ಕಾಸರಗೋಡು: ನಗರದಲ್ಲಿ ಪಾರ್ಕಿಂಗ್ ಅವ್ಯವಸ್ಥೆ ಪಾದಚಾರಿಗಳನ್ನು ಹೈರಾಣಾಗಿಸುತ್ತಿದೆ. ನಗರದ ಬಹುತೇಕ ಪ್ರದೇಶದಲ್ಲಿ ವಾಹನಚಾಲಕರು ಪಾದಚಾರಿಗಳು ಸಂಚರಿಸುವ ಫುಟ್‍ಪಾತನ್ನೇ ಆಕ್ರಮಿಸಿಕೊಳ್ಳುತ್ತಿದ್ದು, ಪಾದಚಾರಿಗಳು ನಡೆಯಲು ಮುಖ್ಯ ರಸ್ತೆಯನ್ನೇ ಬಳಸಿಕೊಳ್ಳಬೇಕಾಗುತ್ತಿದೆ.
ಕಾಸರಗೋಡು ಹೊಸ ಬಸ್ ನಿಲ್ದಾಣ, ಎಂ.ಜಿ ರಸ್ತೆ, ಹಳೇ ಬಸ್ ನಿಲ್ದಾಣ, ಮಾರ್ಕೆಟ್ ರಸ್ತೆ, ಚಕ್ರಬಜಾರ್, ಬ್ಯಾಂಕ್ ರಸ್ತೆ ಸೇರಿದಂತೆ ನಾನಾ ಕಡೆ ಖಾಸಗಿ ವಾಹನಗಳು ಫುಟ್‍ಪಾತ್‍ನಲ್ಲೇ ಪಾರ್ಕ್ ನಡೆಸುತ್ತಿದೆ. ಇದರಿಂದ ಪಾದಚರಿಗಳಿಗೆ ನಡೆದಾಡಲು ಸಮಸ್ಯೆಯಾಗುವುದರ ಜತೆಗೆ ಟ್ರಾಫಿಕ್ ಜಾಮ್‍ಗೂ ಕಾರಣವಾಗುತ್ತಿದೆ. ನಗರದ ಹಳೇ ಬಸ್ ನಿಲ್ದಾಣವಂತೂ ಬೀದಿ ಬದಿ ವ್ಯಾಪಾರಿಗಳಿಂದ ತುಂಬಿಕೊಂಡಿದ್ದು, ಇವರನ್ನು ಯಾರೂ ಕೇಳುವ ಸ್ಥಿತಿಯಲ್ಲಿಲ್ಲ. ಬೀದಿ ಬದಿ ವ್ಯಾಪರ ನಮ್ಮ ಹಕ್ಕು ಎಂಬ ರೀತಿಯಲ್ಲಿ ಕೆಲವೊಂದು ವ್ಯಾಪಾರಿಗಳು ವರ್ತಿಸುತ್ತಿದ್ದು, ಫುಟ್‍ಪಾತ್ ಆಕ್ರಮಿಸಿ ವ್ಯಾಪಾರ ನಡೆಸುತ್ತಿದ್ದಾರೆ. ಜತೆಗೆ ತಳ್ಳುಗಾಡಿಗಳೂ ಫುಟ್‍ಪಾತಲ್ಲೇ ಕಾರ್ಯಾಚರಿಸುತ್ತಿದೆ. ಫುಟ್‍ಪಾತ್ ಅಂಚಿಗೆ ಆಹಾರ ವಿತರಿಸುವ ವ್ಯಾಪಾರಿಗಳು ಆಸನಗಳನ್ನೂ ರಸ್ತೆಯಲ್ಲೇ ಇರಿಸಿ ಗ್ರಾಹಕರಿಗೆ ಸೌಕರ್ಯ ಒದಗಿಸುತ್ತಿದ್ದಾರೆ. ಹಣ್ಣಿನ ವ್ಯಾಪಾರಿಗಳೂ ರಸ್ತೆ, ಫುಟ್‍ಪಾತ್ ಜಾಗವನ್ನು ಆಕ್ರಮಿಸಿಕೊಂಡು ವ್ಯಪಾರ ನಡೆಸುತ್ತಿದ್ದಾರೆ. ಕೆಲವು ದ್ವಿಚಕ್ರವಾಹನಗಳೂ ಫುಟ್ಪಾತ್‍ನಲ್ಲೇ ಸಂಚರಸುತ್ತಿದೆ. ಫುಟ್‍ಪಾತ್‍ಗಳನ್ನು ವಿದ್ಯುತ್ ಕಂಬಗಳು ಹಾಗೂ ಟ್ರಾನ್ಸ್‍ಫಾರ್ಮರ್‍ಗಳು ಆಕ್ರಮಿಸಿಕೊಂಡಿದೆ.
