ಕೋಟ್‌ಪುತ್ಲಿ-ಬೆಹ್ರೋರ್/ಸೀಕರ್ : ಅದು ರಾಜಸ್ಥಾನದ ಸೀಕರ್ ಜಿಲ್ಲೆಯ ಸ್ಯಾಲೋಡ್ರಾ ಗ್ರಾಮ. ಇಲ್ಲಿನ ನಿವಾಸಿ 27 ವರ್ಷದ ಮನೀಷಾ ತಮ್ಮ ಮನೆಯ ಅಂಗಳದಲ್ಲಿ ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ. ಅದೇ ಅಂಗಳದ ಮತ್ತೊಂದು ಮೂಲೆಯಲ್ಲಿ ಆಮ್ಲಜನಕದ ಸಿಲಿಂಡರ್‌ಗಳು ಸಾಲಾಗಿ ಬಿದ್ದಿವೆ.
ಅವು ಇತ್ತೀಚೆಗಷ್ಟೇ ಮೃತಪಟ್ಟ ಆಕೆಯ ಪತಿ ಮಂಜೀತ್ (32) ತಮ್ಮ ಕೊನೆಯ ದಿನಗಳಲ್ಲಿ ಉಸಿರಾಡಲು ಪಡುತ್ತಿದ್ದ ಯಾತನೆ ಹಾಗೂ ಸಾವು-ಬದುಕಿನ ಹೋರಾಟಕ್ಕೆ ಮೌನ ಸಾಕ್ಷಿಯಾಗಿವೆ.
ಮಂಜೀತ್ ಹತ್ತಿರದ ಕಲ್ಲು ಪುಡಿ ಮಾಡುವ ಘಟಕದಲ್ಲಿ (Stone crushing unit) ಕಾರ್ಮಿಕರಾಗಿದ್ದರು. ಮೂರು ವರ್ಷಗಳಿಗೂ ಹೆಚ್ಚು ಕಾಲ ಅವರು 'ಸಿಲಿಕೋಸಿಸ್' (Silicosis) ಎಂಬ ಅತ್ಯಂತ ಭೀಕರ ಹಾಗೂ ಗುಣಪಡಿಸಲಾಗದ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದರು.
ಈ ಪ್ರದೇಶದಲ್ಲಿ ನಡೆಯುತ್ತಿರುವ ಅತಿಯಾದ ಗಣಿಗಾರಿಕೆ, ಬೋರ್‌ವೆಲ್ ಕೊರೆಯುವುದು, ಬ್ಲಾಸ್ಟಿಂಗ್ (ಸ್ಫೋಟ) ಮತ್ತು ಕಲ್ಲು ಪುಡಿ ಮಾಡುವ ಘಟಕಗಳು ಗಾಳಿಯಲ್ಲಿ ಸೂಸುವ ಸೂಕ್ಷ್ಮ 'ಸಿಲಿಕಾ ಧೂಳನ್ನು' (Silica dust) ನಿರಂತರವಾಗಿ ಉಸಿರಾಡಿದ್ದೇ ಇದಕ್ಕೆ ಪ್ರಮುಖ ಕಾರಣ.
ಅರಾವಳಿ ಪರ್ವತ ಶ್ರೇಣಿಯ ಭಾಗವಾಗಿರುವ ಸ್ಯಾಲೋಡ್ರಾ ಗ್ರಾಮವೊಂದರಲ್ಲೇ ಕಳೆದ ಕೆಲವು ವರ್ಷಗಳಲ್ಲಿ 'ಸಿಲಿಕೋಸಿಸ್' ಎಂಬ ಭೀಕರ ರೋಗಕ್ಕೆ 50ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.
ಅಧಿಕಾರಿಗಳ ಉಪೇಕ್ಷೆ - ಆತಂಕದಲ್ಲಿ ಗ್ರಾಮಸ್ಥರು:
ಅರಾವಳಿ ಪ್ರದೇಶದ ವಿವಿಧ ಮಗ್ಗುಲುಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ನೇಮಿಸಿದ್ದ ಉನ್ನತ ಮಟ್ಟದ ಸಮಿತಿಯು ಆಗಸ್ಟ್ 11ರಂದು ತನ್ನ ಕ್ಷೇತ್ರ ಭೇಟಿಯನ್ನು ಪೂರ್ಣಗೊಳಿಸಿದೆ. ಆದರೆ ಗಣಿಗಾರಿಕೆಯಿಂದ ತೀವ್ರವಾಗಿ ಸಂಕಷ್ಟಕ್ಕೊಳಗಾದ ಕೋಟ್‌ಪುತ್ಲಿ-ಬೆಹ್ರೋರ್ ಮತ್ತು ಸೀಕರ್ ಜಿಲ್ಲೆಗಳ ಅನೇಕ ಪ್ರದೇಶಗಳಿಗೆ ಈ ಸಮಿತಿ ಭೇಟಿಯೇ ನೀಡಿಲ್ಲ ಎಂಬುವುದು ಸಾಮಾಜಿಕ ಕಾರ್ಯಕರ್ತರು ಮತ್ತು ಸ್ಥಳೀಯರ ಆರೋಪ.
ನಮ್ಮಲ್ಲಿದ್ದ ಎಲ್ಲಾ ಉಳಿತಾಯದ ಹಣವನ್ನು ಗಂಡನ ಚಿಕಿತ್ಸೆಗೆ ಖರ್ಚು ಮಾಡಿದೆವು. ಆದರೂ ಸರ್ಕಾರದ ಕಡೆಯಿಂದ ಯಾರೊಬ್ಬರೂ ನಮ್ಮ ಬಳಿ ಮಾತನಾಡಿಲ್ಲ, ನೆರವಿಗೂ ಬಂದಿಲ್ಲ ಎಂದು ಇಬ್ಬರು ಮಕ್ಕಳ ತಾಯಿಯಾದ ಮನೀಷಾ ಅಳಲು ತೋಡಿಕೊಂಡಿದ್ದಾರೆ.
ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಉಸಿರನ್ನೇ ಕಸಿಯುತ್ತಿರುವ ಧೂಳು: ಅರಾವಳಿ ತಪ್ಪಲಿನ ಜನರಿಗೆ ಮಾರಕವಾದ 'ಸಿಲಿಕೋಸಿಸ್'
ಒಂದು ಸಾಲಿನಲ್ಲಿಅರಾವಳಿ ತಪ್ಪಲಿನ ಗಣಿಗಾರಿಕೆ ಮತ್ತು ಕಲ್ಲು ಪುಡಿ ಮಾಡುವ ಘಟಕಗಳಿಂದ ಹೊರಸೂಸುವ ಧೂಳು ಸ್ಥಳೀಯರಲ್ಲಿ ಮಾರಕ ಸಿಲಿಕೋಸಿಸ್ ಕಾಯಿಲೆಗೆ ಕಾರಣವಾಗುತ್ತಿದ್ದು, ಜನಜೀವನವನ್ನು ದುಸ್ತರಗೊಳಿಸಿದೆ.
ಏನು? ಏಕೆ? ಹೇಗೆ?
ಸಿಲಿಕೋಸಿಸ್ ಕಾಯಿಲೆಗೆ ಮುಖ್ಯ ಕಾರಣವೇನು?
ಅರಾವಳಿ ಪರ್ವತ ಪ್ರದೇಶಗಳಲ್ಲಿ ನಡೆಯುತ್ತಿರುವ ಅತಿಯಾದ ಗಣಿಗಾರಿಕೆ, ಬ್ಲಾಸ್ಟಿಂಗ್ ಮತ್ತು ಕಲ್ಲು ಪುಡಿ ಮಾಡುವ ಘಟಕಗಳಿಂದ ಗಾಳಿಯಲ್ಲಿ ಬೆರೆಯುವ ಸೂಕ್ಷ್ಮ 'ಸಿಲಿಕಾ ಧೂಳನ್ನು' ನಿರಂತರವಾಗಿ ಉಸಿರಾಡುವುದರಿಂದ ಈ ಕಾಯಿಲೆ ಹರಡುತ್ತಿದೆ.
ಸಂತ್ರಸ್ತರಿಗೆ ಸರ್ಕಾರಿ ಪರಿಹಾರ ಪಡೆಯಲು ಇರುವ ತೊಂದರೆಗಳೇನು?
ಸಿಲಿಕೋಸಿಸ್ ಪೀಡಿತರೆಂದು ದೃಢೀಕರಣ ಪತ್ರ ಪಡೆಯಲು ಆಸ್ಪತ್ರೆಗಳಿಗೆ ಪದೇ ಪದೇ ಅಲೆಯುವುದು, ದಾಖಲೆಗಳ ಸಂಕೀರ್ಣ ಪ್ರಕ್ರಿಯೆ ಮತ್ತು ಆರ್ಥಿಕ ಸಂಕಷ್ಟದಿಂದ ಬಡ ಕಾರ್ಮಿಕರಿಗೆ ಪರಿಹಾರ ಸಿಗುವುದು ಮರೀಚಿಕೆಯಾಗಿದೆ.
ಈ ಸಮಸ್ಯೆಯ ವ್ಯಾಪ್ತಿ ಎಷ್ಟು ದೊಡ್ಡದಾಗಿದೆ?
ರಾಜಸ್ಥಾನದ ವಿವಿಧ ಜಿಲ್ಲೆಗಳಲ್ಲಿ ಸಾವಿರಾರು ಸಿಲಿಕೋಸಿಸ್ ಪ್ರಕರಣಗಳು ವರದಿಯಾಗಿವೆ; ಕೇವಲ ಸ್ಯಾಲೋಡ್ರಾ ಗ್ರಾಮವೊಂದರಲ್ಲೇ 50ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಸುಪ್ರೀಂ ಕೋರ್ಟ್ ಸಮಿತಿಯ ಮುಂದಿರುವ ಸವಾಲುಗಳೇನು?
ಅರಾವಳಿ ಪ್ರದೇಶದ ಪರಿಸರ ಸೂಕ್ಷ್ಮ ಗಡಿಗಳನ್ನು ನಿಗದಿಪಡಿಸಲು ನೇಮಿಸಲಾದ ಸಮಿತಿಯು ನಿಗದಿತ ಗಡುವಿನೊಳಗೆ ವರದಿ ಸಲ್ಲಿಸಬೇಕಿದ್ದು, ಸಂತ್ರಸ್ತ ಪ್ರದೇಶಗಳಿಗೆ ಸಮಿತಿ ಭೇಟಿ ನೀಡದಿರುವುದು ಸ್ಥಳೀಯರಲ್ಲಿ ಆಕ್ರೋಶ ಮೂಡಿಸಿದೆ.
ಗಣಿಗಾರಿಕೆ ಪೀಡಿತ ಗ್ರಾಮಸ್ಥರ ಪರಿಸ್ಥಿತಿ ಹೇಗಿದೆ?
