ನವದೆಹಲಿ: ಯುವ ಪೀಳಿಗೆಯ ಭವಿಷ್ಯ ರೂಪಿಸಬೇಕಿದ್ದ ಶಿಕ್ಷಣ ವ್ಯವಸ್ಥೆ ಅವರನ್ನು ನಿರಾಸೆಗೊಳಿಸುತ್ತಿದೆ. ಹಾಗಾಗಿ ಅವರು ಅದರ ಮೇಲಿನ ಭರವಸೆಯನ್ನು ಕಳೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, 'ಪ್ರಶ್ನೆಪತ್ರಿಕೆ ಸೋರಿಕೆ, ಮೂಲಭೂತ ಸೌಕರ್ಯಗಳ ಕೊರತೆ, ಭಾರಿ ಶುಲ್ಕಗಳಿಂದ ಭಾರತದ ಶಿಕ್ಷಣ ವ್ಯವಸ್ಥೆಯು ವಿಫಲವಾಗುತ್ತಿದೆ' ಎಂದು ಹೇಳಿದ್ದಾರೆ.
ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದರೆ, ಅದರಿಂದ ತೊಂದರೆ ಅನುಭವಿಸುತ್ತಿರುವ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರ ಸಮಸ್ಯೆಗಳನ್ನು ಆಲಿಸಬೇಕಿದೆ. ನೀವು ಏಕೆ ಶಿಕ್ಷಣ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಂಡಿದ್ದೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿ ಎಂದು ಹೇಳಿದ್ದಾರೆ.
ಈ ಕುರಿತು ಲಿಂಕ್ ಒಂದನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, 'ದೇಶದ ಶಿಕ್ಷಣ ವ್ಯವಸ್ಥೆಯನ್ನು ಬದಲಿಸಲು ಪ್ರತಿಯೊಬ್ಬ ವಿದ್ಯಾರ್ಥಿಯ ಮಾತುಗಳನ್ನು ಕೇಳುವುದು ಮುಖ್ಯವಾಗಿದೆ. ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಶಿಕ್ಷಣ ವ್ಯವಸ್ಥೆಯ ಕುರಿತು ತಮ್ಮ ಅನುಭವ ಮತ್ತು ಆಲೋಚನೆಗಳನ್ನು ಹಂಚಿಕೊಳ್ಳಿ. ಎಲ್ಲರೂ ಒಟ್ಟಾಗಿ, ಭರವಸೆಯನ್ನು ಮೂಡಿಸೋಣ' ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಅವರು ದೇಶದಾದ್ಯಂತ ವಿದ್ಯಾರ್ಥಿಗಳೊಂದಿಗೆ 'ಛಾತ್ರೋಂ ಕಿ ಗೂಂಜ್' ಸಂವಾದ ಕಾರ್ಯಕ್ರಮ ಮಾಡುತ್ತಿದ್ದಾರೆ. ಈಗಾಗಲೇ ಕೋಟಾ, ಡೆಹ್ರಾಡೂನ್, ಪ್ರಯಾಗರಾಜ್ ಮತ್ತು ಪುಣೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡಿದ್ದಾರೆ. ಸೆ.19ರಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ ಐದನೇ ಕಾರ್ಯಕ್ರಮ ನಡೆಯಲಿದೆ.

