ಕಾಸರಗೋಡು: ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಸಹಕಾರ ಬಲಪಡಿಸುವ ನಿಟ್ಟಿನಲ್ಲಿ, ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ನವದೆಹಲಿಯ ಸಿಎಸ್‍ಐಆರ್-ರಾಷ್ಟ್ರೀಯ ಭೌತಿಕ ಪ್ರಯೋಗಾಲಯವು ತಿಳಿವಳಿಕಾ ಒಪ್ಪಂದಕ್ಕೆ ಸಹಿ ಹಾಕಿವೆ.
ಈ ಸಹಯೋಗವು ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆ ಹಾಗೂ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ವಿನಿಮಯ ಕಾರ್ಯಕ್ರಮಗಳಂತಹ ಕ್ಷೇತ್ರಗಳ ಮೇಲೆ ಗಮನಹರಿಸಲಿದೆ.
ನ್ಯಾಷನಲ್ ಫಿಸಿಕಲ್ ಲ್ಯಾಬೊರೇಟರಿ(ಎನ್‍ಪಿಎಲ್)ಯಲ್ಲಿ ನಡೆದ ಸಮಾರಂಭವೊಂದರಲ್ಲಿ, ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಸಿಧು ಪಿ. ಅಲ್ಗೂರ್ ಅವರ ಉಪಸ್ಥಿತಿಯಲ್ಲಿ ಪ್ರಭಾರ ಕುಲಸಚಿವ ಪೆÇ್ರ. ವಿ.ಬಿ. ಸಮೀರ್ ಕುಮಾರ್ ಮತ್ತು ಎನ್‍ಪಿಎಲ್ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಉಪ ಮುಖ್ಯಸ್ಥ ಡಾ. ರಾಜೀವ್ ಸಿಂಗ್ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದರು. ಎನ್‍ಪಿಎಲ್ ನಿರ್ದೇಶಕ ಪೆÇ್ರ.ವೇಣುಗೋಪಾಲ ಆಚಂತ, ಪೆÇ್ರ.ಕೆ.ಜೆ. ಥಾಮಸ್, ಪೆÇ್ರ.ಇ.ಪ್ರಸಾದ್, ಡಾ.ಪೂನಂ ಅರೋರಾ, ಡಾ.ಬಶೀದ್ ಜಿ.ಎ., ಡಾ.ನವೀನ್ ಗಾರ್ಗ್, ಡಾ.ಎಸ್.ಪಿ.ಸಿಂಗ್, ಮತ್ತು ಡಾ.ಆರ್.ಪಿ.ಅಲೋಶಿಯಸ್ ಮೊದಲಾದವರು ಭಾಗವಹಿಸಿದ್ದರು.
ತಿಳುವಳಿಕೆ ಒಪ್ಪಂದದ ಅಂಗವಾಗಿ, ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯದ ನಿಯೋಗ ಎನ್‍ಪಿಎಲ್ ನಲ್ಲಿರುವ 'ಟೈಮ್‍ಕೀಪರ್' ಎಂದೇ ಖ್ಯಾತಿ ಪಡೆದಿರುವ 'ಭಾರತೀಯ ಪ್ರಮಾಣಿತ ಸಮಯ ವಿಭಾಗ'ಮತ್ತು 'ಡೈಲ್ಯೂಷನ್ ರೆಫ್ರಿಜರೇಟರ್ ಪ್ರಯೋಗಾಲಯ' ಸೇರಿದಂತೆ ವಿವಿಧ ಸಂಶೋಧನಾ ಸೌಲಭ್ಯಗಳಿಗೆ ಭೇಟಿ ನೀಡಲಾಯಿತು. ಈ ಮೂಲಕ ಈ ಎರಡು ಸಂಸ್ಥೆಗಳ ನಡುವಿನ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಹಾಗೂ ಮುಂದಿನ ದಿನಗಳಲ್ಲಿ ಜಂಟಿ ಸಂಶೋಧನೆ ಕೈಗೊಳ್ಳುವ ಕುರಿತು ವಿವಿಧ ವಿಭಾಗಗಳ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿ, ಯೋಜನೆ ತಯಾರಿಸಲು ತೀರ್ಮಾನಿಸಲಾಯಿತು.