ಪ್ರತಿ ಮನೆಯಲ್ಲೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರಿದ್ದು, ಬಡತನದ ಕಾರಣದಿಂದಾಗಿ ವಿಷಗಾಳಿಯ ನಡುವೆಯೇ ವಾಸಿಸುವ ಅನಿವಾರ್ಯತೆ ಅಲ್ಲಿನ ಜನರಿಗಿದೆ.
ಪ್ರಮುಖ ಅಂಕಿಅಂಶಗಳು
6,876ಸಿಲಿಕೋಸಿಸ್ ಕಾಯಿಲೆಗೆ ಬಲಿಯಾದವರ ಸಂಖ್ಯೆ (ಅಧ್ಯಯನ)23,436ಅಧ್ಯಯನದಲ್ಲಿ ದೃಢಪಟ್ಟ ಸಿಲಿಕೋಸಿಸ್ ಪ್ರಕರಣಗಳುನವೆಂಬರ್ 30ನ್ಯಾಯಾಲಯದ ವರದಿ ಸಲ್ಲಿಕೆಯ ಅಂತಿಮ ದಿನಾಂಕ₹ 20 ಸಾವಿರಅಲ್ಟ್ರಾಟೆಕ್ ಸಿಮೆಂಟ್ ಸಂಸ್ಥೆಗೆ ವಿಧಿಸಿದ ದಂಡ
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಕಮರಿದ ಭರವಸೆ:
ದಶಕಗಳಿಂದ ನಡೆಯುತ್ತಿರುವ ಗಣಿಗಾರಿಕೆಯಿಂದಾಗಿ ಇಡೀ ಅರಾವಳಿ ಪ್ರದೇಶದಲ್ಲಿ ವಾಯುಮಾಲಿನ್ಯದ ಮಟ್ಟ ಮಿತಿಮೀರಿದ್ದು, ಗಣಿ ಕಾರ್ಮಿಕರು ಸೇರಿದಂತೆ ಸುತ್ತಮುತ್ತಲಿನ ನಿವಾಸಿಗಳು ಉಸಿರಾಟದ ತೀವ್ರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಅರಾವಳಿ ಪರ್ವತ ಶ್ರೇಣಿಯ ವ್ಯಾಪ್ತಿ ಮತ್ತು ಗಡಿಗಳನ್ನು ಗುರುತಿಸುವ ಸಂಬಂಧ ಕೇಂದ್ರ ಸರ್ಕಾರ ನೀಡಿದ್ದ ವರದಿಯ ಬಗ್ಗೆ ಈ ಸುಪ್ರೀಂ ಕೋರ್ಟ್ ನೇಮಿಸಿದ್ದ ಸಮಿತಿಯು ಸ್ವತಂತ್ರ ಪರಿಶೀಲನೆ ನಡೆಸುತ್ತಿದೆ.
ನವೆಂಬರ್ 30ರೊಳಗೆ ಸಲ್ಲಿಕೆಯಾಗಲಿರುವ ಸಮಿತಿಯ ಅಂತಿಮ ವರದಿಯು ಅರಾವಳಿ ಪರ್ವತ ಶ್ರೇಣಿ ಹಾಗೂ ಅದರ ಸುತ್ತಮುತ್ತಲಿನ ಪರಿಸರ ಸೂಕ್ಷ್ಮ ಗಡಿಗಳನ್ನು ನಿಗದಿಪಡಿಸುವ ಮೂಲಕ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿರೀಕ್ಷೆಯಿದೆ. ಆದರೆ, ಸಂತ್ರಸ್ತರಲ್ಲಿ ಯಾವುದೇ ಭರವಸೆ ಉಳಿದಿಲ್ಲ.
ವರದಿ ಸಲ್ಲಿಕೆಗೆ ಹೆಚ್ಚುವರಿಯಾಗಿ ಕೇಳಿದ್ದ ಆರು ತಿಂಗಳ ಕಾಲಾವಕಾಶವನ್ನು ಸುಪ್ರೀಂ ಕೋರ್ಟ್ ಇತ್ತೀಚೆಗಷ್ಟೇ ತಿರಸ್ಕರಿಸಿದ್ದು (ಆಗಸ್ಟ್ 31 ಮೂಲ ಗಡುವಾಗಿತ್ತು), ಈ ಅವಸರದ ಪ್ರಕ್ರಿಯೆಯಿಂದ ತಮಗೆ ನ್ಯಾಯ ಸಿಗಲಾರದು ಎಂಬ ನಿರಾಶೆ ಸಂತ್ರಸ್ತರದ್ದು.
ಉಸಿರನ್ನೇ ಕಸಿಯುತ್ತಿರುವ ಗಾಳಿ, ಪ್ರತಿ ಮನೆಯಲ್ಲೂ ಕಣ್ಣೀರಿನ ಕಥೆ:
ಮನೀಷಾ ಅವರ ಮನೆಯಿಂದ ಕೆಲವೇ ಹೆಜ್ಜೆಗಳ ದೂರದಲ್ಲಿ 43 ವರ್ಷದ ಸಂಜಯ್ ವಾಸಿಸುತ್ತಿದ್ದಾರೆ. ಕಲ್ಲು ಪುಡಿ ಮಾಡುವ ಘಟಕದಲ್ಲೇ ಕೆಲಸ ಮಾಡುತ್ತಿದ್ದ ಅವರ ಸಹೋದರ ಮನೋಜ್, ಕಳೆದ ಜುಲೈನಲ್ಲಿ ಸಿಲಿಕೋಸಿಸ್‌ಗೆ ಬಲಿಯಾಗಿದ್ದಾರೆ. ಅವರ ಒಂದೇ ಕುಟುಂಬದಲ್ಲಿ ಈ ಕಾಯಿಲೆಗೆ ತುತ್ತಾದ ಆರನೇ ವ್ಯಕ್ತಿ ಅವರು ( ಮನೋಜ್).
