಾದ ಭಿಕ್ಷಾಪಾತ್ರೆಯ ತುಣುಕುಗಳು ಪತ್ತೆಯಾಗಿದ್ದವು.
ಈ ಐತಿಹಾಸಿಕ ಅವಶೇಷಗಳ ಶೋಧವು ಭಾರತ ಮತ್ತು ಯುರೋಪ್‌ನಲ್ಲಷ್ಟೇ ಅಲ್ಲದೆ, ಶ್ರೀಲಂಕಾದ ಬೌದ್ಧರಲ್ಲೂ ಭಾರಿ ಸಂಚಲನ ಮೂಡಿಸಿತ್ತು.
ಇದೀಗ ವಸಾಯಿ-ವಿರಾರ್ ಮಹಾನಗರ ಪಾಲಿಕೆಯು, ತನ್ನ ಸುಪರ್ದಿಯಲ್ಲಿರುವ ಈ ನಗರಕ್ಕೆ ಪ್ರಾಚೀನ ಮತ್ತು ಸಾಂಸ್ಕೃತಿಕ ಗುರುತನ್ನು ಮರಳಿ ನೀಡಲು 'ಶೂರ್ಪರಕ ನಗರ' ಎಂದು ಮರುನಾಮಕರಣ ಮಾಡಲು ನಿರ್ಧರಿಸಿ ಸಲ್ಲಿಸಿದೆ.

