ಇಂದೋರ್: ಮಧ್ಯಪ್ರದೇಶದ ಇಂದೋರ್‌ನಲ್ಲಿ ಸೆಪ್ಟೆಂಬರ್ 19 ರಂದು ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ 'ಛಾತ್ರೋಂ ಕಿ ಗೊಂಜ್' (ವಿದ್ಯಾರ್ಥಿಗಳ ಧ್ವನಿ) ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಭಾಗಿಯಾಗಿದ್ದ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಪುಲ್ಕಿತ್ ಮಣಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅನುಕರಿಸಿ ಮಿಮಿಕ್ರಿ ಮಾಡಿದ್ದಾರೆ.
ಸದ್ಯ ಈ ವಿಚಾರ ರಾಜಕೀಯ ರೂಪ ಪಡೆದುಕೊಂಡು ವ್ಯಾಪಕವಾಗಿ ಚರ್ಚೆಯಾಗುತ್ತಿದೆ.
ಕಾಂಗ್ರೆಸ್ ಪಕ್ಷವು ಈ ವಿಡಿಯೊವನ್ನು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಹಂಚಿಕೊಂಡಿದೆ. ವಿಡಿಯೊಗೆ ಆಕ್ರೋಶ ವ್ಯಕ್ತಪಡಿಸಿರುವ ಭಾರತೀಯ ಜನತಾ ಪಕ್ಷವು (ಬಿಜೆಪಿ) 'ಕಾಂಗ್ರೆಸ್ ಜೋಕರ್‌ಗಳ ಪಕ್ಷ' ಎಂದು ಟೀಕಿಸಿದೆ.
ಏನಿದು ಘಟನೆ?
'ಛಾತ್ರೋಂ ಕಿ ಗೊಂಜ್' ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರ ಜೊತೆಗಿದ್ದ ಕಾಮಿಡಿಯನ್ ಪುಲ್ಕಿತ್ ಮಣಿ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡುವ ಶೈಲಿಯಲ್ಲಿಯೇ ಮಾತನಾಡುತ್ತ ಮಿಮಿಕ್ರಿ ಮಾಡಿದ್ದಾರೆ. ರಾಹುಲ್ ಗಾಂಧಿ ಕೂಡ ಪ್ರೇಕ್ಷಕರೊಂದಿಗೆ ನಗುತ್ತ ಪ್ರದರ್ಶನಕ್ಕೆ ಪ್ರೋತ್ಸಾಹಿಸಿದ್ದಾರೆ.
ರಾಹುಲ್ ಗಾಂಧಿ ಅವರು ಪುಲ್ಕಿತ್ ಮಣಿಗೆ 'ಗೆಳೆಯಾ ಹೇಗಿದ್ದೀಯಾ' ಎಂದು ಕೇಳುತ್ತಾರೆ. 'ನಾನು ಚೆನ್ನಾಗಿದ್ದೇನೆ. ನೀವು ಹೇಗಿದ್ದೀರಿ ಮೋದಿ ಜೀ?' ಎಂದು ಮಣಿ ಉತ್ತರಿಸುತ್ತಾರೆ. ರಾಹುಲ್ ಗಾಂಧಿ ಅವರು ಪದೇ ಪದೇ 'ನನ್ನ ಸ್ನೇಹಿತ' ಎನ್ನುತ್ತ, 'ನಿಮ್ಮನ್ನು ಭೇಟಿಯಾಗಿ ತುಂಬಾ ಸಂತೋಷವಾಯಿತು' ಎನ್ನುತ್ತಾರೆ.
ಬಳಿಕ ರಾಹುಲ್ ಗಾಂಧಿ ಹಾಗೂ ಪುಲ್ಕಿತ್ ಮಣಿ ಅವರು ಪರಸ್ಪರ ಅಪ್ಪಿಕೊಂಡರು. ಮಣಿ ಅವರು ಪ್ರೇಕ್ಷಕರ ಕಡೆಗೆ ಬೆರಳು ತೋರಿಸುತ್ತ 'ತಾಯಿಗೆ ಕುರ್ಚಿ ಕೊಡಿ ' ಎಂದು ಮೋದಿ ಅವರ ಧ್ವನಿಯಲ್ಲಿಯೇ ಹೇಳಿದ್ದಾರೆ. ಸದ್ಯ ಇದು ಮೋದಿ ಅಭಿಮಾನಿಗಳ ಕೆಂಗಣ್ಣಿಗೆ ಕಾರಣವಾಗಿದೆ.
ಘಟನೆ ಬಳಿಕ ರಾಹುಲ್ ಗಾಂಧಿ ಅವರನ್ನು 'ಅಸಂಸ್ಕಾರಿ ನಾರಾಜ್ ಫೂಫಾ' ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಕರೆದಿದ್ದಾರೆ. ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡಣವೀಸ್ ಅವರು, 'ರಾಹುಲ್ ಗಾಂಧಿ ರಾಜಕೀಯ ಬಿಟ್ಟು ಸ್ಟ್ಯಾಂಡ್-ಅಪ್ ಕಾಮಿಡಿಯನ್ ಆಗುವುದು ಒಳಿತು' ಎಂದು ವ್ಯಂಗ್ಯ ಮಾಡಿದ್ದಾರೆ.
ಪುಲ್ಕಿತ್ ಮಣಿ ಯಾರು?
ಪುಲ್ಕಿತ್ ಮಣಿ ಅವರು ಜನಪ್ರಿಯ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಆಗಿದ್ದಾರೆ. ಮಾತ್ರವಲ್ಲದೆ, ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಹಾಗೂ ರಾಜಕೀಯ ವಿಡಂಬನಕಾರರಾಗಿಯೂ ಗುರುತಿಸಿಕೊಂಡಿದ್ದಾರೆ.
ಇವರ ಪ್ರದರ್ಶನಗಳು ಹೆಚ್ಚಾಗಿ ಪ್ರಚಲಿತ ವಿದ್ಯಮಾನಗಳು, ರಾಜಕೀಯ ವಿಡಂಬನೆ, ಸಾರ್ವಜನಿಕ ವ್ಯಕ್ತಿಗಳ ಹಾವಭಾವಗಳ ಅನುಕರಣೆ ಹಾಗೂ ಜೀವನದ ಸೂಕ್ಷ್ಮ ಅವಲೋಕನಗಳನ್ನು ಒಳಗೊಂಡಿರುತ್ತದೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ 6 ಲಕ್ಷಕ್ಕೂ ಹೆಚ್ಚಿನ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.
ಪ್ರಧಾನಿ ಮೋದಿ ಅವರನ್ನು ಅನುಕರಿಸಿದ ಬೆನ್ನಲ್ಲೇ ಕಾರ್ಯಕರ್ತರು ಹಾಗೂ ಗೂಂಡಾಗಳಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ಪುಲ್ಕಿತ್ ಮಣಿ ಅವರು ಆರೋಪಿಸಿದ್ದಾರೆ.
ಬಳಿಕ ಸುರಕ್ಷತೆಯ ದೃಷ್ಟಿಯಿಂದ ಉತ್ತರ ಪ್ರದೇಶದ ನೋಯ್ಡಾ, ಲಖನೌ ಹಾಗೂ ಕಾನ್ಪುರ ನಗರಗಳಲ್ಲಿ ನಡೆಯಬೇಕಿದ್ದ ಕಾಮಿಡಿ ಶೋಗಳನ್ನು ರದ್ದುಗೊಳಿಸಿರುವುದಾಗಿ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ.

