ನವದೆಹಲಿ: ಕೇಂದ್ರ ಸರಕಾರವು ಪ್ರಿಸ್ಕ್ರಿಪ್ಷನ್ ಔಷಧಿಗಳ ಮಾರಾಟ ನಿಯಂತ್ರಕ ಮೇಲ್ವಿಚಾರಣೆಯನ್ನು ಬಲಪಡಿಸಲು ದೇಶದ ಎಲ್ಲಾ ಔಷಧಿ ಅಂಗಡಿಗಳಲ್ಲಿ ಕಡ್ಡಾಯ ಸಿಸಿಟಿವಿ ಕಣ್ಗಾವಲು ವ್ಯವಸ್ಥೆಯನ್ನು ಪ್ರಸ್ತಾವಿಸಿದೆ.
ಶೆಡ್ಯೂಲ್ ಎಚ್, ಎಚ್1 ಮತ್ತು ಎಕ್ಸ್ ಔಷಧಿಗಳ ಮೇಲ್ವಿಚಾರಣೆಯನ್ನು ಮತ್ತಷ್ಟು ಬಿಗಿಗೊಳಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 'ಔಷಧಿ ನಿಯಮಗಳು, 1945'ಕ್ಕೆ ತಿದ್ದುಪಡಿ ತರಲು ಪ್ರಸ್ತಾವವನ್ನು ಸಲ್ಲಿಸಿದೆ.
ಅನಧಿಕೃತವಾಗಿ ಈ ಔಷಧಿಗಳ ಮಾರಾಟ ಹಾಗೂ ಲಭ್ಯತೆಯನ್ನು ತಡೆಯುವ ನಿಟ್ಟಿನಲ್ಲಿ ಎಲ್ಲ ಔಷಧಿ ಅಂಗಡಿಗಳಲ್ಲಿ ಸಿಸಿಟಿವಿ ಕಣ್ಗಾವಲು ಕಡ್ಡಾಯಗೊಳಿಸಬೇಕೆಂದು ಕರಡು ಅಧಿಸೂಚನೆಯು ಶಿಫಾರಸು ಮಾಡಿದೆ.
ಪ್ರಸ್ತಾವಿತ ಸಿಸಿಟಿವಿ ಕಣ್ಗಾವಲು ವ್ಯವಸ್ಥೆಯು ಔಷಧೀಯ ಪೂರೈಕೆ ಸರಪಳಿಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸಲಿದ್ದು, ಸಾರ್ವಜನಿಕ ಆರೋಗ್ಯ ರಕ್ಷಣೆಯನ್ನು ಇನ್ನಷ್ಟು ಬಲಪಡಿಸಲಿದೆ ಎಂದು ಸಚಿವಾಲಯ ತಿಳಿಸಿದೆ.
ಸೆ.9ರಂದು ಹೊರಡಿಸಲಾದ ಕರಡು ಅಧಿಸೂಚನೆಯ ಪ್ರಕಾರ, ಸಿಸಿಟಿವಿ ದೃಶ್ಯಾವಳಿಗಳನ್ನು ಕನಿಷ್ಠ ಮೂರು ತಿಂಗಳವರೆಗೆ ಸಂರಕ್ಷಿಸಿಡಬೇಕು ಎಂದು ಸೂಚಿಸಲಾಗಿದೆ.
ಸಚಿವಾಲಯವು ಕರಡು ಪ್ರಸ್ತಾವನೆಗೆ ಸಂಬಂಧಿಸಿದಂತೆ 30 ದಿನಗಳಲ್ಲಿ ಪಾಲುದಾರರು ಹಾಗೂ ಸಾರ್ವಜನಿಕರಿಂದ ಸಲಹೆಗಳು ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಿದೆ.
