ಶ್ರೀನಗರ: ಪಾಕಿಸ್ತಾನ ಮೂಲದ ನಿಷೇಧಿತ ಉಗ್ರಗಾಮಿ ಸಂಘಟನೆ ಲಷ್ಕರ್ ಎ ತಯಬಾದ(ಎಲ್‌ಇಟಿ) ಮೋಸ್ಟ್ ವಾಂಟೆಂಡ್ ಉಗ್ರನನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಮಧ್ಯ ಕಾಶ್ಮೀರದ ಬುಡ್ಗಾಂ ಜಿಲ್ಲೆಯಲ್ಲಿ ರಾಷ್ಟ್ರೀಯ ರೈಫಲ್ಸ್ ಜೊತೆಗಿನ ಗುಂಡಿನ ಕಾಳಗದಲ್ಲಿ ಹತನಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ಧಾರೆ.
ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್, ಹತನಾದ ಉಗ್ರನ ಗುರುತನ್ನು ಬಹಿರಂಗಪಡಿಸಿಲ್ಲ. ಆದರೆ, ಅಧಿಕಾರಿಗಳು ಆತನನ್ನು ಸುಲೇಮಾನ್ ಶಾ ಅಲಿಯಾಸ್ 'ಮುಸಾ' ಎಂದು ಗುರುತಿಸಿದ್ದಾರೆ.
ಕೊರಾಗ್, ಯೂಸ್‌ಮಾರ್ಗ್ ಪ್ರದೇಶಗಳಲ್ಲಿಯೂ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ ಎಂದು ಸೇನೆ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
'ಈ ಭಾಗದಲ್ಲಿ ಅನುಮಾನಾಸ್ಪದ ಚಟುವಟಿಕೆ ನಡೆಯುತ್ತಿರುವುದನ್ನು ನಮ್ಮ ಕಣ್ಗಾವಲು ಪಡೆ ಪತ್ತೆ ಮಾಡಿತ್ತು. ಕಾರ್ಯಾಚರಣೆಗಿಳಿದಾಗ ಉಗ್ರರು ಗುಂಡಿನ ದಾಳಿ ನಡೆಸಿದರು. ಭಾರಿ ಗುಂಡಿನ ಚಕಮಕಿ ಬಳಿಕ ಉಗ್ರನನ್ನು ಹತ್ಯೆ ಮಾಡಲಾಗಿದೆ' ಎಂದು ಸೇನೆ ತಿಳಿಸಿದೆ.
ಹತನಾದ ಉಗ್ರ 'ಮುಸಾ', ಪೀರ್ ಪಂಜಾಂಬ್ ಶ್ರೇಣಿಯಲ್ಲಿ ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ದಾಳಿಗಳಲ್ಲಿ ಭಾಗಿಯಾಗಿದ್ದು, ಈತನ ಪತ್ತೆಗೆ ಸೇನೆ ಪ್ರಯತ್ನ ನಡೆಸುತ್ತಿತ್ತು. ಈ ತಿಂಗಳ ಆರಂಭದಲ್ಲಿ ಯೂಸ್‌ಮಾರ್ಗ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಸ್ವಲ್ಪದರಲ್ಲೇ ಪಾರಾಗಿದ್ದ. ಆಗ ಆತನ ಆಪ್ತ ಯಾಸಿರ್ ಹತನಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಸಾ ಹತ್ಯೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಎಲ್‌ಇಟಿ ಉಗ್ರರಿಗೆ ದೊಡ್ಡ ಪೆಟ್ಟು ಎಂದು ಸೇನೆ ಹೇಳಿದೆ.

