ಗುವಾಹಾಟಿ: ಅಸ್ಸಾಂನ ಗೋಲಾಘಾಟ್ ಜಿಲ್ಲೆಯಲ್ಲಿ ಮಂಗಳವಾರ ಬಸ್‌ವೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಅಪರೂಪ 'ಚನ್ನಾ ಬಾರ್ಕಾ' (ಸ್ಥಳೀಯವಾಗಿ 'ಚೆಂಗ್ ಎಲಿ') ತಳಿಯ ಸುಮಾರು 300 ಜೀವಂತ ಮೀನುಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಐವರು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪರಿಸರ ಮತ್ತು ಅರಣ್ಯ ಸಚಿವ ಜಯಂತ ಮಲ್ಲ ಬರುವಾ ತಿಳಿಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೂರ್ವ ಅಸ್ಸಾಂ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳು, ಬೊಕಾಖಾಟ್ ಬಳಿ ಬಸ್ ಅನ್ನು ತಡೆದು ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಯಾವುದೇ ಅಧಿಕೃತ ಪರವಾನಗಿ ಅಥವಾ ದಾಖಲೆಗಳಿಲ್ಲದೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 300 ಅಪರೂಪದ ತಳಿಯ ಜೀವಂತ ಮೀನುಗಳು ಪತ್ತೆಯಾಗಿವೆ.
'ಬಾರ್ಕಾ ಸ್ನೇಕ್‌ಹೆಡ್' ಎಂದೂ ಕರೆಯಲ್ಪಡುವ 'ಚನ್ನಾ ಬಾರ್ಕಾ' ಬ್ರಹ್ಮಪುತ್ರ ನದಿ ಜಲಾನಯನ ಪ್ರದೇಶದಲ್ಲಿ ಕಂಡು ಬರುವ ಅಪರೂಪದ ಮತ್ಸ್ಯ ತಳಿಯಾಗಿದೆ. ಅಂತರರಾಷ್ಟ್ರೀಯ ಆಕ್ವೇರಿಯಂ ಹಾಗೂ ಅಲಂಕಾರಿಕ ಮತ್ಸ್ಯ ಮಾರುಕಟ್ಟೆಯಲ್ಲಿ ಈ ಮೀನುಗಳಿಗೆ ಭಾರಿ ಬೇಡಿಕೆಯಿದ್ದು, ಭಾರಿ ಮೊತ್ತಕ್ಕೆ ಬಿಕರಿಯಾಗುತ್ತವೆ.
ಪ್ರಸ್ತುತ ಐಯುಸಿಎನ್ (IUCN) ರೆಡ್ ಲಿಸ್ಟ್‌ನಲ್ಲಿ 'ಡೇಟಾ ಡೆಫಿಷಿಯೆಂಟ್' (ಮಾಹಿತಿಯ ಕೊರತೆ ಇರುವ ತಳಿ) ಎಂದು ವರ್ಗೀಕರಿಸಲಾಗಿದೆ.
ಈ ಅಕ್ರಮ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೊಕಾಖಾಟ್ ಅರಣ್ಯ ವ್ಯಾಪ್ತಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ವಶಕ್ಕೆ ಪಡೆಯಲಾದ ವ್ಯಕ್ತಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಈ ಮೀನುಗಳನ್ನು ಎಲ್ಲಿಂದ ತರಲಾಗಿತ್ತು, ಎಲ್ಲಿಗೆ ಸಾಗಿಸಲಾಗುತ್ತಿತ್ತು ಹಾಗೂ ಇದರ ಹಿಂದೆ ಇರುವ ಮಾರುಕಟ್ಟೆ ಜಾಲದ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಸಚಿವ ಬರುವಾ ಹೇಳಿದ್ದಾರೆ.
ರಕ್ಷಿಸಲಾದ ಮೀನುಗಳನ್ನು ಸುರಕ್ಷಿತವಾಗಿ ಅರಣ್ಯ ಇಲಾಖೆಯ ವಶದಲ್ಲಿಡಲಾಗಿದ್ದು, ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ನ್ಯಾಯಾಲಯ ಅಥವಾ ಸಂಬಂಧಪಟ್ಟ ಉನ್ನತ ಪ್ರಾಧಿಕಾರದಿಂದ ಸೂಕ್ತ ಅನುಮತಿ ಸಿಕ್ಕ ನಂತರ ಇವುಗಳನ್ನು ನೈಸರ್ಗಿಕ ಆವಾಸಸ್ಥಾನಕ್ಕೆ ಮುಕ್ತಗೊಳಿಸುವ ಸಾಧ್ಯತೆಯಿದೆ. ಈ ಅಕ್ರಮ ಜಾಲದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

