ನವದೆಹಲಿ: ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ಹೆಸರುಗಳನ್ನು ತೆಗೆದುಹಾಕಿರುವ ಕುರಿತು ಸಲ್ಲಿಕೆಯಾಗಿರುವ 37 ಲಕ್ಷಕ್ಕೂ ಹೆಚ್ಚು ಮೇಲ್ಮನವಿ ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿವೆ ಎಂದು ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಇಲ್ಲಿಯವರೆಗೆ 38.20 ಲಕ್ಷ ಮೇಲ್ಮನವಿಗಳು ಸಲ್ಲಿಕೆಯಾಗಿವೆ. ಈ ಪೈಕಿ ಸುಪ್ರೀಂ ಕೋರ್ಟ್ ನೇಮಿಸಿದ ನ್ಯಾಯಮಂಡಳಿಗಳು 1.02 ಲಕ್ಷ ಮೇಲ್ಮನವಿ ಅರ್ಜಿಗಳನ್ನು ಇತ್ಯರ್ಥಪಡಿಸಿವೆ ಎಂದು ಆಯೋಗ ಅಫಿಡವಿಟ್‌ನಲ್ಲಿ ಸಲ್ಲಿಸಿದೆ.
ವಿಧಾನಸಭಾ ಕ್ಷೇತ್ರವಾರು ಮಾಹಿತಿ ಬಹಿರಂಗಕ್ಕೆ ಕೋರಿ ಪಶ್ಚಿಮ ಬಂಗಾಳದ ಕಾಂಗ್ರೆಸ್‌ನ ಎಸ್‌ಐಆರ್ ಸಮಿತಿ ಅಧ್ಯಕ್ಷ ಪ್ರಸೇನ್‌ಜಿತ್ ಬೋಸ್ ಸಲ್ಲಿಸಿದ್ದ ಅರ್ಜಿಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯಾ ಬಾಗ್ಚಿ, ವಿ. ಮೋಹನಾ ಅವರ ಪೀಠ ಜುಲೈ 17ರಂದು ಪರಿಗಣನೆಗೆ ತೆಗೆದುಕೊಂಡಿತ್ತು. ಈ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ಪೀಠವು ಚುನಾವಣಾ ಆಯೋಗಕ್ಕೆ ಸೂಚಿಸಿತ್ತು.
ಈ ಸಂಬಂಧ ಆಯೋಗ ಪ್ರಮಾಣಪತ್ರ ಸಲ್ಲಿಸಿದ್ದು, 'ಎಸ್‌ಐಆರ್‌ಗೆ ಸಂಬಂಧಿಸಿದ 38.20 ಲಕ್ಷ ಮೇಲ್ಮನವಿಗಳ ಪೈಕಿ 1.02 ಲಕ್ಷ ಇತ್ಯರ್ಥವಾಗಿವೆ. 37.18 ಲಕ್ಷ ಅರ್ಜಿಗಳು ಬಾಕಿಯಿವೆ' ಎಂದು ಮಾಹಿತಿ ನೀಡಿದೆ.

