ಕಠ್ಮಂಡು: ನೇಪಾಳದಲ್ಲಿ ಪ್ರವಾಹದಿಂದ ಹಾನಿಗೆ ಒಳಗಾದ ಬೇತ್ರಾವತಿ ಪ್ರದೇಶದಲ್ಲಿ ಸಂಪರ್ಕವನ್ನು ಮರುಸ್ಥಾಪಿಸುವ ಉದ್ದೇಶದಿಂದ ಭಾರತವು 70 ಮೀಟರ್ ಉದ್ದದ ತಾತ್ಕಾಲಿಕ ಸೇತುವೆಯನ್ನು ಕಳುಹಿಸಿಕೊಟ್ಟಿದೆ.
'ನೇಪಾಳದ ರಸ್ತೆ ವಿಭಾಗಕ್ಕೆ ಸೇತುವೆಯನ್ನು ಶನಿವಾರ ಹಸ್ತಾಂತರಿಸಲಾಗಿದೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ಸರಕುಗಳು ಬರಲಿವೆ' ಎಂದು ಇಲ್ಲಿರುವ ಭಾರತದ ರಾಯಭಾರಿ ನವೀನ್ ಶ್ರೀವಾಸ್ತವ ಅವರು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮುಂದುವರಿದ ಕಾರ್ಯಾಚರಣೆ (ನುವಾಕೋಟ್ ವರದಿ): ಪ್ರವಾಹದಿಂದಾಗಿ ಚಿಲಿಮೆ ಜಲ ವಿದ್ಯುತ್ ಯೋಜನೆಯ ಸುರಂಗದಲ್ಲಿ ಆರು ಕಾರ್ಮಿಕರು ಸಿಲುಕೊಂಡಿದ್ದಾರೆ ಎಂಬ ಶಂಕೆಯಿದ್ದು, ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.
'ಭಾರತ ಹಾಗೂ ನೇಪಾಳದ ತಂಡವು ಭಾರಿ ಯಂತ್ರಗಳ ಸಹಾಯದಿಂದ ಸುಮಾರು 70 ಮೀಟರ್‌ಗಳಷ್ಟು ಉದ್ದದ ಜಾಗದಲ್ಲಿ ಕೆಸರು ಮತ್ತು ಅವಶೇಷಗಳನ್ನು ತೆರವು ಮಾಡುತ್ತಿದೆ' ಎಂದು ರಾಯಭಾರ ಕಚೇರಿ ತಿಳಿಸಿದೆ.
'ವಿದ್ಯುತ್ ಸ್ಥಾವರವು ಸುರಂಗದಿಂದ ಸುಮಾರು 60 ಮೀಟರ್ ಕೆಳಗಿದೆ. ರಕ್ಷಣಾ ಸ್ಥಳಕ್ಕೆ ಸಂಪರ್ಕ ರಸ್ತೆಯನ್ನೂ ನಿರ್ಮಿಸಲಾಗಿದೆ' ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

