ಲಖನೌ: ಕೊಲೆ ಆರೋಪಗಳಿಗೆ ಸಂಬಂಧಿಸಿದ ಹಲವು ಪ್ರಕರಣಗಳ ವಿಚಾರಣೆಯನ್ನು ತಮ್ಮ ನ್ಯಾಯಾಲಯದಿಂದ ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸಿರುವ ಕುರಿತು ಉತ್ತರ ಪ್ರದೇಶದ ಮುಜಫ್ಪರ್‌ನಗರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರು ತಕರಾರು ಎತ್ತಿದ್ದಾರೆ.
ಕಳೆದ ಕೆಲವು ತಿಂಗಳುಗಳಲ್ಲಿ 11 ಪ್ರತ್ಯೇಕ ಪ್ರಕರಣಗಳಲ್ಲಿ 23 ಮಂದಿಗೆ ಮರಣ ದಂಡನೆ ವಿಧಿಸಿದ ಕಾರಣಕ್ಕಾಗಿ ದಿವಾಕರ್ ಅವರು ಸುದ್ದಿಯಲ್ಲಿದ್ದರು. ಈಗ 93 ಕೊಲೆ ಪ್ರಕರಣಗಳ ವಿಚಾರಣೆಯನ್ನು ತಮ್ಮ ನ್ಯಾಯಾಲಯದಿಂದ ವರ್ಗಾಯಿಸಿರುವ ಜಿಲ್ಲಾ ಪ್ರಧಾನ ನ್ಯಾಯಾಧೀಶರ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರಕರಣವೊಂದರಲ್ಲಿ ಸಾಕ್ಷ್ಯಗಳ ಕೊರತೆಯ ಕಾರಣದಿಂದ ಆರೋಪಿಯನ್ನು ಖುಲಾಸೆಗೊಳಿಸಿ ಹೊರಡಿಸಿರುವ ಆದೇಶದಲ್ಲಿ, 'ನ್ಯಾಯವನ್ನು ಒದಗಿಸುವುದು ನ್ಯಾಯಾಧೀಶರ ಕರ್ತವ್ಯವಾಗಿರುತ್ತದೆ. ಆದರೆ ಸ್ವತಃ ನ್ಯಾಯಾಧೀಶರೇ 'ಅನ್ಯಾಯ'ವನ್ನು ಎದುರಿಸಿದರೆ ಅವರು ಎಲ್ಲಿಗೆ ಹೋಗಬೇಕು' ಎಂದು ಪ್ರಶ್ನಿಸಿದ್ದಾರೆ.
'ಬೇರೆ ಜಿಲ್ಲೆಗೆ ವರ್ಗಾವಣೆ ಮಾಡುವುದಾಗಿ ಉತ್ತರಪ್ರದೇಶದ ಮಾಫಿಯಾ ಅಥವಾ ಗ್ಯಾಂಗ್‌ಸ್ಟರ್ ಬೆದರಿಕೆ ಹಾಕಿದ್ದಾರೆ. ಆದರೆ ಎಂಥ ಸಂದರ್ಭದಲ್ಲಿಯೂ ನನ್ನ ವೃತ್ತಿಬದ್ಧತೆ ಬದಲಾಗುವುದಿಲ್ಲ. ಹೇಡಿ ಎಂದು ಕರೆಸಿಕೊಳ್ಳುವುದಕ್ಕಿಂತ ಸಾಯುವುದೇ ಒಳ್ಳೆಯದು' ಎಂದು ಹೇಳಿದ್ದಾರೆ.