ಸುಮಾರು 15 ಲಕ್ಷ ಕೆಮಿಸ್ಟ್‌ಗಳು, ಚಿಲ್ಲರೆ ಔಷಧಿ ವ್ಯಾಪಾರಿಗಳು ಮತ್ತು ವಿತರಕರನ್ನು ಪ್ರತಿನಿಧಿಸುವ ಅಖಿಲ ಭಾರತ ಕೆಮಿಸ್ಟ್‌ಗಳು ಮತ್ತು ಡ್ರಗಿಸ್ಟ್‌ಗಳ ಸಂಘವು (ಎಐಒಸಿಡಿ) ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸರಕಾರವನ್ನು ಆಗ್ರಹಿಸಿದೆ.
ದೇಶಾದ್ಯಂತ ಲಕ್ಷಾಂತರ ಕೆಮಿಸ್ಟ್‌ಗಳು ಪ್ರತಿದಿನ ಸುಮಾರು 140 ಕೋಟಿ ನಾಗರಿಕರಿಗೆ ಔಷಧಿಗಳನ್ನು ಒದಗಿಸುತ್ತಿದ್ದು, ಗಂಭೀರ ಅನಿಯಮಿತತೆಗಳು ಅತ್ಯಂತ ಸೀಮಿತವಾಗಿವೆ ಎಂದು ಸಂಘದ ಅಧ್ಯಕ್ಷ ಜೆ.ಎಸ್.ಶಿಂದೆ ಮತ್ತು ಪ್ರಧಾನ ಕಾರ್ಯದರ್ಶಿ ರಾಜೀವ್ ಸಿಂಘಾಲ್ ಹೇಳಿದ್ದಾರೆ.
ಪ್ರತಿ ಔಷಧಿ ಅಂಗಡಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳು, ಡಿವಿಆರ್/ಎನ್‌ವಿಆರ್ ಸಿಸ್ಟಮ್‌ಗಳನ್ನು ಕಡ್ಡಾಯಗೊಳಿಸುವುದರಿಂದ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯಾಪಾರಿಗಳ ಮೇಲೆ 50,000 ರೂ.ಗಳಿಂದ 1 ಲಕ್ಷ ರೂ.ಗಳವರೆಗೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ ಎಂದು ಎಐಒಸಿಡಿ ಕಳವಳ ವ್ಯಕ್ತಪಡಿಸಿದೆ.
ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಆಗಾಗ್ಗೆ ವಿದ್ಯುತ್ ಕಡಿತ, ಕಳಪೆ ಇಂಟರ್ನೆಟ್ ಸಂಪರ್ಕ ಮತ್ತು ನುರಿತ ತಂತ್ರಜ್ಞರ ಕೊರತೆಯಿಂದಾಗಿ ನಿರಂತರ ಸಿಸಿಟಿವಿ ರೆಕಾರ್ಡಿಂಗ್ ಕಷ್ಟಕರ ಹಾಗೂ ಅಪ್ರಾಯೋಗಿಕವಾಗಬಹುದು ಎಂದೂ ಸಂಘವು ಬೆಟ್ಟು ಮಾಡಿದೆ.
ಸಾರ್ವಜನಿಕ ಸುರಕ್ಷತೆಗಾಗಿ ಸಿಸಿಟಿವಿ ಕಣ್ಗಾವಲು ಅತ್ಯಗತ್ಯವೆಂದು ಪರಿಗಣಿಸುವುದಾದರೆ ಸರಕಾರವೇ ಇದರ ಸ್ಥಾಪನೆ ಮತ್ತು ನಿರ್ವಹಣೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಎಐಒಸಿಡಿ ವಿನಂತಿಸಿದೆ.
ಪೂರೈಕೆ ಸರಪಳಿಯಲ್ಲಿ ಪ್ರಿಸ್ಕ್ರಿಪ್ಷನ್ ಮತ್ತು ನಿಯಂತ್ರಿತ ಔಷಧಿಗಳ ಮೇಲ್ವಿಚಾರಣೆಯನ್ನು ಬಲಪಡಿಸಲು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ನಡೆಸುತ್ತಿರುವ ಪ್ರಯತ್ನಗಳ ಭಾಗವಾಗಿ ಈ ಪ್ರಸ್ತಾವನೆಯನ್ನು ಮುಂದಿಡಲಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