ಬೇರೆಡೆಗೆ ವಲಸೆ ಹೋಗಲು ನಮ್ಮ ಬಳಿ ಹಣವಿಲ್ಲ. ಇಷ್ಟೊಂದು ಜನರನ್ನು ಬಲಿಪಡೆದ ಅದೇ ವಿಷಗಾಳಿಯನ್ನು ಉಸಿರಾಡುತ್ತಾ ನನ್ನ ಮಕ್ಕಳೂ ಇಲ್ಲೇ ಇರಬೇಕಾದ ಅನಿವಾರ್ಯ ಸ್ಥಿತಿ ಬಂದೊದಗಿದೆ ಎಂದು ಸಂಜಯ್ ತಮ್ಮ ಅಳಲು ತೋಡಿಕೊಂಡಿದ್ದಾರೆ.
2023ರಲ್ಲಿ 'ಜರ್ನಲ್ ಆಫ್ ಆಕ್ಯುಪೇಷನಲ್ ಆಯಂಡ್ ಎನ್ವಿರಾನ್‌ಮೆಂಟಲ್ ಮೆಡಿಸಿನ್'ನಲ್ಲಿ ಪ್ರಕಟವಾದ 'Prevalence of Silicosis in Stone Carving and Sandstone Mining Industry in Rajasthan' ಎಂಬ ಅಧ್ಯಯನದಲ್ಲಿ ಸರ್ಕಾರಿ ದತ್ತಾಂಶಗಳನ್ನು ವಿಶ್ಲೇಷಿಸಲಾಗಿತ್ತು.
ರಾಜಸ್ಥಾನದಲ್ಲಿ ಸಿಲಿಕೋಸಿಸ್ ಪತ್ತೆ, ತಡೆಗಟ್ಟುವಿಕೆ, ನಿಯಂತ್ರಣ ಮತ್ತು ಪುನರ್ವಸತಿ ನೀತಿ-2019ರ ಅಡಿಯಲ್ಲಿ ಪ್ರಾರಂಭಿಸಲಾದ ಪೋರ್ಟಲ್‌ನಲ್ಲಿನ ನೋಂದಣಿ, ದೃಢೀಕರಣ ಮತ್ತು ಪರಿಹಾರ ವಿತರಣೆಯ ಅಂಕಿ-ಅಂಶಗಳನ್ನು ಈ ಅಧ್ಯಯನವು ಕೂಲಂಕುಷವಾಗಿ ಪರಿಶೀಲಿಸಿತ್ತು.
ಈ ಅಧ್ಯಯನದ ಸಮಯದಲ್ಲಿ, 6,876 ಸಾವುಗಳು ಸೇರಿ ಬರೊಬ್ಬರಿ 23,436 ಸಿಲಿಕೋಸಿಸ್ ಪ್ರಕರಣಗಳು ದೃಢಪಟ್ಟಿದ್ದವು. ಇದರಲ್ಲಿ 741 ಸಾವುಗಳು ಸೇರಿದಂತೆ ಒಟ್ಟು 4,977 ಸಿಲಿಕೋಸಿಸ್ ಪ್ರಕರಣಗಳ ದತ್ತಾಂಶವನ್ನು ವಿಶ್ಲೇಷಿಸಿದಾಗ, ಕಲ್ಲು ಕೆತ್ತನೆ ಉದ್ಯಮವೇ ಪ್ರಮುಖವಾಗಿರುವ ಜಿಲ್ಲೆಗಳಲ್ಲಿ ಈ ರೋಗ ಪತ್ತೆಯಾಗುವ ಪ್ರಮಾಣ ಅಧಿಕವಾಗಿದೆ ಎಂಬುವುದು ದೃಢಪಟ್ಟಿತ್ತು. ಅಷ್ಟೇ ಅಲ್ಲದೇ, 36 ರಿಂದ 40 ವರ್ಷ ವಯಸ್ಸಿನರು ಈ ರೋಗಕ್ಕೆ ಹೆಚ್ಚಾಗಿ ತುತ್ತಾಗುತ್ತಿದ್ದಾರೆ ಎಂಬ ಸತ್ಯ ಈ ವಿಶ್ಲೇಷಣೆಯಿಂದ ಹೊರಬಿದ್ದಿತ್ತು.
ದೃಢೀಕರಣ ಪತ್ರ ಸಿಗುವುದೇ ದೊಡ್ಡ ಸವಾಲು
ಆದರೆ, ನೈಜ ಚಿತ್ರಣ ಇದಕ್ಕಿಂತಲೂ ಭೀಕರವಾಗಿದೆ ಎನ್ನುತ್ತಾರೆ ಪರಿಸರವಾದಿ ಕೈಲಾಶ್ ಮೀನಾ. ಸರ್ಕಾರದಿಂದ ಸಿಲಿಕೋಸಿಸ್ ಪೀಡಿತ ಎಂದು ದೃಢೀಕರಣ ಪತ್ರ ಪಡೆಯುವುದು ಅತ್ಯಂತ ಸಂಕೀರ್ಣವಾಗಿದೆ. ಆಸ್ಪತ್ರೆಗಳಿಗೆ ಅಲೆಯಲು ಸಾಧ್ಯವಾಗದೆ ಸಾವಿರಾರು ರೋಗಿಗಳು ದಾಖಲೆಯಿಂದಲೇ ಹೊರಗುಳಿದಿದ್ದಾರೆ ಎನ್ನುತ್ತಾರೆ ಅವರು.
