HEALTH TIPS

ಕುರಿಯಿಂದ ಕ್ರಿಪ್ಟೊಕರೆನ್ಸಿವರೆಗೆ: ಆಸ್ತಿ ಘೋಷಣೆ ಮಾಡಿಕೊಂಡ ಕೇಂದ್ರ ಸಚಿವರು

ನವದೆಹಲಿ: ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರ ಬಳಿ ಇದ್ದ ಕುರಿಗಳ ಸಂಖ್ಯೆ 221ರಷ್ಟು ಹೆಚ್ಚಾಗಿದೆ. ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರು ತಮ್ಮ ಪತ್ನಿಗೆ ಪಿಸ್ತೂಲ್‌ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಜಲಶಕ್ತಿ ಸಚಿವ ಸಿ.ಆರ್‌. ಪಾಟಿಲ್‌ ಅವರು ಸಚಿವರಾಗಿ ಅಧಿಕಾರ ವಹಿಸಿಕೊಂಡ ನಾಲ್ಕು ತಿಂಗಳ ಬಳಿಕ ರೇಂಜ್‌ ರೋವರ್‌ ಕಾರು ಖರೀದಿಸಿದ್ದಾರೆ. 


ಇವಷ್ಟೇ ಅಲ್ಲ. ಕೇಂದ್ರ ಸಂಪುಟದಲ್ಲಿರುವ ಸಚಿವರು ಇದೇ ವರ್ಷ ಮಾರ್ಚ್‌ 31ರ ವೇಳೆಗೆ ತಾವು ಹೊಂದಿದ್ದ ಆಸ್ತಿಗೆ ಸಂಬಂಧಿಸಿದಂತೆ ಪ್ರಧಾನಿ ಕಚೇರಿಗೆ ಸಲ್ಲಿಸಿರುವ ದಾಖಲೆಗಳಲ್ಲಿ ಇಂತಹ ಹತ್ತಾರು ಆಸಕ್ತಿಕರವಾದ ಮಾಹಿತಿ ಬಹಿರಂಗವಾಗಿವೆ. ಪ್ರಧಾನ ಮಂತ್ರಿ ಮತ್ತು ಕೇಂದ್ರ ಸಚಿವರು, ಪ್ರತಿಯೊಬ್ಬರ ಪತ್ನಿಯ ಹೆಸರಲ್ಲಿ ಇರುವ ಆಸ್ತಿ, ಅವಲಂಬಿತರು ಹೊಂದಿರುವ ಆಸ್ತಿಯ ಕುರಿತು ಪ್ರತಿವರ್ಷವೂ ಸಾರ್ವಜನಿಕವಾಗಿ ಮಾಹಿತಿ ಹಂಚಿಕೊಳ್ಳಲಾಗುತ್ತದೆ.

ಅದರಲ್ಲಿರುವ ಮಾಹಿತಿ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರ ಆಸ್ತಿ ಮೌಲ್ಯ ₹ 3.43 ಕೋಟಿಯಿಂದ ₹ 4.02 ಕೋಟಿಗೆ ಏರಿಕೆಯಾಗಿದೆ. ಇದರಲ್ಲಿ, ಹಲವು ವರ್ಷಗಳಿಂದ ಅವರ ಬಳಿ ಇರುವ ಉಂಗುರಗಳೂ ಸೇರಿವೆ. ಮೋದಿ ಅವರ ಸ್ಥಿರ ಠೇವಣಿ ಮೊತ್ತ ₹3.26 ಕೋಟಿಯಿಂದ ₹3.79 ಕೋಟಿಗೆ ಏರಿಕೆಯಾಗಿರುವುದರಿಂದ ಒಟ್ಟು ಆಸ್ತಿ ಮೌಲ್ಯ ಹೆಚ್ಚಾಗಿದೆ.

