ನವದೆಹಲಿ: 'ನ್ಯಾಯಾಲಯದಲ್ಲಿ ಹಣವನ್ನು ಠೇವಣಿ ಇರಿಸುವುದು ಪಾವತಿಗೆ ಸಮನಾಗುವುದಿಲ್ಲ ಮತ್ತು ಸಾಲಗಾರರನ್ನು ಹೊಣೆಗಾರಿಕೆಯಿಂದ ಮುಕ್ತಗೊಳಿಸುವುದಿಲ್ಲ' ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಷನಲ್ ಸೀಡ್ಸ್ ಕಾರ್ಪೊರೇಷನ್ ಲಿಮಿಟೆಡ್ ಮತ್ತು ನ್ಯಾಷನಲ್ ಆಗ್ರೊ ಸೀಡ್ಸ್ ಕಾರ್ಪೋರೇಷನ್ ನಡುವಿನ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಅರಾಧೆ ಅವರ ಪೀಠವು, 'ಸಾಲಗಾರನ ನಿಯಂತ್ರಣವನ್ನು ಮೀರಿ ಇರಿಸಲಾದ ಠೇವಣಿಯು ಬಾಧ್ಯತೆಯನ್ನು ನಿವಾರಿಸುವುದಿಲ್ಲ' ಎಂದು ಅಭಿಪ್ರಾಯಪಟ್ಟಿದೆ.
ಮೇಲ್ಮನವಿಗಳ ಸಮಯದಲ್ಲಿ ಮಾಡಿದ ಠೇವಣಿ ನಿರ್ವಹಿಸಲು ಏಕರೂಪದ ವ್ಯವಸ್ಥೆಯನ್ನು ರೂಪಿಸುವಂತೆಯೂ ನ್ಯಾಯಪೀಠ ಕಾನೂನು ಆಯೋಗಕ್ಕೆ ನಿರ್ದೇಶಿಸಿದೆ.
ಠೇವಣಿ ಇರಿಸಿದ ಮೊತ್ತದ ನಿರ್ವಹಣೆಯಲ್ಲಿ ಸ್ಪಷ್ಟತೆ ಮತ್ತು ಏಕರೂಪತೆಯ ಅಗತ್ಯವನ್ನು ಒತ್ತಿ ಹೇಳಿದ ನ್ಯಾಯಪೀಠವು, ಸುಧಾರಣೆಗಳನ್ನು ಶಿಫಾರಸು ಮಾಡುವ ಮೊದಲು ಭಾರತೀಯ ರಿಸರ್ವ್ ಬ್ಯಾಂಕ್, ಹಣಕಾಸು ಸಚಿವಾಲಯ, ಕಾನೂನು ಮತ್ತು ನ್ಯಾಯ ಸಚಿವಾಲಯದೊಂದಿಗೆ ಸಮಾಲೋಚನೆ ನಡೆಸುವಂತೆ ಕಾನೂನು ಆಯೋಗಕ್ಕೆ ಸಲಹೆ ನೀಡಿದೆ.
ನ್ಯಾಯಾಲಯದಲ್ಲಿ ಹಣವನ್ನು ಠೇವಣಿ ಇರಿಸಿದ ನಂತರವೂ ನ್ಯಾಷನಲ್ ಸೀಡ್ಸ್ ಕಾರ್ಪೊರೇಷನ್, ಮಧ್ಯಸ್ಥಿಕೆ ತೀರ್ಮಾನದ ಮೇಲೆ ನ್ಯಾಷನಲ್ ಅಗ್ರೊ ಸೀಡ್ಸ್‌ಗೆ ಶೇ 12ರಷ್ಟು ವಾರ್ಷಿಕ ಬಡ್ಡಿಯೊಂದಿಗೆ ₹1.46 ಕೋಟಿ ಪಾವತಿಸಲು ಬಾಧ್ಯಸ್ಥವಾಗಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಮಧ್ಯಸ್ಥಿಕೆ ಕಾಯ್ದೆಯ ಸೆಕ್ಷನ್ 34ರ ಅಡಿಯಲ್ಲಿ ಬೀಜ ನಿಗಮವು ಈ ತೀರ್ಪನ್ನು ಪ್ರಶ್ನಿಸಿತ್ತು.

