HEALTH TIPS

ದುರ್ಗಾದೇವಿಯ 'ವಿಕೃತ' ಫೋಟೊ ಜಾಹೀರಾತು: ಪಶ್ಚಿಮ ಬಂಗಾಳ ಸಿಎಂ ಕ್ಷಮೆಯಾಚನೆ

ಕೋಲ್ಕತ್ತ: ರಾಜ್ಯ ಸರ್ಕಾರದ ಜಾಹೀರಾತಿನಲ್ಲಿ, ದುರ್ಗಾದೇವಿಯ ವಿಕೃತ ಚಿತ್ರವನ್ನು ಪ್ರಕಟಿಸಿದ್ದಕ್ಕಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕ್ಷಮೆಯಾಚಿಸಿದ್ದಾರೆ. ಸಾಂಪ್ರದಾಯಿಕ 10 ಕೈಗಳ ಬದಲಿಗೆ 11 ಕೈಗಳಿರುವ ದುರ್ಗಾದೇವಿ ಚಿತ್ರವನ್ನು ಪ್ರಕಟಿಸಲಾಗಿತ್ತು. 


ಅಲ್ಲದೇ , 'ಟಿಎಂಸಿ ಆಡಳಿತಾವಧಿಯಲ್ಲಿ ಆರಂಭಿಸಲಾಗಿದ್ದ ಪ್ರಸಿದ್ಧ ದುರ್ಗಾ ಪೂಜಾ ಕಾರ್ನಿವಲ್ ಅನ್ನು ರದ್ದುಗೊಳಿಸಲಾಗುವುದು' ಎಂದು ಅವರು ತಿಳಿಸಿದ್ದಾರೆ.

'ಕಾರ್ನಿವಲ್ ಬದಲಿಗೆ, ರಾಜ್ಯ ಪ್ರವಾಸೋದ್ಯಮ, ಮಾಹಿತಿ ಹಾಗೂ ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಗಳು ಜಂಟಿಯಾಗಿ ಈಡನ್ ಗಾರ್ಡನ್ಸ್‌ನಲ್ಲಿ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಿವೆ' ಎಂದಿದ್ದಾರೆ.

ಕೋಲ್ಕತ್ತದ ಮಿಲನ್ ಮೇಳ ಪ್ರಾಂಗಣದಲ್ಲಿ ದುರ್ಗಾ ಪೂಜಾ ಸಮಿತಿಗಳೊಂದಿಗೆ ನಡೆದ ಸಮನ್ವಯ ಸಭೆಯಲ್ಲಿ ಮಾತನಾಡಿದ ಸಿಎಂ, 'ದೋಷಪೂರಿತ ಜಾಹೀರಾತೊಂದು ಪ್ರಕಟವಾಗಿದೆ. ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ಜಾಹೀರಾತು ಪ್ರಕಟಿಸಿದವರಿಗೆ ಎಚ್ಚರಿಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರವು ಇಂತಹ ವಿಷಯಗಳ ಬಗ್ಗೆ ಹೆಚ್ಚು ಎಚ್ಚರವಹಿಸುತ್ತದೆ' ಎಂದಿದ್ದಾರೆ.

ಪೂಜಾ ಸಮನ್ವಯ ಸಭೆಯ ಮುನ್ನಾದಿನ ಪತ್ರಿಕೆಗಳಲ್ಲಿ ರಾಜ್ಯ ಸರ್ಕಾರ ನೀಡಿದ್ದ ಜಾಹೀರಾತಿನಲ್ಲಿ, ದುರ್ಗಾದೇವಿಗೆ 11 ಕೈಗಳಿದ್ದು, ಹೆಚ್ಚುವರಿ ಕೈಯಲ್ಲಿ ಅಸ್ಪಷ್ಟ ವಸ್ತುವೊಂದನ್ನು ಹಿಡಿದಿರುವುದನ್ನು ತೋರಿಸಲಾಗಿತ್ತು.

ವಿಪಕ್ಷಗಳ ಟೀಕೆ: ಈ ದೋಷವು ವಿರೋಧ ಪಕ್ಷಗಳಿಂದ ವ್ಯಾಪಕ ಟೀಕೆಗೆ ಗುರಿಯಾಯಿತು. 'ರಾಕ್ಷಸನನ್ನು ಕೊಲ್ಲಲು ದೇವತೆಗಳು ದುರ್ಗೆಗೆ ಹತ್ತು ಕೈಗಳು ಮತ್ತು ಆಯುಧಗಳನ್ನು ನೀಡಿದ್ದರು. ಆದರೆ ಬಿಜೆಪಿ ಸರ್ಕಾರ ಆಕೆಗೆ(ದುರ್ಗೆಗೆ) ಒಂದು ಹೆಚ್ಚುವರಿ ಕೈಯನ್ನು ನೀಡಿದೆ' ಎಂದು ಸಿಪಿಐ(ಎಂ) ನಾಯಕ ಶತರೂಪ್ ಘೋಷ್ ವ್ಯಂಗ್ಯವಾಡಿದ್ದಾರೆ.

