ಈ ಕುರಿತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮಾಂಝಿ ಪತ್ರ ಬರೆದಿದ್ದು, NDA ಸಂಸದರ ಸಭೆಯಲ್ಲಿ ಬಿಜೆಪಿ ಸಂಸದರೊಬ್ಬರು ವ್ಯಕ್ತಪಡಿಸಿದ್ದ ಕಳವಳವನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ವರದಿ ತಿಳಿಸಿದೆ.
ಮಾಂಝಿ ಅವರು ಹಿಂದೂಸ್ತಾನಿ ಅವಾಮ್ ಮೋರ್ಚಾ (ಸೆಕ್ಯುಲರ್) ಪಕ್ಷದ ಮುಖ್ಯಸ್ಥರಾಗಿದ್ದು, ಅವರ ಪಕ್ಷವು ಆಡಳಿತಾರೂಢ NDA ಮೈತ್ರಿಕೂಟದ ಭಾಗವಾಗಿದೆ.
ಆಗಸ್ಟ್ 5ರಂದು ತಮ್ಮ ನಿವಾಸದಲ್ಲಿ ನಡೆದ ಎನ್ಡಿಎ ಸಂಸದರ ಸಭೆಯಲ್ಲಿ ಬಿಜೆಪಿ ಸಂಸದ ಗಜೇಂದ್ರ ಸಿಂಗ್ ಪಟೇಲ್ ಈ ವಿಚಾರವನ್ನು ಪ್ರಸ್ತಾಪಿಸಿದ್ದರು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಮಧ್ಯಪ್ರದೇಶದ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾದ ಖರ್ಗೋನ್ ಪ್ರತಿನಿಧಿಸುವ ಪಟೇಲ್, ಎಸ್ಸಿ ಮತ್ತು ಎಸ್ಟಿ ಸಮುದಾಯದ ಸಂಸದರಿಗೆ ಪ್ರಮುಖ ಮಸೂದೆಗಳ ಚರ್ಚೆಯಲ್ಲಿ ಮಾತನಾಡಲು ಸಾಕಷ್ಟು ಸಮಯ ಸಿಗುತ್ತಿಲ್ಲ ಎಂಬ ಕಳವಳ ವ್ಯಕ್ತಪಡಿಸಿದ್ದರು. ಈ ಪರಿಸ್ಥಿತಿಯನ್ನು ಸರಿಪಡಿಸಲು ಕ್ರಮ ಕೈಗೊಳ್ಳುವಂತೆ ಮಾಂಝಿ ಸ್ಪೀಕರ್ ಅವರನ್ನು ಒತ್ತಾಯಿಸಿದ್ದಾರೆ.
ಎನ್ಡಿಎ ಸಂಸದರ ಗುಂಪುಗಳು ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಸೇರುತ್ತವೆ ಎಂದು ತಿಳಿಸಿರುವ ಮಾಂಝಿ, ಆಗಸ್ಟ್ 5ರಂದು ನಡೆದ ಸಭೆ ಕೇವಲ ಎಸ್ಸಿ/ಎಸ್ಟಿ ಸಂಸದರಿಗೆ ಸೀಮಿತವಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
"ಸಂಸದರು ತಮ್ಮ ಸಮಸ್ಯೆಗಳನ್ನು ಮಂಡಿಸಲು ಈ ಸಭೆಗಳು ವೇದಿಕೆ ಒದಗಿಸುತ್ತವೆ. ಆಗಸ್ಟ್ 5ರ ಸಭೆಯಲ್ಲಿ ಎಸ್ಸಿ ಮತ್ತು ಎಸ್ಟಿ ಸಮುದಾಯದ ಹಲವು ಮೊದಲ ಬಾರಿಗೆ ಆಯ್ಕೆಯಾದ ಸಂಸದರ ಪರವಾಗಿ ಪಟೇಲ್ ಈ ವಿಚಾರವನ್ನು ಪ್ರಸ್ತಾಪಿಸಿದ್ದರು" ಎಂದು ಅವರು ಹೇಳಿದ್ದಾರೆ.
"ಸಂಸತ್ತಿನಲ್ಲಿ ಮಾತನಾಡುವ ಹಕ್ಕು ಎಲ್ಲರಿಗೂ ಇರಬೇಕು" ಎಂಬುದನ್ನು ಸ್ಪೀಕರ್ ಗೆ ಬರೆದ ಪತ್ರದಲ್ಲಿ ತಾನು ತಿಳಿಸಿರುವುದಾಗಿ ಮಾಂಝಿ ಹೇಳಿದ್ದಾರೆ.
ಸಂಸದ ಗಜೇಂದ್ರ ಸಿಂಗ್ ಪಟೇಲ್ ಸ್ಪಷ್ಟನೆ:
ಈ ಕುರಿತು ದಿ ಹಿಂದೂ ಸಂಸ್ಥೆಗೆ ಪ್ರತಿಕ್ರಿಯಿಸಿದ ಪಟೇಲ್, ಇದು ತಮ್ಮೊಬ್ಬರ ಅಭಿಪ್ರಾಯವಲ್ಲ, ಸಭೆಯಲ್ಲಿ ಹಾಜರಿದ್ದ ಹಲವು ಸಂಸದರು ವ್ಯಕ್ತಪಡಿಸಿದ ಅಭಿಪ್ರಾಯ ಎಂದು ಸ್ಪಷ್ಟಪಡಿಸಿದ್ದಾರೆ.
"ಕೆಲವೊಮ್ಮೆ ಮಾತನಾಡಲು ಅವಕಾಶ ಸಿಗುತ್ತದೆ. ಕೆಲವೊಮ್ಮೆ ಸಿಗುವುದಿಲ್ಲ. ಎಲ್ಲ ಸಂಸದರೂ ಸದನದಲ್ಲಿ ಹೆಚ್ಚಿನ ಸಮಯ ಬಯಸುತ್ತಾರೆ" ಎಂದು ಅವರು ಹೇಳಿದ್ದಾರೆ.