ನಗರದಲ್ಲಿನ ಬೀದಿಬದಿ ವ್ಯಾಪಾರಿಗಳಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಹೊಸ ಬಸ್ ನಿಲ್ದಾಣ ವಠಾರದಲ್ಲಿ ನಗರಸಭೆ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಿಸಿದ್ದರೂ, ಇಲ್ಲಿಗೆ ಬೀದಿ ಬದಿ ವ್ಯಾಪಾರಿಗಳು ತೆರಳುವುದಕ್ಕೆ ಹಿಂದೇಟು ಹಾಕುತ್ತಿರುವುದರಿಂದ ಬಹುತೇಕ ಕೊಠಡಿಗಳು ಇನ್ನೂ ಮುಚ್ಚಿಕೊಂಡಿದೆ. ಬೀದಿ ಬದಿ ವ್ಯಾಪಾರಿಗಳು ಮಾತ್ರ ನಗರದಲ್ಲೇ ತಮ್ಮ ವ್ಯಾಪರ ಮುಂದುವರಿಸಿದ್ದಾರೆ.
ನಗರಸಭೆ ಕೃಪೆ?..:
ವಾಹನ ದಟ್ಟಣೆಯ ಸಮಯದಲ್ಲಿ ಎಂ.ಜಿ ರಸ್ತೆ, ಕಾಸರಗೋಡು ಹಳೇ ಬಸ್ ನಿಲ್ದಾಣ, ಬ್ಯಾಂಕ್ ರಸ್ತೆ ಸೇರಿದಂತೆ ಬಹುತೇಕ ಕಡೆ ವ್ಯಾಪಕವಗಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ರಸ್ತೆ ಬದಿ ತಳ್ಳಿಗಾಡಿ, ಇತರ ಹಣ್ಣಿನ ವ್ಯಾಪಾರಿಗಳಿಂದ ನಗರದಲ್ಲಿನ ಸಂಚಾರ ಸಮಸ್ಯೆ ಮತ್ತಷ್ಟು ಜಟಿಲಗೊಳ್ಳುತ್ತಿದೆ. ನಗರದ ಟ್ರಾಫಿಕ್ ಪೊಲೀಸರು ಇವೆಲ್ಲವನ್ನೂ ಕಂಡೂ ಕಾಣದಂತೆ ವರ್ತಿಸುತ್ತಿರುವುದಾಗಿ ಸ್ಥಳೀಯ ವ್ಯಾಪಾರಿಗಳು ದೂರುತ್ತಾರೆ. ಪರವಾನಗಿ ಪಡೆದು ತೆರಿಗೆ ಪಾವತಿಸಿ ವ್ಯಾಪಾರ ನಡೆಸುತ್ತಿರುವವರನ್ನು ಅಣಕಿಸುವ ರೀತಿಯಲ್ಲಿ ನಗರದಲ್ಲಿ ಬೀದಿ ಬದಿ ವ್ಯಾಪಾರ ನಡೆಯುತ್ತಿದ್ದರೂ, ನಗರಸಭೆ ಈ ಬಗ್ಗೆ ಮೌನ ಮುರಿಯುತ್ತಿಲ್ಲ.
ಒಡೆದು ಹೋಗಿರುವ ಒಳಚರಂಡಿ ವ್ಯವಸ್ಥೆ, ಇಕ್ಕಟ್ಟಾದ ಹಾಗೂ ಡಾಂಬಾರು ಕಿತ್ತುಹೋಗಿ ಸಂಚಾರ ದುಸ್ತರವಾಗಿರುವ ನಗರದ ರಸ್ತೆಗಳನ್ನು ದುರಸ್ತಿಪಡಿಸುವಲ್ಲಿ ನಗರಸಭಾ ಆಡಳಿತ ಸಂಪೂರ್ಣ ವಿಫಲವಾಗಿರುವುದಾಗಿ ಪ್ರತಿಪಕ್ಷಗಳು ಆರೋಪಿಸುತ್ತಿದೆ.

