ಪೆರ್ಲ: ಹಿಂದುಳಿದವರು ಹಾಗೂ ತುಳಿತಕ್ಕೊಳಗಾದವರನ್ನು ಒಟ್ಟು ಸೇರಿಸಿಕೊಂಡು ನಡೆಸುವ ಗುರುಜಯಂತಿ ಕಾರ್ಯಕ್ರಮಗಳು ಹೆಚ್ಚು ಅರ್ಥಪೂರ್ಣವಾಗಲು ಸಾಧ್ಯ ಎಂಬುದಾಗಿ ಪ್ರಸೂತಿ ತಜ್ಞ ಡಾ. ಗೀತಪ್ರಕಾಶ್ ವಿಟ್ಲ ತಿಳಿಸಿದ್ದಾರೆ.
ಅವರು ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಪೆರ್ಲ ಘಟಕ ವತಿಯಿಂದ ಪೆರ್ಲ ವ್ಯಾಪಾರಿ ಭವನ ಸಭಾಂಗಣದಲ್ಲಿ ಭಾನುವಾರ ನಡೆದ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ, ಗೌರವಾರ್ಪಣೆ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ದಿಕ್ಸೂಚಿ ಭಾಚಣ ಮಾಡಿದರು. ಜಾತಿ ಸಂಘಟನೆಗಳು ಸಮಾಜದ ಜನತೆಯ ಶ್ರೇಯೋಭಿವೃದ್ಧಿ ಜತೆಗೆ ಸಾಮಾಜಿಕ ಅಭಿವೃದ್ಧಿಯಲ್ಲೂ ಕೈಜೋಡಿಸಬೇಕು. ಗುರುಸಂದೇಶವನ್ನು ಪಾಲಿಸಿಕೊಂಡು, ಸಮುದಾಯವನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಜತೆಗೆ ಸಮಾಜದ ಧರ್ಮಪ್ರಬೋಧನೆಯ ಕೇಂದ್ರಗಳಾಗಿರುವ ಗುರುಮಂದಿರಗಳನ್ನು ಬಲಿಷ್ಠಗೊಳಿಸಲು ಸಮಾಜದ ಜನತೆ ಮುಂದಾಗಬೇಕು ಎಂದು ತಿಳಿಸಿದರು.
ಸಿಬಿಐ ಬೆಂಗಳೂರು ಪಬ್ಲಿಕ್ ಪ್ರೋಸಿಕ್ಯೂಟರ್ ಶಿವಾನಂದ ಪೆರ್ಲ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸಂಘಟನೆ ಬಲಪಡಿಸುವುದರ ಜತೆಗೆ ಮಕ್ಕಳಿಗೆ ಸೂಕ್ತ ಶಿಕ್ಷಣ ನೀಡಿ, ಅವರನ್ನು ಸ್ವಾವಲಂಬಿಗಳನ್ನಾಗಿಸುವಲ್ಲಿ ಹೆತ್ತವರು ಗಮನಹರಿಸಬೇಕು. ದೇಗುಲ ಪ್ರವೇಶಕ್ಕೆ ಅವಕಾಶವಿಲ್ಲದ ಕಾಲಘಟ್ಟದಲ್ಲಿ 80ಕ್ಕೂ ಹೆಚ್ಚು ದೇಗುಲಗಳನ್ನು ನಿರ್ಮಿಸಿ ಸಾಮಾಜಿಕ ಕ್ರಾಂತಿಗೆ ಕಾರಣವಾಗಿರುವ ಮಹಾನ್ದಾರ್ಶನಿಕ ನಾರಾಯಣಗುರುಗಳು ಪ್ರಾಥ:ಸ್ಮರಣೀಯರಾಗಿದ್ದಾರೆ ಎಂದು ತಿಳಿಸಿದರು.