ಈ ಪ್ರಮಾಣಪತ್ರ ಪಡೆಯಲು ರೋಗಿಗಳು ಮತ್ತು ಅವರ ಕುಟುಂಬದವರು ಆಸ್ಪತ್ರೆಗಳಿಗೆ ಪದೇ ಪದೇ ಅಲೆದಾಡಬೇಕಾಗುತ್ತದೆ. ದಿನದ ಕೂಲಿ ನೆಚ್ಚಿಕೊಂಡಿರುವ ಬಡ ಜನರಿಗೆ ಪದೇ ಪದೇ ಆಸ್ಪತ್ರೆಗೆ ತಿರುಗಾಡುವ ವೆಚ್ಚವನ್ನು ಭರಿಸಲು ಸಾಧ್ಯವಾಗದೆ, ಅವರು ಈ ನೋಂದಣಿ ಪ್ರಕ್ರಿಯೆಯನ್ನೇ ಅರ್ಧಕ್ಕೆ ಕೈಬಿಡುತ್ತಾರೆ ಎಂದು ಮೀನಾ ವಿಷಾದ ವ್ಯಕ್ತಪಡಿಸಿದ್ದಾರೆ.
ಉದಾಹರಣೆಗೆ, ಸ್ಯಾಲೋಡ್ರಾ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ, 50ರ ಹರೆಯದ ವಿಧವೆ ಪ್ರೇಮಾ ದೇವಿ ಕಳೆದ ಮೂರು ವರ್ಷಗಳಲ್ಲಿ ತಮ್ಮ ಮಗನ ನೆರವಿನಿಂದ ಈ ಸರ್ಕಾರದ ಪೋರ್ಟಲ್‌ನಲ್ಲಿ ಬರೋಬ್ಬರಿ ಮೂರು ಬಾರಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಪ್ರತಿ ಬಾರಿಯೂ ಆಕೆಯ ಅರ್ಜಿಯನ್ನು ತಿರಸ್ಕರಿಸಲಾಗಿದೆ.
ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿದ ನಂತರ ನಾವು ಆಸ್ಪತ್ರೆಗೆ ಹೋಗಿ ಶ್ವಾಸಕೋಶದ ಎಕ್ಸ್-ರೇ ಮಾಡಿಸಬೇಕು. ಅದರ ವರದಿಯನ್ನು ತಪಾಸಣೆಗಾಗಿ ವೈದ್ಯರೊಬ್ಬರಿಗೆ ಕಳುಹಿಸಲಾಗುತ್ತದೆ. ಅವರ ಆಧಾರದ ಮೇಲೆಯೇ ದೃಢೀಕರಣ ಪತ್ರ ಸಿಗುವುದು. ಆದರೆ ಆ ವೈದ್ಯರು ಯಾರು, ಅವರ ಕಚೇರಿ ಎಲ್ಲಿದೆ ಎಂಬುದು ನಮಗೆಂದಿಗೂ ತಿಳಿಯುವುದೇ ಇಲ್ಲ. ನನ್ನ ಎಕ್ಸ್-ರೇ ವರದಿ ಪರಿಶೀಲನೆಗೆ ಹೋದಾಗಲೆಲ್ಲಾ ನೋಂದಣಿಯನ್ನು ರದ್ದುಗೊಳಿಸಲಾಗಿದೆ ಎಂದು ಪ್ರೇಮಾ ದೇವಿ ಅಳಲು ತೋಡಿಕೊಂಡಿದ್ದಾರೆ.
ಪ್ರೇಮಾ ದೇವಿ ಅವರಂತೆಯೇ ಹಲವರಿಗೆ ಈ ದೃಢೀಕರಣ ಪತ್ರ ಬರಿ ಕಾಗದದ ತುಂಡಲ್ಲ, ಅದು ಅವರ ಜೀವನಾಧಾರ. ಏಕೆಂದರೆ ಶ್ವಾಸಕೋಶ ಸಂಪೂರ್ಣ ಹಾಳಾಗಿ ಹಾಸಿಗೆ ಹಿಡಿಯುವ ಇವರಿಗೆ ಯಾವುದೇ ಆದಾಯದ ಮೂಲವಿರುವುದಿಲ್ಲ. ಸರ್ಕಾರಿ ದೃಢೀಕರಣ ಪತ್ರ ಸಿಕ್ಕರೆ ರೋಗಿಗಳಿಗೆ ಉಚಿತ ಔಷಧಗಳು, ತಿಂಗಳಿಗೆ ₹5 ಸಾವಿರ ಪಿಂಚಣಿ ಹಾಗೂ ಸರ್ಕಾರದ ಇತರೆ ಕಲ್ಯಾಣ ಸೌಲಭ್ಯಗಳು ಸಿಗುತ್ತವೆ ಎನ್ನುತ್ತಾರೆ ಕೈಲಾಶ್ ಮೀನಾ.
ರೋಗಿಗಳಿಗೆ ಕೃತಕ ಆಮ್ಲಜನಕದ ಅಗತ್ಯ ಬಿದ್ದ ಮೇಲಂತೂ ಈ ಪರಿಹಾರದ ಹಣ ಪ್ರತಿಯೊಬ್ಬರಿಗೂ ಅತ್ಯಂತ ನಿರ್ಣಾಯಕವಾಗುತ್ತದೆ. ಸ್ಯಾಲೋಡ್ರಾ ನಿವಾಸಿಗಳ ಪ್ರಕಾರ, ಪ್ರತಿಯೊಂದು ಆಕ್ಸಿಜನ್ ಸಿಲಿಂಡರ್‌ಗೆ ಸುಮಾರು ₹1 ಸಾವಿರ ವೆಚ್ಚವಾಗುತ್ತದೆ. ಇತ್ತೀಚೆಗೆ ಮೃತಪಟ್ಟ ಮಂಜೀತ್ ತಮ್ಮ ಕೊನೆಯ ದಿನಗಳಲ್ಲಿ ದಿನಕ್ಕೆ ಬರೋಬ್ಬರಿ 12 ಆಕ್ಸಿಜನ್ ಸಿಲಿಂಡರ್‌ಗಳನ್ನು ಬಳಸಿದ್ದರು.