ಕೆಲವು ಸಚಿವರು ತಮ್ಮ ಹಳೇ ವಾಹನಗಳನ್ನು ಇನ್ನೂ ಉಳಿಸಿಕೊಂಡಿದ್ದಾರೆ. ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು 1994ರ ಮಾಡೆಲ್‌ನ ಅಂಬಾಸಿಡರ್‌ ಕಾರನ್ನು ಈಗಲೂ ಇಟ್ಟುಕೊಂಡಿದ್ದಾರೆ. ಕಲ್ಲಿದ್ದಲು ಮತ್ತು ಗಣಿ ಸಚಿವ ಜಿ. ಕಿಶನ್ ರೆಡ್ಡಿ ಅವರು 1995ರ ಮಾದರಿಯ ಮಾರುತಿ 800 ಕಾರು ಹೊಂದಿದ್ದಾರೆ. ಶಿವರಾಜ್‌ ಸಿಂಗ್‌ ಚೌಹಾಣ್‌ ಬಳಿ 2000ರ ಮಾಡೆಲ್‌ನ ಅಂಬಾಸಿಡರ್‌ ಕಾರು ಇದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 18 ವರ್ಷಗಳ ಹಿಂದೆ ಖರೀದಿಸಿದ್ದ ಬಜಾಜ್‌ ಚೇತಕ್‌ ಸ್ಕೂಟರ್‌ ಅನ್ನು ಇನ್ನೂ ಇಟ್ಟುಕೊಂಡಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ವೀರೇಂದ್ರ ಕುಮಾರ್‌ ಅವರ ಬಳಿ 37 ವರ್ಷ ಹಳೆಯ ಸ್ಕೂಟರ್‌ ಇದೆ ಎಂಬುದು ಘೋಷಣೆಯಾಗಿರುವ ಆಸ್ತಿ ವಿವರದಿಂದ ತಿಳಿದುಬಂದಿದೆ.

ಬುಡಕಟ್ಟು ವ್ಯವಹಾರಗಳ ಸಚಿವ ಜುಯಲ್ ಓರಮ್‌ ಅವರು 1986ರ ವೆಸ್ಪಾ ಸ್ಕೂಟರ್‌ ಮತ್ತು 1991ರ ಮಾಡೆಲ್‌ ಜೀಪ್‌ ಹೊಂದಿದ್ದಾರೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಖಾತೆ ಸಚಿವ ಸುರೇಶ್‌ ಗೋಪಿ ಹಾಗೂ ಅವರ ಪತ್ನಿ ಬಳಿ ಟ್ರ್ಯಾಕ್ಟರ್ ಸೇರಿದಂತೆ ಒಟ್ಟು 11 ವಾಹನಗಳಿದ್ದು, ಅವುಗಳ ಒಟ್ಟು ಮೌಲ್ಯ ₹ 3.26 ಕೋಟಿ.

ಸಿ.ಆರ್‌. ಪಾಟೀಲ್‌ ಅವರು 2024ರ ಅಕ್ಟೋಬರ್ 2ರಂದು ₹2.95 ಕೋಟಿ ಮೌಲ್ಯದ ರೇಂಜ್ ರೋವರ್ ಕಾರು ಖರೀದಿಸಿದ್ದಾರೆ. ಅವರ ಬಳಿ ಟ್ರ್ಯಾಕ್ಟರ್ ಮತ್ತು ಸ್ಪೋರ್ಟ್ಸ್‌ ಕಾರು ಕೂಡ ಇದೆಯಂತೆ.

ಕುಮಾರಸ್ವಾಮಿ ಅವರು ಜಾನುವಾರುಗಳ ವಿವರವನ್ನೂ ಹಂಚಿಕೊಂಡಿದ್ದಾರೆ. 2024-25ರಲ್ಲಿ 20 ಇದ್ದ ಹಸುಗಳ ಸಂಖ್ಯೆ 2025-26ರಲ್ಲಿ 34ಕ್ಕೆ ಏರಿದೆ. ಹಾಗೆಯೇ, 52 ಇದ್ದ ಕುರಿಗಳ ಸಂಖ್ಯೆ 273ಕ್ಕೆ ಹೆಚ್ಚಾಗಿದೆ. ಸಾಕುಪ್ರಾಣಿಗಳ ಒಟ್ಟು ಮೌಲ್ಯ ಸುಮಾರು ₹12.54 ಲಕ್ಷ. ಹಾಗೆಯೇ ಪತ್ನಿ ಅನಿತಾ ಅವರು ವಜ್ರದ ಹಾರ ಹೊಂದಿದ್ದಾರೆ ಎಂದು ಘೋಷಿಸಲಾಗಿದೆ.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಸಚಿವ ಜಿತನ್ ರಾಮ್ ಮಾಝಿ ಅವರ ಬಳಿ ಇದ್ದ ಜಾನುವಾರುಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 2024-25ರಲ್ಲಿ ಇದ್ದ ನಾಲ್ಕು ಹಸುಗಳು ಮತ್ತು ಮೂರು ಕರುಗಳೇ ಈಗಲೂ ಇವೆಯಂತೆ. ಗೃಹ ಇಲಾಖೆ ರಾಜ್ಯ ಖಾತೆ ಸಚಿವ ನಿತ್ಯಾನಂದ ರೈ, 14 ಹಸುಗಳು ಮತ್ತು 10 ಕರುಗಳು, 12 ಎಮ್ಮೆಗಳು ಹಾಗೂ ಒಂಬತ್ತು ಕರುಗಳಿವೆ ಎಂದು ಘೋಷಿಸಿಕೊಂಡಿದ್ದಾರೆ.

