ರಾಂಗ್ಫೋ: ಸಿಕ್ಕಿಂ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಸಿವಾಕ್-ರಾಂಗ್ಪೋ ರೈಲು ಮಾರ್ಗದ ಕಾಮಗಾರಿ ಭರದಿಂದ ಸಾಗಿದ್ದು, 2027ರ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಭಾರತದ ಮೊದಲ ಸುರಂಗ ರೈಲು ನಿಲ್ದಾಣವನ್ನೂ ಈ ಯೋಜನೆ ಒಳಗೊಂಡಿದೆ. (ಈಗ ಮೆಟ್ರೋ ರೈಲು ಯೋಜನೆಗಳಲ್ಲಿ ಸುರಂಗ ರೈಲು ನಿಲ್ದಾಣಗಳು ಇವೆ).
ಪಶ್ಚಿಮ ಬಂಗಾಳದ ಸಿಲಿಗುರಿಯಿಂದ ಸಿಕ್ಕಿಂ ರಾಜಧಾನಿ ಗ್ಯಾಂಗ್‌ಟಕ್ ಮಧ್ಯ ಇರುವ ರಾಷ್ಟ್ರೀಯ ಹೆದ್ದಾರಿ 10ರ ತೀಸ್ತಾ ನದಿ ಪಕ್ಕವೇ ಕಡಿದಾದ ಕೊಳ್ಳದಲ್ಲಿ ಸಾಗುತ್ತದೆ. ಭಾರತದ ಇತರೆ ಪ್ರದೇಶದಿಂದ ಸಿಕ್ಕಿಂಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಇದು. ಆಗಾಗ ಸಂಭವಿಸುವ ಭೂಕುಸಿತದಿಂದಾಗಿ ಈ ಹೆದ್ದಾರಿ ಪ್ರಯಾಣ ಅಪಾಯಕಾರಿಯೂ ಆಗಿದೆ.
ರೈಲ್ವೆ ಸಂಪರ್ಕ ಈಗ ಪಶ್ಚಿಮ ಬಂಗಾಳದ ಸಿವಾಕ್ ವರೆಗೆ ಇದೆ. ಸಿವಾಕ್ ನಿಂದ ಸಿಕ್ಕಿಂನ ರಾಂಗ್ಫೋ ವರೆಗೆ ಹೊಸ ಮಾರ್ಗ ನಿರ್ಮಾಣ ಗೊಳ್ಳುತ್ತದೆ. ರಾಂಗ್ಫೋದಿಂದ ರಾಜಧಾನಿ ಗ್ಯಾಂಗ್‌ಟಕ್ ವರೆಗಿನ ಸುಮಾರು 45 ಕಿ.ಮೀ ರೈಲು ಯೋಜನೆ ಸಮೀಕ್ಷೆಯ ಹಂತದಲ್ಲಿದೆ.
ಪಿಐಬಿ ಬೆಂಗಳೂರು ಕಚೇರಿಯಿಂದ ಆಯೋಜಿಸಿರುವ ಅಧ್ಯಯನ ಪ್ರವಾಸದ ವೇಳೆ ಕರ್ನಾಟಕದ ಮಾಧ್ಯಮ ಸದಸ್ಯರ ನಿಯೋಗ ಬುಧವಾರ ಯೋಜನಾ ಸ್ಥಳಕ್ಕೆ ಭೇಟಿ ನೀಡಿತು.
ಸಿವಾಕ್ ಮತ್ತು ರಾಂಗ್ಫೋ ಯೋಜನೆಯು ಅತ್ಯಂತ ದುರ್ಗಮ ಭೂಪ್ರದೇಶ ಹೊಂದಿರುವ ತೀಸ್ತಾ ನದಿ ಕಣಿವೆಯಲ್ಲಿ ಅನುಷ್ಠಾನಗೊಳ್ಳುತ್ತಿದೆ. 44.96 ಕಿ.ಮೀ. ಉದ್ದದ ಈ ಯೋಜನೆಯು ಭಾರತದ ಈಶಾನ್ಯ ಗಡಿ ಭಾಗವನ್ನು ದೇಶದ ರೈಲು ಜಾಲದೊಂದಿಗೆ ಬೆಸೆಯಲಿದೆ. ಇದರ ಯೋಜನಾ ವೆಚ್ಚ
ಸುಮಾರು ₹17,146 ಕೋಟಿ.
ಯೋಜನೆಯ ಸಲಹೆಗಾರ ಮೋಹಿಂದರ್ ಸಿಂಗ್ ಅವರು ಮಾಧ್ಯಮ ನಿಯೋಗಕ್ಕೆ ಮಾಹಿತಿ ನೀಡಿ, ಯೋಜನೆಯ ಶೇ 80 ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಈ ಯೋಜನೆಯಡಿಯಲ್ಲಿ ಒಟ್ಟು 14 ಸುರಂಗಗಳು, 23 ಸೇತುವೆಗಳು ಮತ್ತು 5 ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು
ಅತ್ಯಂತ ಪ್ರಮುಖವಾಗಿ ಭಾರತದ ಮೊದಲ ಸುರಂಗ ರೈಲು ನಿಲ್ದಾಣವಾದ ತೀಸ್ತಾ ಬಜಾರ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಯೋಜನೆಯಲ್ಲಿನ ಅತಿ ಉದ್ದದ ಸುರಂಗವು ಸುಮಾರು 5,300 ಮೀ. ವ್ಯಾಪಿಸಿದ್ದರೆ, ಅತ್ಯಂತ ಕಿರಿದಾದ ಸುರಂಗವು 542 ಮೀ. ಉದ್ದವನ್ನು ಹೊಂದಿದೆ ಎಂದು ತಿಳಿಸಿದರು.
2009-10 ರಲ್ಲಿ ಈ ಯೋಜನೆ ಮಂಜೂರಾಗಿತ್ತು. ಈ ವರೆಗೆ ₹12,300ಕೋಟಿ ವಿನಿಯೋಗಿಸಿದ್ದು ಈ ವರ್ಷ ₹2100ಕೋಟಿ ವಿನಿಯೋಗಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಪಿಐಬಿ ಬೆಂಗಳೂರಿನ ಸಹಾಯಕ ನಿರ್ದೇಶಕ ಎಂ. ಮಧು, ಪಿಐಬಿ ಸಿಕ್ಕಿಂನ ಮೋಹಿನಾಕ್ ಚಟರ್ಜಿ, ಸತ್ಯೇಂದ್ರ ಕುಮಾರ್, ಯೋಜನೆಯ ಮುಖ್ಯ ವ್ಯವಸ್ಥಾಪಕರಾದ ರೆನಿಯಾ ಎಟೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