ಕೇವಲ ಒಂದು ಗ್ರಾಮಕ್ಕೆ ಸೀಮಿತವಲ್ಲ:
ಈ ಭೀಕರ ಸಮಸ್ಯೆ ಕೇವಲ ಸ್ಯಾಲೋಡ್ರಾಗೆ ಮಾತ್ರ ಸೀಮಿತವಾಗಿಲ್ಲ. ಕೋಟ್‌ಪುತ್ಲಿ-ಬೆಹ್ರೋರ್ ಜಿಲ್ಲೆಯ ಗಣಿಗಾರಿಕೆ ಪೀಡಿತ ಇತರ ಪ್ರದೇಶಗಳಿಗೂ ಹರಡಿದೆ. ಜೋಧ್‌ಪುರ-ಮೋಹನ್‌ಪುರ ಗ್ರಾಮಗಳು ಇದಕ್ಕೆ ಹೊರತಾಗಿಲ್ಲ.
ಗ್ರಾಮದ ಬಹುತೇಕ ನಿವಾಸಿಗಳು ತೀವ್ರ ಉಸಿರಾಟದ ತೊಂದರೆಯಿಂದ ನರಳುತ್ತಿದ್ದಾರೆ ಎಂದು 'ಜೋಧ್‌ಪುರ ಸಂಘರ್ಷ ಸಮಿತಿ'ಯ ಕಾರ್ಯದರ್ಶಿ ಕೈಲಾಶ್ ಯಾದವ್ ಆತಂಕ ವ್ಯಕ್ತಪಡಿಸಿದ್ದಾರೆ.
ಇಲ್ಲಿರುವ ದೇವಾಲಯದ ಪಕ್ಕದಲ್ಲೇ 'ಅಲ್ಟ್ರಾಟೆಕ್ ಸಿಮೆಂಟ್' ಕಂಪನಿಯ ಬೃಹತ್ ಗಣಿಗಾರಿಕೆ ಪ್ರದೇಶವಿದೆ. ಕಲ್ಲುಗಳನ್ನು ಅಗೆಯುವ ಜೆಸಿಬಿಗಳು, ಗಣಿಯಿಂದ ಪಕ್ಕದ ಕಲ್ಲು ಪುಡಿ ಮಾಡುವ ಘಟಕಕ್ಕೆ ( ಕಲ್ಲುಗಳನ್ನು ಸಾಗಿಸುವ ಡಂಪರ್ ಟ್ರಕ್‌ಗಳ ಸದ್ದು ಇಲ್ಲಿ ನಿರಂತರ. ಬೆಟ್ಟಗಳನ್ನು ಸ್ಫೋಟಿಸುವ ಪ್ರಚಂಡ ಸದ್ದು ಹಾಗೂ ಧೂಳು ರಾತ್ರಿ ವೇಳೆಯಲ್ಲೂ ಇಲ್ಲಿ ಸಾಮಾನ್ಯ ಎನ್ನುತ್ತಾರೆ.
ಮಕ್ಕಳಿಗೂ ತಪ್ಪದ ಉಸಿರಾಟದ ತೊಂದರೆ:
ಈ ಗಣಿಗಾರಿಕೆಯ ಧೂಳು ನಮ್ಮ ಪುಟ್ಟ ಮಕ್ಕಳನ್ನೂ ಬಿಡುತ್ತಿಲ್ಲ. ನನ್ನ ಮಗಳಿಗೆ ಈಗ ಅಸ್ತಮಾ ಬಂದಿದ್ದು, ಆಕೆ ಸರಾಗವಾಗಿ ಉಸಿರಾಡಲು ಪ್ರತಿದಿನ ಇನ್ಹೇಲರ್ ಬಳಸಬೇಕಾದ ಸ್ಥಿತಿಯಿದೆ ಎಂದು ಗಣಿಗಾರಿಕೆ ಪ್ರದೇಶದಿಂದ ಕೆಲವೇ ದೂರದಲ್ಲಿ ವಾಸಿಸುವ, ಏಳು ವರ್ಷದ ಹೆಣ್ಣು ಮಗುವಿನ ತಾಯಿ ರೇಖಾ ಕಣ್ಣೀರಿಟ್ಟಿದ್ದಾರೆ.
ನ್ಯಾಷನಲ್ ಅಲಯನ್ಸ್ ಆಫ್ ಪೀಪಲ್ಸ್ ಮೂವ್‌ಮೆಂಟ್ (NAPM) ಮತ್ತು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (PUCL) ಸಂಸ್ಥೆಗಳು 2023ರ ಏಪ್ರಿಲ್‌ನಲ್ಲಿ ಈ ಗ್ರಾಮದಲ್ಲಿ ನಡೆಸಿದ ಕ್ಷೇತ್ರ ಸಮೀಕ್ಷೆಯು ಪರಿಸ್ಥಿತಿ ಎಷ್ಟು ಭೀಕರವಾಗಿದೆ ಎಂಬುದಕ್ಕೆ ಹಿಡಿದ ಕನ್ನಡಿಯಂತಿದೆ.