ರೈ ಅವರು ಮಹಾಗನಿ, ಶೀಶಂ, ಮಾವು, ಲಿಚಿ ಸೇರಿದಂತೆ ವಿವಿಧ ಜಾತಿಯ 4,638 ಮರಗಳನ್ನು ಹೊಂದಿರುವುದಾಗಿ ಹಾಗೂ ಅವುಗಳ ಮೌಲ್ಯ ಅಂದಾಜು ₹ 2.31 ಕೋಟಿ ಎಂದು ತಿಳಿಸಿದ್ದಾರೆ. ಆದರೆ, ₹2.94 ಕೋಟಿ ಮೌಲ್ಯದ ವಿವಿಧ ಜಾತಿಯ 6,293 ಮರಗಳಿವೆ ಎಂದು ಆರು ವರ್ಷಗಳ ಹಿಂದೆ ಘೋಷಿಸಿದ್ದರು.‌

ಕೌಶಲ್ಯಾಭಿವೃದ್ಧಿ ಇಲಾಖೆಯ ರಾಜ್ಯ ಖಾತೆ ಸಚಿವ ಜಯಂತ್‌ ಚೌಧರಿ ಮತ್ತು ಅವರ ಪತ್ನಿ ಚಾರು ಸಿಂಗ್ ಅವರು ಹೊಂದಿರುವ ಕ್ರಿಪ್ಟೋಕರೆನ್ಸಿ ಆಸ್ತಿಯ ಮೌಲ್ಯ ಹೆಚ್ಚಾಗಿದೆ. ₹43.46 ಲಕ್ಷ ಇದ್ದ ಕ್ರಿಪ್ಟೋ ಆಸ್ತಿಯ ಮೌಲ್ಯ ₹45.62 ಲಕ್ಷಕ್ಕೆ ಏರಿದೆ. ₹ 2.39 ಕೋಟಿ ಮೌಲ್ಯದ ಕಲಾಕೃತಿಗಳು, ಚಿತ್ರಗಳು ಮತ್ತು ಕರಕುಶಲ ವಸ್ತುಗಳನ್ನು ಹೊಂದಿರುವುದಾಗಿಯೂ ಅವರು ಘೋಷಿಸಿಕೊಂಡಿದ್ದಾರೆ.

ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ಕೀರ್ತಿವರ್ಧನ್ ಸಿಂಗ್ ಅವರು ₹18.48 ಲಕ್ಷ ಮೌಲ್ಯದ ಹ್ಯಾಂಗ್ ಗ್ಲೈಡರ್, ಪಿಸ್ತೂಲ್‌, ರೈಫಲ್‌ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ವಾಣಿಜ್ಯ ಮತ್ತು ಉದ್ಯಮ ರಾಜ್ಯ ಖಾತೆ ಸಚಿವ ಜಿತಿನ್ ಪ್ರಸಾದ ಅವರು ₹ 25,000 ಮೌಲ್ಯದ ಡ್ಯಾಗರ್‌ ಹೊಂದಿದ್ದಾರೆ. ಜೊತೆಗೆ ಪಿಸ್ತೂಲ್, ಗನ್ ಮತ್ತು ರೈಫಲ್ ಕೂಡ ಅವರ ಬಳಿ ಇವೆ. ಜಿತಿನ್ ಪತ್ನಿಯ ಹೆಸರಲ್ಲಿಯೂ ಬಂದೂಕುಗಳಿವೆ.

ಪಂಚಾಯತ್ ರಾಜ್‌ ಸಚಿವ ರಾಜೀವ್‌ ರಂಜನ್‌ ಸಿಂಗ್‌, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣಾ ದೇವಿ, ಸಹಕಾರ ಖಾತೆ ರಾಜ್ಯ ಸಚಿವ ಕಿಶನ್‌ ಪಾಲ್‌, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಖಾತೆ ಸಚಿವೆ ಸಾವಿತ್ರಿ ಠಾಕೂರ್‌ ಸೇರಿದಂತೆ ಹಲವು ಪಿಸ್ತೂಲ್‌ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries