ನವದೆಹಲಿ: ಉತ್ಪಾದಕರು ಔಷಧಗಳನ್ನು ಚಿಲ್ಲರೆ ವ್ಯಾಪಾರಸ್ಥರಿಗೆ ಮಾರಾಟ ಮಾಡುವ ಬೆಲೆಗೂ ಮತ್ತು ಅದರ ಮೇಲೆ ಮುದ್ರಿಸುವ ಗರಿಷ್ಠ ಮಾರಾಟ ದರಕ್ಕೂ ಭಾರಿ ವ್ಯತ್ಯಾಸ ಇರುವುದನ್ನು ಸುಪ್ರೀಂ ಕೋರ್ಟ್ ಮಂಗಳವಾರ ಕಟುವಾಗಿ ಟೀಕಿಸಿದೆ.
ಔಷಧಗಳಿಗೆ ಹತ್ತು ಪಟ್ಟು ಹೆಚ್ಚು ದರ ನಿಗದಿಪಡಿಸುವುದು ಸುಲಿಗೆ, ವಂಚನೆ ಹಾಗೂ ವ್ಯಾಪಕವಾದ ಹಗಲು ದರೋಡೆ ಎಂದು ಹೇಳಿರುವ ಸುಪ್ರೀಂ ಕೋರ್ಟ್, 'ಜನರು ಔಷಧ ಖರೀದಿಸಲೆಂದು ತಮ್ಮ ಮನೆ, ಒಡವೆಗಳನ್ನು ಮಾರಾಟ ಮಾಡುತ್ತಾರೆ' ಎಂದು ಹೇಳಿತು.
ಔಷಧಗಳು, ಜನರಿಕ್ ಔಷಧಗಳು ಹಾಗೂ ವೈದ್ಯಕೀಯ ಉಪಕರಣಗಳಿಗೆ ಬೆಲೆ ನಿಗದಿ ಮಾಡಲು ಇರುವ ಸದ್ಯದ ವ್ಯವಸ್ಥೆ ಮತ್ತು ಔಷಧಗಳನ್ನು ಬರೆದುಕೊಡುವ ಪದ್ಧತಿಯನ್ನು ಪ್ರಶ್ನಿಸಿ ಕೃಷ್ಣಚಂದ್ ಜೈನ್ ಹಾಗೂ ಡಾ. ಸಂಜಯ್ ಕುಲಶ್ರೇಷ್ಠ ಎಂಬವರು ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ವಿಕ್ರಮನಾಥ್ ಮತ್ತು ಸಂದೀಪ್ ಮೆಹ್ತಾ ಅವರು ವಿಚಾರಣೆ ನಡೆಸಿದರು.
'ಈ ವಿಚಾರದಲ್ಲಿ ಕೇಂದ್ರ ಸರ್ಕಾರವು ಸುಧಾರಣೆಗೆ ಮುಕ್ತವಾಗಿತ್ತು. ಜನೌಷಧ ಯೋಜನೆಯನ್ನು ಆರಂಭಿಸಿದೆ' ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ ಅವರು ನ್ಯಾಯಪೀಠದ ಗಮನಕ್ಕೆ ತಂದರು.
ಭಾರತೀಯ ಔಷಧ ಒಕ್ಕೂಟದ ಪರ ಹಾಜರಿದ್ದ ಕಪಿಲ್ ಸಿಬಲ್, 'ಇಲ್ಲಿ ಚಿಲ್ಲರೆ ಮಾರಾಟಗಾರರು ಹೆಚ್ಚಿನ ಲಾಭ ಗಳಿಸುತ್ತಿದ್ದಾರೆಯೇ ಹೊರತು, ತಯಾರಕರಲ್ಲ' ಎಂದು ವಾದ ಮಂಡಿಸಿದರು.
ಸೆ.29ಕ್ಕೆ ವಿಚಾರಣೆಯನ್ನು ಮುಂದೂಡಲಾಯಿತು.

