ಇಟಾನಗರ್: ಅರುಣಾಚಲಪ್ರದೇಶದ ಚಾಂಗ್‌ಲಾಂಗ್ ಜಿಲ್ಲೆಯ ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಮಂಗಳವಾರ ಶಂಕಿತ ಭಯೋತ್ಪಾದಕರು ಗಸ್ತು ಪಡೆಯ ಮೇಲೆ ದಾಳಿ ನಡೆಸಿದ ಪರಿಣಾಮ ಅಸ್ಸಾಂ ರೈಫಲ್ಸ್‌ನ ಓರ್ವ ಯೋಧ ಮೃತಪಟ್ಟಿದ್ದಾನೆ. ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡಿ ಬೇಲಿ ನಿರ್ಮಾಣ ಮಾಡುತ್ತಿದ್ದ ಪ್ರದೇಶದಲ್ಲಿ 21 ಅಸ್ಸಾಂ ರೈಫಲ್ಸ್‌ನ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ಸಂದರ್ಭ ನಾಪೊಂಗು ವೃತ್ತದ ವ್ಯಾಪ್ತಿಯ ನಾಂಪೊಂಗ್ ನಾಲಾ ಬಳಿ ಬೆಳಗ್ಗೆ ಸುಮಾರು 6.30ಕ್ಕೆ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.
ಶಂಕಿತ ಭಯೋತ್ಪಾದಕರು ಗಸ್ತು ಪಡೆಯ ಮೇಲೆ ಗುಂಡಿನ ದಾಳಿ ನಡೆಸಿದ್ದು, ಹವಿಲ್ದಾರ್ ಜಾಂಖೋಕಾಯ್ ಕುಕಿ (42) ಮೃತಪಟ್ಟಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಗಾಯಗೊಂಡ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ನಂತರ ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ ಎಂದು ಅವರು ಹೇಳಿದ್ದಾರೆ.

