ಬಾರ್ಪೆಟಾ (PTI): ಜಿಹಾದ್ ರೀತಿಯ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪದ ಮೇರೆಗೆ ಅಸ್ಸಾಂನ ಬಾರ್ಪೆಟಾ ಜಿಲ್ಲೆಯಲ್ಲಿ ಆರು ಮಂದಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಅಧಿಕಾರಿಗಳು ಬಂಧಿಸಿದ್ದಾರೆ.
ಹೌಲಿ, ಬಾರ್ಪೆಟಾ ರಸ್ತೆ, ಸೊರ್ಭೋಗ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎನ್ಐಎ ಅಧಿಕಾರಿಗಳು ಸೋಮವಾರ ರಾತ್ರಿ ಶೋಧ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಬಂಧಿತರನ್ನು ಫಾರುಖ್ ಅಬ್ದುಲ್ಲಾ, ಜಾಕಿರ್ ಹುಸೈನ್, ಚಾಂದ್ಬಾರ್ ಅಲಿ, ಮುಸ್ತಾಫಿಜುರ್ ರೆಹಮಾನ್, ಯಾಕುಬ್ ಅಲಿ, ರಕಿಬುಲ್ ಇಸ್ಲಾಂ ಎಂದು ಗುರುತಿಸಲಾಗಿದೆ.
ಆರೋಪಿಗಳು ಜಿಹಾದ್ ಚಟುವಟಿಕೆಗಳಲ್ಲಿ ತೊಡಗಿರುವುದಲ್ಲದೇ, ಜಿಲ್ಲೆಯ ಯುವಕರನ್ನು ಇಸ್ಲಾಮಿಕ್ ಮೂಲಭೂತವಾದಿ ಸಂಘಟನೆಗಳಿಗೆ ಸೇರ್ಪಡೆಗೊಳಿಸಲು ಪ್ರಯತ್ನಿಸುತ್ತಿದ್ದರು ಎಂದೂ ಅಧಿಕಾರಿಗಳು ಆರೋಪಿಸಿದ್ದಾರೆ.
ಜತೆಗೆ ಜಮಾತ್-ಉಲ್- ಮುಜಾಹಿದ್ದೀನ್ ಬಾಂಗ್ಲಾದೇಶ (ಜೆಎಂಬಿ) ಹೆಸರಿನ ನಿಷೇಧಿತ ಉಗ್ರ ಸಂಘಟನೆಯ ಘಟಕವಾದ ಇಮಾಮ್ ಮೊಹಮ್ದರ್ ಕಾಫಿಲಾ (ಐಎಂಕೆ) ಎಂಬ ಸಂಘಟನೆಯ ಜತೆಗೂ ಆರೋಪಿಗಳು ಗಡಿಯಾಚೆಗಿನ ಸಂಪರ್ಕ ಹೊಂದಿದ್ದರು ಎಂದೂ ಹೇಳಲಾಗಿದೆ.
ಬಂಧಿತರಿಂದ ಲ್ಯಾಪ್ಟಾಪ್, ಮೊಬೈಲ್ ಫೋನ್ ಸೇರಿದಂತೆ ಕೆಲವು ಎಲೆಕ್ಟ್ರಾನಿಕ್ ಸಾಧನಗಳು, ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