ಸಮೀಕ್ಷೆಗೆ ಒಳಪಟ್ಟ ಸುಮಾರು 928 ನಿವಾಸಿಗಳಲ್ಲಿ ಬರೊಬ್ಬರಿ 478 ಜನ ಶ್ವಾಸಕೋಶದ ತೊಂದರೆ, ಚರ್ಮರೋಗ, ಕ್ಷಯ (ಟಿಬಿ) ಹಾಗೂ ಕಣ್ಣಿನ ಉರಿಯಂತಹ ತೀವ್ರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ.
ಈ ಕಾಯಿಲೆಗಳಿಗೆ ಗಣಿಗಾರಿಕೆಯ ಸ್ಫೋಟಗಳಿಂದ ತೂರಿಬರುವ ಧೂಳು ಕಾರಣ ಎಂದು ಸಂಸ್ಥೆಗಳು ತಮ್ಮ ವರದಿಯಲ್ಲಿ ಸ್ಪಷ್ಟಪಡಿಸಿದ್ದು, ಈ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿವೆ.
ಜೋಧ್‌ಪುರ-ಮೋಹನ್‌ಪುರ ಗ್ರಾಮಸ್ಥರ ಮೇಲಾಗಿರುವ ಗಂಭೀರ ಪರಿಣಾಮವನ್ನು ಪರಿಗಣಿಸಿದ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ (NGT) ಮಧ್ಯ ವಲಯ ಪೀಠವು, ಕಳೆದ ನವೆಂಬರ್‌ನಲ್ಲಿ ಇಡೀ ಗ್ರಾಮಸ್ಥರ ಪುನರ್ವಸತಿಗೆ ಕಮಿಟಿಯೊಂದನ್ನು ರಚಿಸುವಂತೆ ರಾಜಸ್ಥಾನ ಸರ್ಕಾರಕ್ಕೆ ಆದೇಶಿಸಿತ್ತು.
ಅಷ್ಟೇ ಅಲ್ಲ, ಗ್ರಾಮದ 500 ಮೀಟರ್ ವ್ಯಾಪ್ತಿಯಲ್ಲಿ ಸ್ಫೋಟಗಳನ್ನು ನಿಷೇಧಿಸಿ, ಸಂತ್ರಸ್ತರ ಆರೋಗ್ಯ ಹಾನಿಗಾಗಿ 'ಅಲ್ಟ್ರಾಟೆಕ್ ಸಿಮೆಂಟ್' ಸಂಸ್ಥೆಗೆ ₹ 20 ಸಾವಿರ ದಂಡ ವಿಧಿಸಿತ್ತು. ವೈದ್ಯರು ನೀಡಿರುವ ಚಿಕಿತ್ಸಾ ವರದಿಯಲ್ಲಿ 298 ಮಂದಿಯ ಪಟ್ಟಿ ಸಲ್ಲಿಕೆಯಾಗಿದ್ದು, ಹೆಚ್ಚಿನವರು ಅಸ್ತಮಾ, ಚರ್ಮದ ದದ್ದು, ಮೂಗಿನ ಕಿರಿಕಿರಿ, ಕೀಲು ನೋವು, ಕಿವುಡುತನ ಹಾಗೂ ಉಸಿರಾಟದ ತೊಂದರೆಯಿಂದ ನರಳುತ್ತಿದ್ದಾರೆ ಎಂದು ನ್ಯಾಯಾಲಯದ ಆದೇಶದಲ್ಲಿ ಉಲ್ಲೇಖಿಸಲಾಗಿತ್ತು.
ನ್ಯಾಯಾಲಯದ ಇಷ್ಟೆಲ್ಲಾ ಆದೇಶಗಳಿದ್ದರೂ, ಇದುವರೆಗೂ ಗ್ರಾಮಸ್ಥರ ಪುನರ್ವಸತಿಯಾಗಲಿ ಅಥವಾ ಗಣಿಗಾರಿಕೆಯನ್ನು ತಡೆಯುವ ಯಾವುದೇ ಕ್ರಮವಾಗಲಿ ಜಾರಿಯಾಗಿಲ್ಲ ಎಂದು ಯಾದವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಆರೋಪಗಳ ಕುರಿತು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಹಾಗೂ ಅಲ್ಟ್ರಾಟೆಕ್ ಸಿಮೆಂಟ್ ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸಿಗದ ಪರಿಹಾರದ ಭರವಸೆ
ಆಗಸ್ಟ್ 8 ರಂದು ಸುಪ್ರೀಂ ಕೋರ್ಟ್ ನೇಮಿಸಿದ್ದ ಸಮಿತಿ ನಮ್ಮ ಹಳ್ಳಿಗೆ ಭೇಟಿ ನೀಡಬೇಕಿತ್ತು. ಆದರೆ ಅವರು ಬರಲೇ ಇಲ್ಲ. ನಾನು, ನನ್ನ ಮಗಳು ಹಾಗೂ ಇತರ ಮಹಿಳೆಯರು ಬಿಸಿಲಿನಲ್ಲಿ ಐದು ಗಂಟೆಗೂ ಹೆಚ್ಚು ಕಾಲ ಅವರಿಗಾಗಿ ಕಾಯುತ್ತಿದ್ದೆವು. ಗಣಿಗಾರಿಕೆ ನಮ್ಮ ಬದುಕನ್ನು ಹೇಗೆ ನಾಶಮಾಡಿದೆ ಎಂದು ಅವರ ಬಳಿ ತೋಡಿಕೊಳ್ಳಬೇಕಿತ್ತು ಎಂದು ರೇಖಾ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
