ಇಂದೋರ್: 'ವ್ಯವಸ್ಥೆ' ಇಡೀ ದೇಶವನ್ನೇ ತನ್ನ ವಶಕ್ಕೆ ಪಡೆದಿದೆ. ವಿದ್ಯಾರ್ಥಿಗಳು ಪ್ರಶ್ನಿಸುವುದನ್ನು ವ್ಯವಸ್ಥೆ ಇಷ್ಟಪಡುವುದಿಲ್ಲ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಇಂದೋರ್‌ನಲ್ಲಿ ನಡೆದ 'ಛಾತ್ರೋಂಕಿ ಗೂಂಜ್'(ವಿದ್ಯಾರ್ಥಿಗಳ ಧ್ವನಿ) ಕಾರ್ಯಕ್ರಮದ ಐದನೇ ಆವೃತ್ತಿಯಲ್ಲಿ ಮಾತನಾಡಿದ ಅವರು, 'ವಿದ್ಯಾರ್ಥಿಗಳು ದೇಶದ ಭವಿಷ್ಯ.
ಅವರಿಲ್ಲದೆ ಯಾವುದೇ ದೇಶ ಬಲಿಷ್ಠವಾಗಲು ಸಾಧ್ಯವಿಲ್ಲ' ಎಂದು ಪುನರುಚ್ಚರಿಸಿದರು.
'ದೇಶದಲ್ಲಿ 10 ಲಕ್ಷ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಉತ್ತರ ಪ್ರದೇಶ, ಮಧ್ಯಪ್ರದೇಶದಲ್ಲಿ ಶೇ 55ರಷ್ಟು ಶಾಲೆಗಳು ಸೇರಿ ದೇಶದಾದ್ಯಂತ 1 ಲಕ್ಷ ಶಾಲೆಗಳು ಮುಚ್ಚಿವೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋಭಾಲ್ ಅವರು ಸಾಮಾಜಿಕ ಮಾಧ್ಯಮ ಸೇರಿದಂತೆ ಎಲ್ಲವನ್ನೂ ನಿಯಂತ್ರಿಸುತ್ತಿದ್ದಾರೆ. ಗೂಢಚಾರಿಕೆಯಲ್ಲೂ ತೊಡಗಿದ್ದಾರೆ' ಎಂದು ಅವರು ಆರೋಪಿಸಿದರು.
ವಿದ್ಯಾರ್ಥಿಗಳು 'ಅದಾನಿ, ಅಂಬಾನಿ, ಜೈ ಶಾ ಮತ್ತಿತರರು ಒಳಗೊಂಡ 'ವ್ಯವಸ್ಥೆ' ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಆದರೆ, 'ಅಂಧಭಕ್ತರು' ಇದನ್ನು ವಿರೋಧಿಸುತ್ತಿದ್ದಾರೆ' ಎಂದು ರಾಹುಲ್ ಹೇಳಿದರು.
ಮಧ್ಯಪ್ರದೇಶದ ನೇಮಕಾತಿ ಪರೀಕ್ಷೆಗಳಲ್ಲಿ ಶೇ 13ರಷ್ಟು ಕೋಟಾ ಸ್ಥಗಿತಗೊಳಿಸುವ ವಿಷಯವನ್ನು ವಿದ್ಯಾರ್ಥಿಗಳು 'ಛಾತ್ರೋಂಕಿ ಗೂಂಜ್' ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಿದರು.

