ಕಾಸರಗೋಡು: ಜಿಲ್ಲೆಯ 27ನೇ ಜಿಲ್ಲಾಧಿಕಾರಿಯಾಗಿ ಶ್ರೀಧನ್ಯಾ ಸುರೇಶ್ ಬುಧವಾರ ಅಧಿಕಾರ ಸ್ವೀಕರಿಸಿದರು. ಜಿಲ್ಲಾಧಿಕಾರಿ ಚೇಂಬರ್‍ನಲ್ಲಿ ನಡೆದ ಸಮರಂಭದಲ್ಲಿ ನಿರ್ಗಮಿತ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಅವರು ಶ್ರೀಧನ್ಯಾ ಸುರೇಶ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಜಿಲ್ಲೆಯಲ್ಲಿ ಎಮ್ಸ್ ಸ್ಥಾಪನೆಗೆ ಸಂಬಂಧಿಸಿದಂತೆ ಸರ್ಕಾರದ ನಿಲುವಿನ ಆಧಾರದ ಮೇಲೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ಕಾಸರಗೋಡು ಜಿಲ್ಲೆಯ ಸಮಗ್ರ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ವಿಶೇಷ ಯೋಜನಾ ವರದಿ ಸಿದ್ಧಪಡಿಸಲಾಗುವುದು. ಇದಕ್ಕಾಗಿ ಜಿಲ್ಲೆಯ ವಿವಿಧ ಕ್ಷೇತ್ರಗಳ ಕುರಿತು ಸಮಗ್ರ ಅಧ್ಯಯನ ನಡೆಸಲಾಗುವುದು. ಬಹುಭಾಷಾ ಸಂಗಮ ಭೂಮಿಯಾಗಿರುವ ಕಾಸರಗೋಡಿನಲ್ಲಿ ಎಲ್ಲಾ ಜನರ ಸಹಕಾರ ಯಾಚಿಸುವುದಾಗಿ ಎಂದು ನೂತನ ಜಿಲ್ಲಾಧಿಕಾರಿ ಶ್ರೀಧನ್ಯಾ ಸುರೇಶ್ ತಿಳಿಸಿದ್ದಾರೆ.
ಜಿಲ್ಲೆ ರಚನೆಯಾದ 1984ರ ನಂತರ ಶ್ರೀಧನ್ಯಾ ಸುರೇಶ್ ಅವರು ಜಿಲ್ಲೆಯ ಎರಡನೇ ಮಹಿಳಾ ಜಿಲ್ಲಾಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, 2019ರ ಬ್ಯಾಚ್‍ನ ಐಎಎಸ್ ಅಧಿಕಾರಿಯಾಗಿದ್ದಾರೆ. ಈ ಹಿಂದೆ ಸ್ವಾಗತ್ ರಣವೀರ್‍ಚಂದ್ ಮೊದಲ ಮಹಿಳಾ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ಶ್ರೀಧನ್ಯಾ ಸುರೇಶ್ ಅವರು ಕೋಯಿಕ್ಕೋಡು ಸಹಾಯಕ ಜಿಲ್ಲಾಧಿಕಾರಿ, ಪೆರಂದಲ್ ಮಣ್ಣ ಉಪಜಿಲ್ಲಾಧಿಕಾರಿ, ನೋಂದಣಿ ಇಲಾಖೆಯ ಇನ್‍ಸ್ಪೆಕ್ಟರ್ ಜನರಲ್, ಆಹಾರ ಸುರಕ್ಷತಾ ಆಯುಕ್ತೆ ಸೇರಿದಂತೆ ವಿವಿಧ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.