'ಅರಾವಳಿ ವಿರಾಸತ್ ಜನ ಅಭಿಯಾನ್' ನೀಡಿರುವ ಮಾಹಿತಿಯಂತೆ, ಸಮಿತಿಯು ಆಗಸ್ಟ್ 6 ರಿಂದ 11 ರ ನಡುವೆ ದೆಹಲಿ, ಹರಿಯಾಣ ಮತ್ತು ರಾಜಸ್ಥಾನದ ಒಟ್ಟು ಒಂಬತ್ತು ಜಿಲ್ಲೆಗಳಿಗೆ ಭೇಟಿ ನೀಡಿದ್ದು, ಗುರ್‌ಗಾಂವ್, ಆಲ್ವಾರ್, ಅಜ್ಮೇರ್ ಹಾಗೂ ಉದಯಪುರಗಳಲ್ಲಿ ಸಾರ್ವಜನಿಕ ವಿಚಾರಣೆ ನಡೆಸಿತ್ತು. ಫಾರೆಸ್ಟ್ ಸರ್ವೆ ಆಫ್ ಇಂಡಿಯಾದ 2025ರ ವರದಿಯ ಪ್ರಕಾರ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ಹರಿಯಾಣ ಮತ್ತು ದೆಹಲಿಯ ಸುಮಾರು 63 ಜಿಲ್ಲೆಗಳು ಅರಾವಳಿ ಪರ್ವತ ಶ್ರೇಣಿಯ ವ್ಯಾಪ್ತಿಗೆ ಒಳಪಡುತ್ತವೆ.
ಆಗಸ್ಟ್ 31ರಂದು ಸಲ್ಲಿಸಿದ ಅನುಸರಣಾ ವರದಿಯಲ್ಲಿ (Compliance Report), ಅರಾವಳಿ ಪ್ರದೇಶದ ಪರಿಸರ, ಭೂವಿಜ್ಞಾನ, ಜಲವಿಜ್ಞಾನ ಹಾಗೂ ಸಾಮಾಜಿಕ-ಆರ್ಥಿಕ ಮಾಹಿತಿಯನ್ನು ಸಮಗ್ರವಾಗಿ ಕ್ರೋಢೀಕರಿಸಲು ತಮಗೆ ಇನ್ನು ಆರು ತಿಂಗಳ ಹೆಚ್ಚುವರಿ ಕಾಲಾವಕಾಶ ಬೇಕು ಎಂದು ಸಮಿತಿಯು ವಿನಂತಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಈ ಕೋರಿಕೆಯನ್ನು ತಿರಸ್ಕರಿಸಿ, ನವೆಂಬರ್ 30 ರೊಳಗಾಗಿಯೇ ಅಂತಿಮ ವರದಿ ಸಲ್ಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಈ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು, 'ಸಮಿತಿಯು ಹಗಲು-ರಾತ್ರಿ ಶ್ರಮಿಸಿ ನಿಗದಿತ ಗಡುವಿನೊಳಗೆ ವರದಿಯನ್ನು ಸಲ್ಲಿಸಲಿ' ಎಂದು ಆದೇಶಿಸಿದ್ದಾರೆ.
ಆದರೆ, ಅಂತಿಮ ವರದಿ ಸಲ್ಲಿಸುವ ಮೊದಲು ಸಮಿತಿಯು ತಮ್ಮ ಜೋಧ್‌ಪುರ-ಮೋಹನ್‌ಪುರ ಗ್ರಾಮಕ್ಕೆ ಭೇಟಿ ನೀಡುತ್ತದೆ ಎಂಬ ಭರವಸೆ ಯಾದವ್ ಅವರಿಗಿಲ್ಲ. ಮೊದಲ ಭೇಟಿಯಲ್ಲೇ ಬರದಿದ್ದವರು ಈಗೇಕೆ ಬರುತ್ತಾರೆ? ಅವರ ಅಂತಿಮ ವರದಿ ಬರೆದರೂ ನಮ್ಮ ಬದುಕಿನ ಪರಿಸ್ಥಿತಿಯಂತೂ ಬದಲಾಗುವುದಿಲ್ಲ ಎಂದು ಅವರು ಹತಾಶೆಯಿಂದ ಹೇಳುತ್ತಾರೆ.
ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (NGT) ಕಳೆದ ನವೆಂಬರ್‌ನಲ್ಲಿ ಇಡೀ ಗ್ರಾಮವನ್ನು ಪುನರ್ವಸತಿಗೊಳಿಸಲು ಮತ್ತು ಗ್ರಾಮದ ೫೦೦ ಮೀಟರ್ ವ್ಯಾಪ್ತಿಯಲ್ಲಿ ಸ್ಫೋಟಗಳನ್ನು ನಿಷೇಧಿಸಲು ಆದೇಶಿಸಿತ್ತಾದರೂ, ಇದುವರೆಗೂ ಯಾವುದೇ ಕಟ್ಟುನಿಟ್ಟಿನ ಕ್ರಮ ಜಾರಿಯಾಗಿಲ್ಲ.
ಅರಾವಳಿಯನ್ನು ಉಳಿಸಲು ಮತ್ತು ಸಂತ್ರಸ್ತರಿಗೆ ನೆರವಾಗಲು ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ನೇಮಿತ ಸಮಿತಿ ತಕ್ಷಣವೇ ನೈಜ ಪರಿಸ್ಥಿತಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎನ್ನುತ್ತಾರೆ ಅವರು.

