ಮುಂಬೈ: ಮಹಾರಾಷ್ಟ್ರದ ಶಿಕ್ಷಣ ತಜ್ಞ ಅಶೋಕ್ ವಿಖೆ ಪಾಟೀಲ್ ಅವರ ಮಗಳು ನೀಲಾ ವಿಖೆ ಪಾಟೀಲ್ ಅವರು ಸ್ವೀಡನ್‌ನ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಎಂದು ಶನಿವಾರ ಘೋಷಿಸಲಾಗಿದೆ.
ಸೆಪ್ಟೆಂಬರ್ 13ರಂದು ನಡೆದ ರಾಷ್ಟ್ರೀಯ ಚುನಾವಣೆಯಲ್ಲಿ 41 ವರ್ಷದ ನೀಲಾ ಅವರು ಸ್ಟಾಕ್‌ಹೋಮ್ ಸಿಟಿ ಕ್ಷೇತ್ರದಿಂದ ಸಂಸತ್‌ಗೆ ಆಯ್ಕೆಯಾಗಿದ್ದಾರೆ.
349 ಸದಸ್ಯಬಲದ ಸಂಸತ್ತಿನ ಸದಸ್ಯೆಯಾಗಿರುವುದಕ್ಕೆ ಸಂತಸವಾಗಿದೆ. ಆಯ್ಕೆ ಮಾಡಿದ ನಗರ ಹಾಗೂ ದೇಶಕ್ಕೆ ಕೊಡುಗೆ ನೀಡಲು ಎದುರು ನೋಡುತ್ತಿದ್ದೇನೆ' ಎಂದು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
'ನನಗೆ ಮತ ಚಲಾಯಿಸದವರಿಗೂ ಧ್ವನಿಯಾಗಲು ಬಯಸುತ್ತೇನೆ. ಪ್ರತಿಯೊಂದು ಮಗುವಿಗೂ ಕೂಡ ಒಳ್ಳೆಯ ಭವಿಷ್ಯ ಕಲ್ಪಿಸುವ ನಿಟ್ಟಿನಲ್ಲಿ ಈಈ ಸಮಾಜಕ್ಕೆ ಕೊಡುಗೆ ನೀಡಲು ಪ್ರಯತ್ನಿಸುತ್ತೇನೆ. ಶುದ್ಧ ಕುಡಿಯುವ ನೀರು, ಮಾನವ ನಿರ್ಮಿತ ಪರಿಸರ ವಿಪತ್ತುಗಳನ್ನು ತಡೆದು ವಾಸಯೋಗ್ಯವಾದ ಪರಿಸರ ನಿರ್ಮಾಣಕ್ಕೆ ಕೆಲಸ ಮಾಡುತ್ತೇನೆ' ಎಂದು ಹೇಳಿದ್ದಾರೆ.
ನೀಲಾ ಅವರು ಏಷ್ಯಾದಲ್ಲಿಯೇ ಮೊದಲ ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಾಪಿಸಿದ ವಿಠಲರಾವ್ ವಿಖೆ ಪಾಟೀಲ್ ಅವರ ಮರಿಮೊಮ್ಮಗಳಾಗಿದ್ದು, ಕೇಂದ್ರದ ಮಾಜಿ ಸಚಿವ ಬಾಳಾ ಸಾಹೇಬ್ ವಿಖೆ ಪಾಟೀಲ್ ಅವರ ಮೊಮ್ಮಗಳು. ಸ್ವೀಡನ್‌ನಲ್ಲಿ ಜನಿಸಿದ ನೀಲಾ ಅವರು ಬಾಲ್ಯವನ್ನು ಮಹಾರಾಷ್ಟ್ರದ ಅಹಮದ್‌ನಗರದಲ್ಲಿ ಕಳೆದಿದ್ದರು. ಮಹಾರಾಷ್ಟ್ರದ ಹಾಲಿ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ಅವರ ಸೊಸೆ.
ಕಳೆದ 25 ವರ್ಷಗಳಿಂದ ನೀಲಾ ಅವರು ಗ್ರೀನ್ ಪಾರ್ಟಿಯಲ್ಲಿ ಸಕ್ರಿಯ ಸದಸ್ಯರಾಗಿದ್ದಾರೆ. ಸ್ಟಾಕ್‌ಹೋಮ್ ಗ್ರೀನ್ ಪಾರ್ಟಿಯ ಚುನಾವಣಾ ಸಮಿತಿಯ ಸದಸ್ಯರಾಗಿದ್ದಾರೆ.

