ನೈರೋಬಿ: ಭಾರತ ಮೂಲಕ ಟಾಟಾ ಕೆಮಿಕಲ್ಸ್ ಕಂಪನಿಯು ಕೆನ್ಯಾದಲ್ಲಿ ಕಾರ್ಯಾಚರಣೆಯನ್ನು ಕೊನೆಗೊಳಿಸಬೇಕು ಎಂದು ಅಧ್ಯಕ್ಷ ವಿಲಿಯಮ್ ರುಟೊ ಗುರುವಾರ ಆದೇಶಿಸಿದ್ದಾರೆ.
'ಕಂಪನಿಯಿಂದಾಗಿ ದೇಶಕ್ಕೆ ಯಾವುದೇ ರೀತಿಯಲ್ಲೂ ಪ್ರಯೋಜನವಾಗಿಲ್ಲ' ಎಂದು ಅಭಿಪ್ರಾಯಪಟ್ಟಿರುವ ರುಟೊ, ಟಾಟಾ ಕೆಮಿಕಲ್ಸ್ ಇರುವ ಸ್ಥಳಕ್ಕೆ ಎರಡು ಹೊಸ ಕಂಪನಿಗಳನ್ನು ಕರೆತರಲಾಗುವುದು ಎಂದು ಭರವಸೆ ನೀಡಿರುವುದಾಗಿ 'ರಾಯಿಟರ್ಸ್' ವರದಿ ಮಾಡಿದೆ.
ಮಗಾಡಿ ಪಟ್ಟಣದ ಸೋಡಾ ಕಾರ್ಖಾನೆಯಲ್ಲಿನ ತನ್ನ ಘಟಕವನ್ನು ಸ್ಥಗಿತಗೊಳಿಸುವಂತೆ ಟಾಟಾ ಕೆಮಿಕ್ಲಸ್ ಲಿಮಿಟೆಡ್‌ಗೆ ಸರ್ಕಾರ ಆದೇಶಿಸಿದೆ ಎಂದು ಟಾಟಾ ಕಂಪನಿ ಜುಲೈನಲ್ಲಿ ತಿಳಿಸಿತ್ತು.
'ಟಾಟಾ ಕಂಪನಿಯು ನೂರು ವರ್ಷಗಳ ಅವಧಿಗೆ ಗುತ್ತಿಗೆ ಹೊಂದಿದ್ದರೂ, ಕಾಜಿಯಾಡೊ ಪಟ್ಟಣದಲ್ಲಿ ಯಾವುದೇ ಕಾರ್ಖಾನೆಗಳನ್ನು ಸ್ಥಾಪಿಸಿಲ್ಲ. ನಾವೇನು ಬೇರೆಯವರ ಗುಲಾಮರೇ?' ಎಂದಿರುವ ರುಟೊ, 'ಟಾಟಾ ಕೆಮಿಕಲ್ಸ್ ಇರುವಲ್ಲಿಗೆ ಹೊಸ ಕಂಪನಿಗಳನ್ನು ತರುತ್ತೇವೆ. ಕಾಜಿಯಾಡೊಗೆ ಗಾಜು ಹಾಗೂ ರಾಸಾಯನಿಕ ಕಂಪನಿ ತರಲಾಗುವುದು' ಎಂದಿದ್ದಾರೆ.
ಕೆನ್ಯಾ ಅಧ್ಯಕ್ಷರ ಆದೇಶದ ಬಗ್ಗೆ ಸದ್ಯಕ್ಕೆ ಕಂಪನಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

