ವಾಷಿಂಗ್ಟನ್ / ಟೆಹರಾನ್: ಇರಾನ್ ವಿರುದ್ಧದ ತನ್ನ ಕಾರ್ಯಾಚರಣೆಯ ಭಾಗವಾಗಿ ಒಮಾನ್ ಕೊಲ್ಲಿಯಲ್ಲಿ ಅದರ (ಇರಾನ್) ತೈಲ ಟ್ಯಾಂಕರ್‌ವೊಂದನ್ನು ಮುಳುಗಿಸಿರುವುದಾಗಿ ಅಮೆರಿಕ ಸೇನೆಯ ಸೆಂಟ್ರಲ್ ಕಮಾಂಡ್ (ಅಇಓಖಿಅಔಒ) ಭಾನುವಾರ ಹೇಳಿದೆ. ಅಲ್ಲದೇ ಈ ದಾಳಿಯ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಈ ಕುರಿತು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಸೆಂಟ್ರಲ್ ಕಮಾಂಡ್, 'ದೇಶದ ಯೋಧರ ನಿಖರ ಗುರಿ ಮತ್ತು ವೃತ್ತಿಪರತೆಗೆ ಧನ್ಯವಾದಗಳು, ಕೊಮೊರೊಸ್ ಧ್ವಜ ಹೊಂದಿದ್ದ ಎಂ/ಟಿ ಕೈಲೊ (M/T Kylo) ಟ್ಯಾಂಕರ್ ಒಮಾನ್ ಕೊಲ್ಲಿಯಲ್ಲಿ ಮುಳುಗಿದ್ದು, ಸಮುದ್ರದಾಳದಲ್ಲಿ ಇರಾನ್‌ನ ನೌಕಾಪಡೆಯನ್ನು ಸೇರಿಕೊಂಡಿದೆ' ಎಂದು ವ್ಯಂಗ್ಯವಾಡಿದೆ. ಟ್ಯಾಂಕರ್ ಮುಳುಗುವ ಮೊದಲು ಹೊಗೆ ಆವರಿಸಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.
ಇರಾನ್‌ನ ಮೂರು ಟ್ಯಾಂಕರ್‌ಗಳ ಮೇಲೆ ದಾಳಿ
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಅಮೆರಿಕದ ಸಮರ ನೌಕೆಯನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಅಮೆರಿಕ ಈ ಕ್ರಮ ಕೈಗೊಂಡಿದೆ. ಕಳೆದ 24 ಗಂಟೆಗಳಲ್ಲಿ ಎಂ/ಟಿ ಕೈಲೊ ಸೇರಿದಂತೆ ಇರಾನ್‌ನ ಮೂರು ತೈಲ ಟ್ಯಾಂಕರ್‌ಗಳನ್ನು ಗುರಿಯಾಗಿಸಲಾಗಿತ್ತು. ಎಂ/ಟಿ ಕೈಲೊ ಸಮುದ್ರದಲ್ಲಿ ಮುಳುಗಿದ್ದರೆ, 'ಎಂ/ಟಿ ಡೌನಿ' ಮತ್ತು 'ಎಂ/ಟಿ ಸ್ಟಾರ್ಕ್ 1 'ನೌಕೆಗಳು ಹಾನಿಗೊಳಗಾಗಿವೆ ಎಂದು ವರದಿಯಾಗಿದೆ.
ಇರಾನ್ ಆಕ್ರೋಶ:
ಅಮೆರಿಕದ ಮಿಲಿಟರಿ ಕ್ರಮಕ್ಕೆ ಇರಾನ್ ವಿದೇಶಾಂಗ ಸಚಿವಾಲಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದನ್ನು ಅಕ್ರಮ ಮತ್ತು ಹೊಣೆಗೇಡಿತನದ ಕೃತ್ಯ ಎಂದು ಜರಿದಿದೆ.
ಯಾವುದೇ ದೇಶದ ವಿರುದ್ಧ ಬಲಪ್ರಯೋಗ ಮಾಡುವುದನ್ನು ಅಥವಾ ಬೆದರಿಕೆ ಹಾಕುವುದನ್ನು ನಿಷೇಧಿಸುವ ವಿಶ್ವಸಂಸ್ಥೆಯ ಚಾರ್ಟರ್‌ನ ವಿಧಿ 2(4) ಅನ್ನು ಅಮೆರಿಕ ಉಲ್ಲಂಘಿಸಿದೆ ಎಂದು ಕಿಡಿಕಾರಿದೆ.