ಇನ್ನೊಬ್ಬ ಮುಖ್ಯ ಅತಿಥಿ ಬದಿಯಡ್ಕ ಅಬಕಾರಿ ಅಧಿಕಾರಿ ಜನಾರ್ದನ ನೇರಪ್ಪಾಡಿ ಮಾತನಾಡಿ, ಅತಿಯಾದ ಮೊಬೈಲ್ ಬಳಕೆ ಮತ್ತು ಮಾದಕ ದ್ರವ್ಯ ವ್ಯಸನ ಸಮಾಜದ ಸ್ವಾಸ್ಥ್ಯ ಕದಡುತ್ತಿದ್ದು, ಮಕ್ಕಳು ಮತ್ತು ಯುವಜನತೆ ಇದರ ದಾಸರಾಗದಂತೆ ಹೆತ್ತವರು ನಿಗಾವಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭ ಕರಾಟೆ ತರಬೇತುದಾರೆ, ಕಾಸರಗೋಡು ವಾರಿಯರ್ಸ್ ಕರಾಟೆ ಅಕಾಡಮಿಯ ಸೌಮ್ಯಾ ಅವಿನಾಶ್ ಚೆಂಬ್ರಕಾನ ಹಾಗೂ ಹಿರಿಯ ನಾಟಿ ವೈದ್ಯೆ ಲಕ್ಷ್ಮೀ ಕಾನ ಅವರನ್ನು ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಗೌರವರ್ಪಣೆ, ಎಸ್ಸೆಸೆಲ್ಸಿ-ಪ್ಲಸ್ಟು ವಿಭಾಗದಲ್ಲಿ ಎಲ್ಲಾ ವಿಷಯಗಳಲ್ಲಿ ಎಪ್ಲಸ್ ಅಂಕಪಡೆದವರಿಗೆ, ಪದವಿ, ಸ್ನಾತಕೋತ್ತರ ವಿಭಾಗದಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಇದೇ ಸಂದರ್ಭ ನಿವೃತ್ತ ಶಿಕ್ಷಕ ಉಮೇಶ್ ಕೆ. ಪೆರ್ಲ ಅವರು ಕೊಡಮಾಡುವ ದತ್ತಿನಿಧಿ ಪ್ರಶಸ್ತಿಯನ್ನು ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರೀ ಹೈಯರ್ಸೆಕೆಂಡರಿ ಶಾಲಾ ವಿದ್ಯಾರ್ಥಿನಿ ರಿಷಿಕಾ ಅವರಿಗೆ ನೀಡಲಾಯಿತು. ವಿಶೇಷ ಸಾಧನೆಯೊಂದಿಗೆ ಕನೂನುಪದವಿ ಪಡೆದಿರುವ ಕುಕ್ಕಾಜೆಯ ದೇವೀಪ್ರಸಾದ್ ಅವರಿಗೆ ವಿಶೇಷ ಸನ್ಮಾನ ನಡೆಯಿತು.
ಯಶೋದಾ ಕಾನ ತುಳು-ಕನ್ನಡ ಸ್ವರಚಿತ ಕವನ ವಾಚಿಸಿದರು. ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮಕ್ಕೆ ಮೊದಲು ಶ್ರೀನಾರಾಯಣಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು. ಬಿಲ್ಲವ ಮಹಿಳಾ ಸಮಿತಿ ಅಧ್ಯಕ್ಷ ರುಕ್ಮಿಣಿ ಸುವರ್ಣ ದೀಪ ಪ್ರಜ್ವಲಿಸಿದರು. ಸ್ವೀಕೃತಿ ಕಾನ ಪ್ಪರಾರ್ಥನೆ ಹಾಡಿದರು. ಸಹನಾ ರಘುರಾಮ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಿಲ್ಲವ ಸಂಘ ಕಾರ್ಯದರ್ಶಿ ಅಖಿಲೇಶ್ ಕಾನ ಸ್ವಾಗತಿಸಿದರು. ಪುರುಷೋತ್ತಮ ಬಿ.ಎಂ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಅಮಿತಾ ಎಂ. ಕಾಟುಕುಕ್ಕೆ ವಂದಿಸಿದರು.



