ವಡೋದರ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ದೇಶದ ಉತ್ತಮ ಶಿಕ್ಷಕರಿಂದ ಉಚಿತ ಆನ್ಲೈನ್ ಕೋಚಿಂಗ್ ನೀಡುವ ಮೂಲಕ ಅವರ ಕುಟುಂಬಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರವು ಈ ಕುರಿತು ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ನರೇಂದ್ರ ಮೋದಿ ಅವರು 'ನಮೋ ಫಾರ್ ವಿಕಸಿತ ಭಾರತ' ಕಾರ್ಯಕ್ರಮದಲ್ಲಿ ₹35 ಸಾವಿರ ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ್ದಾರೆ.
'ದೇಶದಲ್ಲಿ ಲಕ್ಷಾಂತರ ಯುವಜನರು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಯಾರಿ ನಡೆಸುತ್ತಿದ್ದಾರೆ. ಪ್ರತಿವರ್ಷ, ಕುಟುಂಬದ ದುಡಿಮೆಯ ಬಹುಪಾಲು ಹಣವು ಈ ವಿದ್ಯಾರ್ಥಿಗಳ ತರಬೇತಿಗಾಗಿ ಖರ್ಚಾಗುತ್ತಿದೆ. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಹಣವನ್ನು ಉಳಿಸುವ ಉದ್ದೇಶದಿಂದ, ಸರ್ಕಾರವು ಉಚಿತ ಆನ್ಲೈನ್ ತರಬೇತಿ ನೀಡಲು ಮುಂದಾಗುತ್ತಿದೆ. ಇದರಲ್ಲಿ ಭಾರತದ ಉತ್ತಮ ಶಿಕ್ಷಕರು ತರಬೇತಿ ನೀಡಲಿದ್ದಾರೆ. ಇದರ ಖರ್ಚನ್ನು ಸರ್ಕಾರವೇ ಭರಿಸಲಿದೆ' ಎಂದು ಹೇಳಿದ್ದಾರೆ.
ಜಾಗತಿಕ ಬದಲಾವಣೆಗಳು ಶಿಕ್ಷಣದ ಮೇಲೆ ಕೂಡ ಪ್ರಭಾವ ಬೀರಿವೆ. ಪದವಿಯೊಂದಿಗೆ ಕೌಶಲ್ಯಕ್ಕೆ ಕೂಡ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಹಾಗಾಗಿ, ಸರ್ಕಾರವು ಶಿಕ್ಷಣ ನೀತಿಯನ್ನು ಪುನರ್ರೂಪಿಸಿದೆ ಎಂದು ಹೇಳಿದ್ದಾರೆ.
ಕೃತಕಬುದ್ಧಿಮತ್ತೆಯ ತಂತ್ರಜ್ಞರು ಕೇವಲ ಐಟಿ ವಲಯಕ್ಕೆ ಮಾತ್ರ ಸೀಮಿತವಾಗಬಾರದು. ಕೃಷಿ, ಆರೋಗ್ಯ, ಉತ್ಪಾದನೆ ಸೇರಿದಂತೆ ವಿವಿಧ ವಲಯಗಳಲ್ಲಿ ಎಐ ಬಳಕೆ ಮಾಡಬೇಕಿದೆ ಎಂದು ಹೇಳಿದ್ದಾರೆ.
ಭಾರತವು 'ಅಸಾಧಾರಣ ಯುಗ'ಕ್ಕೆ ಸಾಕ್ಷಿಯಾಗುತ್ತಿದೆ ಎಂದು ಹೇಳಿದ ಮೋದಿ, 2047ರ ವೇಳೆಗೆ 'ವಿಕಸಿತ ಭಾರತ'ದ ಗುರಿಗೆ ಆದ್ಯತೆ ನೀಡುವಂತೆ ಯುವಜನತೆಗೆ ಕರೆ ನೀಡಿದ್ದಾರೆ.