ಅಮೆರಿಕ ನಡೆಸಿದ ಈ ದಾಳಿಗಳು ಯುದ್ಧ ಅಪರಾಧ' ಆಗಿದ್ದು, ಅಂತರರಾಷ್ಟ್ರೀಯ ಶಾಂತಿ, ಪ್ರಾದೇಶಿಕ ಭದ್ರತೆ ಮತ್ತು ಜಾಗತಿಕ ವ್ಯಾಪಾರಕ್ಕೆ ಸಂಚಕಾರ ತಂದೊಡ್ಡಿವೆ ಎಂದೂ ಇರಾನ್ ಆರೋಪಿಸಿದೆ.
ಇರಾನ್‌ನ ಪ್ರತಿದಾಳಿ:
ಅಮೆರಿಕದ ಈ ಕಾರ್ಯಾಚರಣೆಯ ಬೆನ್ನಲ್ಲೇ, ಇರಾನ್‌ನ ಐಆರ್‌ಜಿಸಿ ಅಮೆರಿಕದ ಸಮರನೌಕೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ. ಈ ದಾಳಿಯಿಂದ ಅಮೆರಿಕದ ಎರಡೂ ಯುದ್ಧನೌಕೆಗಳು ಹಾನಿಗೊಳಗಾಗಿದ್ದು, ಆ ಪ್ರದೇಶದಿಂದ ಕಾಲ್ಕಿತ್ತಿವೆ ಎಂದು ಪ್ರತಿಪಾದಿಸಿದೆ.
ಜಾಗತಿಕ ತೈಲ ಮಾರುಕಟ್ಟೆಗೆ ಆತಂಕ:
ಅಮೆರಿಕ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಬೆನ್ನಲ್ಲೇ, ಜಾಗತಿಕ ಮಟ್ಟದಲ್ಲಿ ತೈಲ ಪೂರೈಕೆ ಹಾಗೂ ಸಮುದ್ರ ಮಾರ್ಗದ ವ್ಯಾಪಾರ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕ ಎದುರಾಗಿದೆ.
ಪರ್ಷಿಯನ್ ಕೊಲ್ಲಿಯನ್ನು ಅರೇಬಿಯನ್ ಸಮುದ್ರದೊಂದಿಗೆ ಜೋಡಿಸುವ ಒಮಾನ್ ಕೊಲ್ಲಿ ಜಾಗತಿಕ ಇಂಧನ ಸಾಗಣೆಯ ಅತ್ಯಂತ ಪ್ರಮುಖ ಹಾಗೂ ಆಯಕಟ್ಟಿನ ಜಲಮಾರ್ಗವಾಗಿದೆ.
ತೈಲ ಪೂರೈಕೆಗೆ ಧಕ್ಕೆ:
ಇಂಧನ ರಫ್ತು ಮಾರ್ಗದಲ್ಲೇ ವಾಣಿಜ್ಯ ನೌಕೆಗಳನ್ನು ಗುರಿಯಾಗಿಸಿ ದಾಳಿ ನಡೆಯುತ್ತಿರುವುದರಿಂದ, ಜಾಗತಿಕ ತೈಲ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.
ಆರ್ಥಿಕ ಪರಿಣಾಮಗಳು: ಈ ಭಾಗದಲ್ಲಿ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಅಡಚಣೆಯಾದರೆ ಅದು ಕೇವಲ ಪ್ರಾದೇಶಿಕ ವ್ಯಾಪಾರಕ್ಕಷ್ಟೇ ಅಲ್ಲದೆ, ಅಂತರರಾಷ್ಟ್ರೀಯ ಇಂಧನ ಮಾರುಕಟ್ಟೆಗಳಲ್ಲಿ ತೈಲ ಬೆಲೆ ಏರಿಕೆಗೆ ಕಾರಣವಾಗಿ ಜಾಗತಿಕ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರಲಿದೆ.

