ಮುಂಬೈ: ಪ್ರಾಧ್ಯಾಪಕರೊಬ್ಬರು ಹಳೆಯ ವಿದ್ಯಾರ್ಥಿಗಳನ್ನು ಸೇರಿಸಿ ವಾಟ್ಸ್‌ಆಯಪ್ ಗ್ರೂಪ್ ರಚಿಸಿದ ಕಾರಣಕ್ಕಾಗಿ ಕಡ್ಡಾಯ ನಿವೃತ್ತಿ ನೀಡಿದ್ದ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್(ಟಿಐಎಸ್‌ಎಸ್)ನ ಆದೇಶವನ್ನು ಬಾಂಬೆ ಹೈಕೋರ್ಟ್ ರದ್ದುಗೊಳಿಸಿದೆ.
'ಉದ್ಯೋಗದಾತರ ಅನುಮತಿಯಿಲ್ಲದೇ, ನಿರ್ಧಾರ ಕೈಗೊಂಡಿದ್ದ ಕಾರಣಕ್ಕಾಗಿ ಸಾಧನೆ ಮಾಡಿದ ವ್ಯಕ್ತಿಯೊಬ್ಬರ ವೃತ್ತಿ ಜೀವನವನ್ನು ಕೊನೆಗೊಳಿಸಲು ಸಾಧ್ಯವಿಲ್ಲ' ಎಂದು ತಿಳಿಸಿದೆ.
ಪ್ರಾಧ್ಯಾಪಕ ಡಾ. ಸ್ವಪನ್ ಗರೈನ್ ಮೇಲೆ ವಿಧಿಸಲಾದ ಶಿಕ್ಷೆಯು ವಿಕೃತ ಹಾಗೂ ಅಸಮರ್ಪಕವಾಗಿದೆ. 'ತೆಂಗಿನಕಾಯಿ ಒಡೆಯಲು ಯಾರೂ ಕೂಡ ಸುತ್ತಿಗೆಯನ್ನು ಬಳಸುವುದಿಲ್ಲ' ಎಂಬ ಇಂಗ್ಲಿಷ್ ಬ್ಯಾರಿಸ್ಟರ್, ನ್ಯಾಯಮೂರ್ತಿ ಲಾರ್ಡ್ ಡಿಪ್ಲಕ್ ಅವರ ಮಾತನ್ನು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.
'ಹಳೆಯ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ವಾಟ್ಸ್‌ಆಯಪ್ ಗ್ರೂಪ್ ರಚಿಸಿದ ಕಾರಣಕ್ಕೆ ಕಡ್ಡಾಯ ನಿವೃತ್ತಿಯನ್ನು ಒಪ್ಪಲು ಸಾಧ್ಯವಿಲ್ಲ. ಗ್ರೂಪ್‌ನಲ್ಲಿ ಕಾಲೇಜು ವಿದ್ಯಾರ್ಥಿಗಳ ಉದ್ಯೋಗದ ನೇಮಕಾತಿ ವಿಚಾರವನ್ನು ಚರ್ಚಿಸಿದ್ದು ಬಿಟ್ಟರೆ, ಹಣದ ವಹಿವಾಟು ನಡೆದಿಲ್ಲ. ಹೀಗಾಗಿ, ವಜಾಗೊಂಡ ದಿನದಿಂದ ವಯೋನಿವೃತ್ತಿಯ ದಿನದವರೆಗೂ ಅರ್ಧದಷ್ಟು ವೇತನ ಪಾವತಿಸಬೇಕು' ಎಂದು ನ್ಯಾಯಮೂರ್ತಿಗಳಾದ ಎಂ.ಎಸ್ ಕಾರ್ಣಿಕ್, ಸಂದೇಶ್ ಪಾಟೀಲ್ ಅವರ ನೇತೃತ್ವದ ನ್ಯಾಯಪೀಠವು ಸೆಪ್ಟೆಂಬರ್ 16ರಂದು ನೀಡಿದ ತೀರ್ಪಿನಲ್ಲಿ ಆದೇಶಿಸಿದೆ.
ಟಿಐಎಸ್‌ಎಸ್‌ನಲ್ಲಿ ಪದವಿ ಪಡೆದ ಡಾ.ಸ್ವಪನ್ ಗರೈನ್ ಅವರು ಅದೇ ಸಂಸ್ಥೆಯಲ್ಲಿ 1985ರಲ್ಲಿ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ್ದರು. ವಾಟ್ಸ್‌ಆಯಪ್ ಗ್ರೂಪ್ ರಚಿಸಿದಕ್ಕಾಗಿ 2017ರಲ್ಲಿ ಸಂಸ್ಥೆಯಿಂದ ಕಡ್ಡಾಯ ನಿವೃತ್ತಿ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಸ್ವಪನ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

