ಇಂಫಾಲ್: ಮಣಿಪುರದ ತಮೆಂಗ್‌ಲೊಂಗ್ ಜಿಲ್ಲೆಯ ಗ್ರಾಮವೊಂದರಲ್ಲಿ ಬಂಡುಕೋರರು ನಡೆಸಿದ ದಾಳಿಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಲಾಸನ್ ಗ್ರಾಮದಲ್ಲಿ, ವಿದ್ಯುತ್ ತಂತಿ ದುರಸ್ತಿ ಕಾರ್ಯ ಮಾಡುತ್ತಿದ್ದ ವೇಳೆ, ಲೈನ್‌ಮನ್ ಪಾವೊಂಗಂ ಚಂಗ್ಲೊಯಿ ಅವರನ್ನು ಬಂಡುಕೋರರು ಹತ್ಯೆ ಮಾಡಿದ್ದಾರೆ.
ಆರೋಪಿಗಳನ್ನು ಬಂಧಿಸುವವರೆಗೆ ಪಾವೊಂಗಂ ಮೃತದೇಹವನ್ನು ಪಡೆದುಕೊಳ್ಳುವುದಿಲ್ಲ ಎಂದು ಬುಡಕಟ್ಟು ಸಮಿತಿ ಒಕ್ಕೂಟವು ಹೇಳಿದೆ.
ಈ ಹತ್ಯೆಯನ್ನು ಖಂಡಿಸಿರುವ ಕುಕಿ ನಾಗರಿಕ ಕ್ರಿಯಾ ಸಮಿತಿಯು, 'ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ನಾಗರಿಕರ ಮೇಲಿನ ದಾಳಿಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದೆ. ಅಲ್ಲದೇ ಇದರ ಹಿಂದೆ ನಾಗಾ ಗುಂಪುಗಳ ಕೈವಾಡವಿದೆ ಎಂದು ಆರೋಪಿಸಿದೆ.
ಮತ್ತೊಂದು ಘಟನೆಯಲ್ಲಿ ಕಾಂಗ್ಪೋಕ್ಪಿ ಜಿಲ್ಲೆಯ ಎರಡು ಗ್ರಾಮಗಳಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ಹಲವು ಮನೆಗಳಿಗೆ ಬೆಂಕಿ ಹಂಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