ಮುಖ್ಯಮಂತ್ರಿಯವರೇ, 'ಸರ್ಕಾರ ನೀಡಿದ ಜಾಹೀರಾತಿನಲ್ಲಿ ಸಾಂಪ್ರದಾಯಿಕವಾಗಿ 'ದಶಭುಜ' (ಹತ್ತು ಕೈಗಳುಳ್ಳವಳು) ಎಂದು ನಂಬಲಾಗಿರುವ ದುರ್ಗಾ ಮಾತೆ ಈಗ 'ಏಕಾದಶಭುಜ' (ಹನ್ನೊಂದು ಕೈಗಳುಳ್ಳವಳು) ಹೊಂದಿದ್ದಾಳೆ. ಶಾಸ್ತ್ರಗಳ ಪ್ರಕಾರ, ದೇವಿಯ ಒಂದು ಕೈಯನ್ನು ತಕ್ಷಣ ತೆರವುಗೊಳಿಸಬೇಕಿದೆ' ಎಂದು ಟಿಎಂಸಿ ಶಾಸಕ ಕುನಾಲ್ ಘೋಷ್ ಟೀಕಿಸಿದ್ದಾರೆ.

‌ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯ ಅಧ್ಯಕ್ಷ ಶಮಿಕ್ ಭಟ್ಟಾಚಾರ್ಯ, 'ತಾಂತ್ರಿಕ ತಪ್ಪಾಗಿದ್ದು ಅದನ್ನು ಸರಿಪಡಿಸಬಹುದು. ಈ ವಿಷಯವನ್ನು ರಾಜಕೀಯಗೊಳಿಸಬೇಡಿ' ಎಂದಿದ್ದಾರೆ.

ವಿಷಯಾಧಾರಿತ ಪೂಜೆಗಳ ಕುರಿತು ಮಾತನಾಡಿದ ಸಿಎಂ, 'ಪೂಜಾ ಸಮಿತಿಗಳು ವಿಷಯಾಧಾರಿತ ಆಚರಣೆಗಳನ್ನು ಆಯೋಜಿಸಬಹುದು, ಆದರೆ ಅವು ಸನಾತನ ಸಂಪ್ರದಾಯಗಳು ಮತ್ತು ಸಾಂಸ್ಕೃತಿಕ ಭಾವನೆಗಳಿಗೆ ಧಕ್ಕೆ ತರಬಾರದು' ಎಂದಿದ್ದಾರೆ.

ಮುಂದುವರಿದು, 'ಕೋಲ್ಕತ್ತದ ರೆಡ್ ರೋಡ್‌ನಲ್ಲಿ ಟಿಎಂಸಿ ಆಡಳಿತಾವಧಿಯಲ್ಲಿ ನಡೆಯುತ್ತಿದ್ದ ದುರ್ಗಾ ಪೂಜಾ ಕಾರ್ನಿವಲ್ ಈ ವರ್ಷ ನಡೆಯುವುದಿಲ್ಲ ಎಂದು ಘೋಷಿಸಿದ್ದಾರೆ. ಬದಲಾಗಿ, ರಾಜ್ಯ ಪ್ರವಾಸೋದ್ಯಮ, ಮಾಹಿತಿ ಹಾಗೂ ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಗಳು ಜಂಟಿಯಾಗಿ ಈಡನ್ ಗಾರ್ಡನ್ಸ್‌ನಲ್ಲಿ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಿವೆ' ಎಂದೂ ತಿಳಿಸಿದ್ದಾರೆ.

ಹಿಂದಿನ ತೃಣಮೂಲ ಕಾಂಗ್ರೆಸ್ ಆಡಳಿತದಲ್ಲಿದ್ದಂತೆ, ದುರ್ಗಾ ಪೂಜೆಯನ್ನು ನಡೆಸಲು ಆಯೋಜಕರು ಅನುಮತಿಗಾಗಿ ನ್ಯಾಯಾಲಯಗಳ ಮೊರೆ ಹೋಗಬೇಕಿಲ್ಲ ಎಂದು ಸ್ಪಷ್ಟಪಡಿಸಿದ ಸಿಎಂ, ಅನಗತ್ಯ ಅಡೆತಡೆಗಳಿಲ್ಲದೆ ಬಂಗಾಳಿ ಸಂಪ್ರದಾಯಗಳು ಮತ್ತು ಸಂಸ್ಕೃತಿಗೆ ಅನುಗುಣವಾಗಿ ಹಬ್ಬವನ್ನು ಆಚರಿಸಬಹುದೆಂದು ತಮ್ಮ ಸರ್ಕಾರ ಖಚಿತಪಡಿಸುತ್ತದೆ ಎಂದು ಹೇಳಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries