ಕಾಸರಗೋಡು: ವಿನಾಯಕ ಚತುರ್ಥಿ ದಿನವಾದ ಸೆಪ್ಟೆಂಬರ್ 14ರಂದು ಕಾಸರಗೋಡು ಜಿಲ್ಲೆಯ ಎಲ್ಲಾ ರೇಷನ್ ಅಂಗಡಿಗಳಿಗೂ ರಜೆ ನೀಡುವಂತೆ ಬಿಜೆಪಿ ಕಣ್ಣೂರು ವಲಯ ಅಧ್ಯಕ್ಷ, ವಕೀಲ ಕೆ. ಶ್ರೀಕಾಂತ್ ಆಗ್ರಹಿಸಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಪ್ರತಿವರ್ಷ ವಿನಾಯಕ ಚತುರ್ಥಿ ದಿನವನ್ನು ಸ್ಥಳೀಯ ರಜಾದಿನವಾಗಿ ಸರ್ಕಾರ ಘೋಷಿಸುತ್ತಿದ್ದು, ಈ ವರ್ಷವೂ ಸೆ.14ರಂದು ಜಿಲ್ಲೆಯ ಸಂಸ್ಥೆಗಳಿಗೆ ರಜೆ ಘೋಷಿಸಿರುವ ಜಿಲ್ಲಾಡಳಿತದ ಕ್ರಮ ಸ್ವಾಗತಾರ್ಹ. ಪ್ರಸಕ್ತ ರಜೆ ಆದೇಶದಲ್ಲಿ ರೇಷನ್ ಅಂಗಡಿಗಳನ್ನು ಒಳಪಡಿಸದಿರುವುದು ಸರಿಯಾದ ಕ್ರಮವಲ್ಲ. ಹಿಂದಿನ ವರ್ಷಗಳಲ್ಲಿ ವಿನಾಯಕ ಚತುರ್ಥಿ ದಿನ ರೇಷನ್ ಅಂಗಡಿಗಳಿಗೂ ರಜೆ ನೀಡಲಾಗುತ್ತಿತ್ತು. ಈ ಬಾರಿ ರಜೆ ನೀಡದಿರುವುದರಿಂದ ರೇಷನ್ ವ್ಯಾಪಾರಿಗಳು ಮತ್ತು ಸಿಬ್ಬಂದಿಗೆ ವಿನಾಯಕ ಚತುರ್ಥಿ ಹಬ್ಬದಲ್ಲಿ ಪಾಲ್ಗೊಳ್ಳಲಾಗದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.
ಈ ಹಿಂದಿನ ವರ್ಷಗಳಂತೆ ಈ ವರ್ಷವೂ ಸೆಪ್ಟೆಂಬರ್ 14ರಂದು ಕಾಸರಗೋಡು ಜಿಲ್ಲೆಯ ಎಲ್ಲಾ ರೇಷನ್ ಅಂಗಡಿಗಳಿಗೂ ರಜೆ ವಿಸ್ತರಿಸಿ ವಿಶೇಷ ಆದೇಶ ಹೊರಡಿಸಬೇಕೆಂದು ಕೆ. ಶ್ರೀಕಾಂತ್ ಅವರು ಜಿಲ್ಲಾಧಿಕಾರಿಯನ್ನು ಮನವಿ ಮೂಲಕ ಆಗ್ರಹಿಸಿದ್ದಾರೆ.

