ರೋಮ್: ಇಟಲಿಯ ಶಾಲೆಗಳಲ್ಲಿ ಬುರ್ಖಾ, ನಿಕಾಬ್ ಸೇರಿದಂತೆ ಮುಖ ಮುಚ್ಚುವ ಉಡುಪುಗಳನ್ನು ನಿಷೇಧಿಸುವುದಾಗಿ ಹಾಗೂ ಪ್ರತಿ ತರಗತಿಯಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಗೆ ಮಿತಿ ಹೇರುವುದಾಗಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಭಾನುವಾರ ಘೋಷಿಸಿದ್ದಾರೆ.
ತಮ್ಮ ಪಕ್ಷ 'ಬ್ರದರ್ಸ್ ಆಫ್ ಇಟಲಿ' ಆಯೋಜಿಸಿದ್ದ ಯುವ ಸಮಾವೇಶದಲ್ಲಿ ಮಾತನಾಡಿದ ಅವರು, 'ಪ್ರತಿ ತರಗತಿಯಲ್ಲಿ ಇರಬಹುದಾದ ವಿದೇಶಿ ವಿದ್ಯಾರ್ಥಿಗಳ ಗರಿಷ್ಠ ಸಂಖ್ಯೆಯನ್ನು ಕಾನೂನುಬದ್ಧವಾಗಿ ನಿಗದಿಪಡಿಸುವ ಪ್ರಸ್ತಾವನೆಯನ್ನು ಶೀಘ್ರದಲ್ಲೇ ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು' ಎಂದು ತಿಳಿಸಿದ್ದಾರೆ.
'ಒಂದು ತರಗತಿಯಲ್ಲಿ ಇಟಾಲಿಯನ್ ಭಾಷೆ ತಿಳಿಯದ ಒಬ್ಬನೇ ವಿದ್ಯಾರ್ಥಿ ಇದ್ದರೆ, ಶಿಕ್ಷಕರು ಮತ್ತು ಸಹಪಾಠಿಗಳ ನೆರವಿನಿಂದ ಇಟಾಲಿಯನ್ ಭಾಷೆ ಕಲಿತು ಆತ ನಮ್ಮವನಾಗುತ್ತಾನೆ. ಆದರೆ ಇಂತಹ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದರೆ ಅಥವಾ ಅವರೇ ಬಹುಸಂಖ್ಯಾತರಾಗಿದ್ದರೆ, ಇಟಾಲಿಯನ್ ವಿದ್ಯಾರ್ಥಿಗಳಲ್ಲಿ ತಾವು ಅಲ್ಪಸಂಖ್ಯಾತರು ಎಂಬ ಭಾವನೆ ಮೂಡಬಹುದು' ಎಂದು ಅವರು ಹೇಳಿದ್ದಾರೆ.
ವಿದೇಶಿ ವಿದ್ಯಾರ್ಥಿಗಳ ಪೋಷಕರು ಇಟಾಲಿಯನ್ ಭಾಷೆ ಕಲಿಯಲು ಈ ಕ್ರಮ ಪ್ರೋತ್ಸಾಹ ನೀಡಲಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಶಾಲೆಗಳಿಗೆ ಬರುವ ವಿದ್ಯಾರ್ಥಿಗಳು ಮುಖ ಮುಚ್ಚಿಕೊಳ್ಳಬಾರದು ಎಂದು ಒತ್ತಿ ಹೇಳಿದ ಮೆಲೊನಿ, 'ಸಂಪ್ರದಾಯದ ಹೆಸರಿನಲ್ಲಿ ಯುವತಿಯೊಬ್ಬಳು ತನ್ನನ್ನು ತಾನು ಸಂಪೂರ್ಣವಾಗಿ ಮುಚ್ಚಿಕೊಳ್ಳಬೇಕು ಎಂಬ ನಿಯಮ ನಮ್ಮ ದೇಶದಲ್ಲಿಲ್ಲ' ಎಂದು ಹೇಳಿದ್ದಾರೆ.
ವಲಸೆ ಕುರಿತು ಅಧ್ಯಯನ ನಡೆಸುವ 'ಫೊಂಡಾಜಿಯೋನ್ ಐಎಸ್‌ಎಮ್‌ಯು' ಸಂಸ್ಥೆಯ ಅಂಕಿಅಂಶಗಳ ಪ್ರಕಾರ, ಇಟಲಿ ಶಾಲೆಗಳಲ್ಲಿ ದಾಖಲಾದ ವಿದ್ಯಾರ್ಥಿಗಳಲ್ಲಿ ಇಟಲಿ ಪೌರತ್ವ ಹೊಂದಿರದವರ ಪ್ರಮಾಣ ಶೇ 11.6ರಷ್ಟಿದೆ. ಅಂದರೆ, ಪ್ರತಿ 100 ವಿದ್ಯಾರ್ಥಿಗಳಲ್ಲಿ 12 ಮಂದಿ ವಿದೇಶಿ ವಿದ್ಯಾರ್ಥಿಗಳಾಗಿದ್ದಾರೆ.

