ನವದೆಹಲಿ: ಮಕ್ಕಳ ಸುರಕ್ಷತೆಗೆ ಸಂಬಂಧಿಸಿದ ವಿಚಾರಗಳನ್ನು ನೇರವಾಗಿ ಸೈಬರ್ ಅಪರಾಧ ಪೋರ್ಟಲ್‌ನಲ್ಲಿ ವರದಿ ಮಾಡಲು ಟೆಕ್ ದಿಗ್ಗಜ ಸಂಸ್ಥೆ ಗೂಗಲ್ ಒಪ್ಪಿಕೊಂಡಿದೆ.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕುರಿತಂತೆ ತನಿಖಾ ಸಂಸ್ಥೆಗಳಿಗೆ ವರದಿ ಮಾಡಲು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಸಾಮಾಜಿಕ ಜಾಲತಾಣಗಳ ಒಡೆತನ ಹೊಂದಿರುವ 'ಮೆಟಾ' ಸಂಸ್ಥೆ ಈಚೆಗೆ ಸಮ್ಮತಿ ಸೂಚಿಸಿತ್ತು. ಇದರ ಬೆನ್ನಲ್ಲೇ ಗೂಗಲ್ ನಿರ್ಧಾರ ಪ್ರಕಟಿಸಿದೆ.
'ಆನ್‌ಲೈನ್‌ನಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಷಯ (CSAM) ವಿರುದ್ಧ ಹೋರಾಡಲು ಮತ್ತು ಅಂತಹ ಕಂಟೆಂಟ್‌ಗಳನ್ನು ರಚಿಸಲು, ಸಂಗ್ರಹಿಸಲು ಅಥವಾ ಹಂಚಿಕೊಳ್ಳಲು ನಮ್ಮ ವೇದಿಕೆಯನ್ನು ಬಳಸುವುದನ್ನು ತಡೆಯಲು ಬದ್ಧರಾಗಿದ್ದೇವೆ' ಎಂದು ಗೂಗಲ್ ವಕ್ತಾರರು ತಿಳಿಸಿದ್ದಾರೆ.
'ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಷಯವನ್ನು ಪತ್ತೆಹಚ್ಚಲು ಮತ್ತು ವರದಿ ಮಾಡಲು ಸಾಧ್ಯವಾದಷ್ಟು ಪ್ರಯತ್ನಿಸುತ್ತೇವೆ. ಭಾರತ ಸರ್ಕಾರದೊಂದಿಗೆ ನಡೆಯುತ್ತಿರುವ ಮಾತುಕತೆಯ ಭಾಗವಾಗಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಷಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರಕ್ಕೆ (ಐ4ಸಿ) ಮಾಹಿತಿ ಒದಗಿಸುತ್ತೇವೆ' ಎಂದೂ ಗೂಗಲ್ ವಕ್ತಾರರು ಹೇಳಿದ್ದಾರೆ.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಇತರ ಹಾನಿಕಾರಕ ಅಂಶಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿರುವ ಕೇಂದ್ರ ಸರ್ಕಾರವು, ಪ್ರಬಲ ಸುರಕ್ಷತೆ ಮತ್ತು ಹೆಚ್ಚಿನ ಹೊಣೆಗಾರಿಕೆ ಪ್ರದರ್ಶಿಸಲು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಒತ್ತಡ ಹೇರುತ್ತಿದೆ.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಡೀಪ್‌ಫೇಕ್ ಒಳಗೊಂಡಂತೆ ಹಾನಿಕಾರಕ ಮತ್ತು ಕಾನೂನುಬಾಹಿರ ಅಂಶಗಳ ವಿರುದ್ಧ ಜಾಲತಾಣ ವೇದಿಕೆಗಳ ಮೇಲಿನ ನಿಗಾವನ್ನು ಸರ್ಕಾರವು ಚುರುಕುಗೊಳಿಸಿದೆ. ಈ ಹಿಂದೆ ಇಂಥ ಕಂಟೆಂಟ್‌ಗಳನ್ನು ಪ್ರಸ್ತುತಪಡಿಸಿದ್ದಕ್ಕಾಗಿ 'ಮೆಟಾ' ಹಾಗೂ ಅದರ ಹಿರಿಯ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿತ್ತು. 'ಬಿಬಿಸಿ-ಐ' ವರದಿ ಆಧರಿಸಿ ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗವು ಸ್ವಯಂ ಪ್ರೇರಿತ ದೂರನ್ನೂ ದಾಖಲಿಸಿಕೊಂಡಿತ್ತು.
ಭಾರತದ ಕಾನೂನು ಜಾರಿ ಸಂಸ್ಥೆಗಳಿಗೆ ನೇರ ವರದಿ ಮಾಡುವ ವ್ಯವಸ್ಥೆ ಸ್ಥಾಪಿಸಲು ಬದ್ಧವಾಗಿರುವ ಮೊದಲ ಪ್ರಮುಖ ತಾಂತ್ರಿಕ ಮಧ್ಯವರ್ತಿ ಸಂಸ್ಥೆ ಮೆಟಾ. ಈವರೆಗೆ, ಅಮೆರಿಕದಲ್ಲಿನ 'ಕಾಣೆಯಾದ ಮತ್ತು ಶೋಷಿತ ಮಕ್ಕಳ ರಾಷ್ಟ್ರೀಯ ಕೇಂದ್ರ'ಕ್ಕೆ ವರದಿ ಮಾಡುತ್ತಿತ್ತು.

