ಚಂಡೀಗಢ: ಅಮೃತಸರದಲ್ಲಿ ಕರ್ತವ್ಯನಿರತ ಅಸಿಸ್ಟೆಂಟ್ ಸಬ್‌ಇನ್ಸ್‌ಪೆಕ್ಟರ್ (ಎಎಸ್‌ಐ) ಅವರ ಹತ್ಯೆಗೆ ಸಂಬಂಧಿಸಿದ ಪ್ರಮುಖ ಆರೋಪಿಯೊಬ್ಬ ಶನಿವಾರ ರಾತ್ರಿ ಪೋಲಿಸರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾನೆ.
ಆರೋಪಿಯನ್ನು ಅಮೃತಸರದ ನಿವಾಸಿ ದೀಪಕ್ ಸಿಂಗ್ ಎಂದು ಗುರುತಿಸಲಾಗಿದೆ.
ಶುಕ್ರವಾರದ ಮಧ್ಯರಾತ್ರಿ ಅಮೃತಸರದ ಭಗತಾನ್‌ವಾಲಾ ಧಾನ್ಯ ಮಾರುಕಟ್ಟೆ ಬಳಿ ಗಸ್ತು ತಿರುಗುತ್ತಿದ್ದ ಎಎಸ್‌ಐ ಹರ್ಜಿತ್ ಸಿಂಗ್ ಅವರನ್ನು ಇಬ್ಬರು ಬೈಕ್ ಸವಾರರು ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಸಿಸಿಟಿವಿ ದೃಶ್ಯಾವಳಿ, ಸ್ಥಳೀಯ ಗುಪ್ತಚರ ಮಾಹಿತಿ ಮತ್ತು ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿದ್ದರು.
ಎನ್‌ಕೌಂಟರ್ ನಡೆದದ್ದು ಹೇಗೆ?
ಶನಿವಾರ ರಾತ್ರಿ ಅಮೃತಸರದ ಇಸ್ಲಾಮಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ತಂಡಾ ರಸ್ತೆಯ ಚೆಕ್‌ಪೋಸ್ಟ್‌ನಲ್ಲಿ ಇಬ್ಬರು ಶಂಕಿತರು ಸ್ಕೂಟರ್‌ನಲ್ಲಿ ಬರುವುದನ್ನು ಕಂಡು ಪೊಲೀಸರು ನಿಲ್ಲಿಸಲು ಸೂಚಿಸಿದರು.
ಈ ವೇಳೆ ಆರೋಪಿಗಳು ಚೆಕ್‌ಪೋಸ್ಟ್‌ನಿಂದ ತಪ್ಪಿಸಿಕೊಂಡು ಓಡಲು ಯತ್ನಿಸಿ, ಪೊಲೀಸರ ಮೇಲೆ 4 ಸುತ್ತು ಗುಂಡು ಹಾರಿಸಿದರು.
ಆತ್ಮರಕ್ಷಣೆಗಾಗಿ ಪೊಲೀಸರು ನಡೆಸಿದ ದಾಳಿಯಲ್ಲಿ ದೀಪಕ್ ಸಿಂಗ್‌ಗೆ ಗುಂಡು ತಗಲಿದ್ದು, ಆತನನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯದಲ್ಲೇ ಆತ ಮೃತಪಟ್ಟಿದ್ದಾನೆ.
ಘಟನಾ ಸ್ಥಳದಿಂದ ಪೊಲೀಸರು ಪಿಸ್ತೂಲ್, ಮ್ಯಾಗಜಿನ್‌ಗಳು ಮತ್ತು ಗುಂಡುಗಳು ಹಾಗೂ ಸ್ಕೂಟರ್ ಅನ್ನು ವಶಪಡಿಸಿಕೊಂಡಿದ್ದಾರೆ.
ಎರಡನೇ ಆರೋಪಿ ಪರಾರಿಯಾಗಿದ್ದಾನೆ. ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಮೃತಪಟ್ಟ ಎಎಸ್‌ಐ ಹರ್ಜಿತ್ ಸಿಂಗ್ ಅವರ ಕುಟುಂಬಕ್ಕೆ ಪಂಜಾಬ್ ಸರ್ಕಾರ ₹ 1ಕೋಟಿ ಪರಿಹಾರ ಹಾಗೂ ಬ್ಯಾಂಕ್ ವತಿಯಿಂದ ₹1ಕೋಟಿ ವಿಮೆ ಪರಿಹಾರವನ್ನು ಪ್ರಕಟಿಸಿದೆ.

