ನವದೆಹಲಿ: ರಾಷ್ಟ್ರದ ರಾಜಧಾನಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಭಾಗವಾಗಿ ಚುನಾವಣಾ ಆಯೋಗವು ನೋಟಿಸ್ ಜಾರಿಗೊಳಿಸಿದ 32 ಲಕ್ಷ ಮತದಾರರಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಒಳಗೊಂಡಂತೆ ಹಲವು ಪ್ರಮುಖರು ಸೇರಿದ್ದಾರೆ.
ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ, ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್, ಚುನಾವಣಾ ಆಯುಕ್ತ ಎಸ್.ಎಸ್. ಸಂಧು, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೂ ನೋಟಿಸ್ ನೀಡಲಾಗಿದೆ.
2002ರ ಮತದಾರರ ಪಟ್ಟಿಯೊಂದಿಗೆ ಹೆಸರು ಹೊಂದಾಣಿಕೆಯಾಗದೇ ಇರುವುದು ಮತ್ತು ಹೆಸರಿನಲ್ಲಿ ವ್ಯತ್ಯಾಸ, ವಯಸ್ಸಿನಲ್ಲಿ ವ್ಯತ್ಯಾಸ ಸೇರಿದಂತೆ ಹಲವು ಕಾರಣಗಳಿಂದ ಇವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ.
'ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ದಾಖಲೆಗಳನ್ನು ಪರಿಶೀಲಿಸಲಾಗಿದ್ದು, ನವೆಂಬರ್ 4ರಂದು ಪ್ರಕಟಿಸುವ ಅಂತಿಮ ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸಿಕೊಳ್ಳಲಾಗುವುದು' ಎಂದು ಚುನಾವಣಾ ಆಯೋಗ ಆ ಬಳಿಕ ಸ್ಪಷ್ಟನೆ ನೀಡಿದೆ.
ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ತಮ್ಮ ಅರ್ಹತೆಯನ್ನು ಸಾಬೀತುಪಡಿಸುವಂತೆ ಕೋರಿ, ಚುನಾವಣಾ ಆಯೋಗವು ನೋಟಿಸ್ ಜಾರಿಗೊಳಿಸಿದವರಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, ಕಾಂಗ್ರೆಸ್ ಸಂಸದ ಅಭಿಷೇಕ್ ಸಿಂಘ್ವಿ, ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್, ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ವೈಸ್ ಅಡ್ಮಿರಲ್ ಸಿ.ಆರ್.ಪ್ರವೀಣ್ ನಾಯರ್ ಮತ್ತು ವಾಯುಪಡೆಯ ಮಾಜಿ ಮುಖ್ಯಸ್ಥ ಎನ್.ಅನಿಲ್ ಕುಮಾರ್ ಬ್ರೌನ್ ಅವರೂ ಇದ್ದಾರೆ.
2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಮಾಡದ ಕಾರಣ 98 ವರ್ಷದ ಅಡ್ವಾಣಿ, ಅವರ ಪುತ್ರಿ ಪ್ರತಿಭಾ ಮತ್ತು ಸೊಸೆ ಗೀತಿಕಾ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಆಯೋಗ ತಿಳಿಸಿದೆ. ಆದರೆ, ಅಡ್ವಾನಿ ಪುತ್ರ ಜಯಂತ್ ಅವರು ಈ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಇವರೆಲ್ಲರೂ ನವದೆಹಲಿ ವಿಧಾನಸಭಾ ಕ್ಷೇತ್ರದ ಮತದಾರರಾಗಿದ್ದಾರೆ.
ಎಸ್.ಎಸ್. ಸಂಧು ಅವರ ವಿಚಾರದಲ್ಲಿ, ಹೆಸರಿನಲ್ಲಿನ ವ್ಯತ್ಯಾಸವನ್ನು ನೋಟಿಸ್‌ಗೆ ಕಾರಣವೆಂದು ಉಲ್ಲೇಖಿಸಲಾಗಿದೆ. ಅವರ ಪತ್ನಿ ಡಾ. ಹರ್ಲೀನ್ ಕೌರ್ ಸಂಧು ಅವರ ದಾಖಲೆಗಳು ಸರಿಯಾಗಿರುವ ಕಾರಣ ನೋಟಿಸ್ ಪಡೆದಿಲ್ಲ. ಪೋಷಕರ ಹೆಸರಿನಲ್ಲಿನ ವ್ಯತ್ಯಾಸದ ಕಾರಣದಿಂದಾಗಿ ಅವರ ಮಗ ದಮನ್‌ಬಿರ್‌ಗೆ ನೋಟಿಸ್ ನೀಡಲಾಗಿದೆ. ಇವರು ದೆಹಲಿ ಕಂಟೋನ್ಮೆಂಟ್ ವಿಧಾನಸಭಾ ಕ್ಷೇತ್ರದ ಮತದಾರರಾಗಿದ್ದಾರೆ.
ದೆಹಲಿಯ ಮುಖ್ಯ ಚುನಾವಣಾ ಆಯುಕ್ತರ ಕಚೇರಿಯು, ಮತದಾರರು ನೋಟಿಸ್ ಸ್ವೀಕರಿಸಿದ ನಂತರ ಚುನಾವಣಾ ನೋಂದಣಿ ಅಧಿಕಾರಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಜಗದೀಪ್ ಧನಕರ್
ಹಳೆಯ ವಿಳಾಸದಲ್ಲಿ ಧನಕರ್ ಹೆಸರು
ಉಪರಾಷ್ಟ್ರಪತಿಗಳ ನಿವಾಸದ ವಿಳಾಸದಲ್ಲಿ ಹೆಸರು ದಾಖಲಾಗಿರುವ ಕಾರಣಕ್ಕೆ ಮಾಜಿ ಉಪರಾಷ್ಟ್ರಪತಿ ಧನಕರ್ ಮತ್ತು ಅವರ ಪತ್ನಿ ಸುದೇಶ್ ಅವರಿಗೆ ನೋಟಿಸ್ ನೀಡಲಾಗಿದೆ. ಹಾಲಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಕೂಡ ಇದೇ ವಿಳಾಸದ ಮತದಾರರಾಗಿದ್ದಾರೆ. ಉಪರಾಷ್ಟ್ರಪತಿಯ ಅಧಿಕೃತ ನಿವಾಸದಿಂದ ಹೊಸ ನಿವಾಸಕ್ಕೆ ವಾಸ ಬದಲಿಸಿದರೂ ಧನಕರ್ ಅವರು ಮತದಾರರ ಪಟ್ಟಿಯಲ್ಲಿ ತಮ್ಮ ವಿಳಾಸವನ್ನು ಅಪ್‌ಡೇಟ್ ಮಾಡಿರಲಿಲ್ಲ. ಕೇಜ್ರಿವಾಲ್ ಅವರ ಪತ್ನಿ ಮತ್ತು ಪೋಷಕರು ಸೇರಿದಂತೆ ಅವರ ಕುಟುಂಬದವರಿಗೆ 2002ರ ಪಟ್ಟಿಯೊಂದಿಗೆ ಮ್ಯಾಪಿಂಗ್ ಮಾಡಿಲ್ಲ ಎಂಬ ಕಾರಣ ನೀಡಿ ನೋಟಿಸ್ ಜಾರಿಗೊಳಿಸಲಾಗಿದೆ.

