ನವದೆಹಲಿ: ಪೋಕ್ಸೊ ಕಾಯ್ದೆಯಡಿ ಪ್ರಕರಣ ಎದುರಿಸುತ್ತಿರುವ ತಂದೆ ಕಸ್ಟಡಿಗೆ ಇಬ್ಬರು ಮಕ್ಕಳನ್ನು ನೀಡುವುದಕ್ಕೆ ನಿರಾಕರಿಸಿರುವ ಸುಪ್ರೀಂ ಕೋರ್ಟ್, ತನ್ನೊಂದಿಗೆ ಮಕ್ಕಳನ್ನು ಬ್ರಿಟನ್‌ಗೆ ಕರೆದೊಯ್ಯುವುದಕ್ಕೆ ತಾಯಿಗೆ ಅನುಮತಿ ನೀಡಿದೆ.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ (ಪೋಕ್ಸೊ) ಕಾನೂನು ಕ್ರಮ ಎದುರಿಸುತ್ತಿರುವ ತಂದೆ, ಮಕ್ಕಳನ್ನು ತನ್ನ ಕಸ್ಟಡಿಗೆ ಪಡೆಯುವುದಕ್ಕೆ ಅರ್ಹ ಎಂಬುದಾಗಿ ಪರಿಗಣಿಸಲು ಸಾಧ್ಯ ಇಲ್ಲ.
ಪೋಕ್ಸೊ ಪ್ರಕರಣದಲ್ಲಿ ತಂದೆ ವಿರುದ್ಧ ಆರೋಪಪಟ್ಟಿ ಸಲ್ಲಿಕೆಯಾಗಿದೆ. ಇಂಥ ಸಂದರ್ಭದಲ್ಲಿ ಮಕ್ಕಳನ್ನು ಅವರ ಸುಪರ್ದಿಗೆ ನೀಡುವುದು 'ಸಮರ್ಥನೀಯ ಅಲ್ಲ' ಎಂದು ಸ್ಪಷ್ಟಪಡಿಸಿದೆ.
ಪ್ರಕರಣವೊಂದರಲ್ಲಿ, ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಹಾಗೂ ಸಂದೀಪ್ ಮೆಹ್ತಾ ಅವರು ಇದ್ದ ಪೀಠವು ಸೆಪ್ಟೆಂಬರ್ 23ರಂದು ನೀಡಿರುವ ತೀರ್ಪಿನಲ್ಲಿ ಈ ಮಾತು ಹೇಳಿದೆ.
ತಾಯಿ ತನ್ನ ಮಕ್ಕಳನ್ನು ಬ್ರಿಟನ್‌ಗೆ ಕರೆದೊಯ್ದು, ಉತ್ತಮ ಶಾಲೆಗೆ ಸೇರಿಸಬೇಕು. ಮಕ್ಕಳ ಶಿಕ್ಷಣಕ್ಕೆ ಮಾಡಿರುವ ವ್ಯವಸ್ಥೆ ಕುರಿತು ಆರು ವಾರಗಳ ಒಳಗಾಗಿ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಸೂಚಿಸಿದ ಪೀಠ, ವಿಚಾರಣೆಯನ್ನು ಮುಂದಿನ ಜನವರಿಗೆ ಮುಂದೂಡಿದೆ.
ಪ್ರಕರಣ: ವ್ಯಾಜ್ಯಕರ್ತರ ಮದುವೆ 2011ರ ಸೆಪ್ಟೆಂಬರ್‌ನಲ್ಲಿ ನಡೆದಿತ್ತು. 2013ರ ಏಪ್ರಿಲ್‌ನಲ್ಲಿ ಮಗ ಜನಿಸಿದ್ದರೆ, 2019ರ ಜನವರಿಯಲ್ಲಿ ಮಗಳು ಜನಿಸಿದ್ದಾಳೆ. ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ವೇಳೆ, 2018ರಲ್ಲಿ ಮಹಿಳೆ ತನ್ನ ತವರು ಮನೆಗೆ ತೆರಳಿದ್ದರು. ಬಳಿಕ, ಬ್ರಿಟನ್‌ಗೆ ಹೋಗಿ, ಅಲ್ಲಿನ ಹಲ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ಕೆಲಸಕ್ಕೆ ಸೇರಿದ್ದರು.
2023ರಲ್ಲಿ ಮಗನಲ್ಲಿ ಆಕ್ರಮಣಕಾರಿ ವರ್ತನೆ ಕಂಡುಬಂದಿತ್ತು. ನಿಮ್ಹಾನ್ಸ್‌ನಲ್ಲಿ ಪರೀಕ್ಷೆಗೆ ಒಳಪಡಿಸಿದ ಬಳಿಕ ಆತನಿಗೆ ತಂದೆಯೇ ಲೈಂಗಿಕ ಕಿರುಕುಳ ನೀಡಿರುವುದು ಗೊತ್ತಾಗಿತ್ತು. ಪೊಲೀಸರಿಗೆ ದೂರು ಸಲ್ಲಿಸಿದ ಬಳಿಕ, ತಂದೆ ವಿರುದ್ಧ ಪೋಕ್ಸೊ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿ, ನಂತರ ಆರೋಪಪಟ್ಟಿಯನ್ನೂ ಸಲ್ಲಿಸಲಾಗಿತ್ತು.
ತನ್ನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದನ್ನು ಪ್ರಶ್ನಿಸಿ ತಂದೆ ಕಲ್ಕತ್ತ ಹೈಕೋರ್ಟ್ ಮೆಟ್ಟಿಲೇರಿದ್ದು, ಅರ್ಜಿಯ ವಿಚಾರಣೆ ಬಾಕಿ ಇದೆ.
ಈ ನಡುವೆ, ಮಕ್ಕಳಿಬ್ಬರನ್ನು ತನ್ನ ಸುಪರ್ದಿಗೆ ನೀಡುವಂತೆ ಕೋರಿ ತಂದೆ ಕೋರ್ಟ್ ಮೊರೆಹೋಗಿದ್ದರು. 'ತಾಯಿ ಪದೇಪದೇ ಪ್ರವಾಸ ಕೈಗೊಳ್ಳುತ್ತಿದ್ದು, 'ಅಲೆಮಾರಿ' ರೀತಿಯ ಜೀವನಶೈಲಿ ಹೊಂದಿದ್ದಾರೆ' ಎಂದು ಅಭಿಪ್ರಾಯಪಟ್ಟಿದ್ದ ಕೌಟುಂಬಿಕ ನ್ಯಾಯಾಲಯ ಹಾಗೂ ದೆಹಲಿ ಹೈಕೋರ್ಟ್, ಇಬ್ಬರು ಮಕ್ಕಳನ್ನು ತಂದೆಯ ಕಸ್ಟಡಿಗೆ ಒಪ್ಪಿಸುವಂತೆ ಆದೇಶಿಸಿದ್ದವು.
ವಿಚಾರಣೆ ವೇಳೆ, ಇಂತಹ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ದೆಹಲಿ ಹೈಕೋರ್ಟ್‌ಅನ್ನು ಟೀಕಿಸಿದ್ದ ನ್ಯಾಯಪೀಠ,'ಮಹಿಳೆ ಕುರಿತ ಹೈಕೋರ್ಟ್ ಹೇಳಿಕೆಯನ್ನು ಕಡತದಿಂದ ತೆಗೆದು ಹಾಕಬೇಕು' ಎಂದು ನಿರ್ದೇಶನ ನೀಡಿದೆ.

