ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಭಾರತೀಯ ನೌಕಾಪಡೆಗೆ ಸೇರಿದ ಯುದ್ಧ ಹಡಗಿಗೆ ಪಾಕಿಸ್ತಾನ ನೌಕಾಪಡೆಯ ಯುದ್ಧ ಹಡಗು ಡಿಕ್ಕಿ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಆರೋಪಗಳನ್ನು ಭಾರತವು ಸ್ಪಷ್ಟವಾಗಿ ತಿರಸ್ಕರಿಸಿದೆ.
ಈ ಸಂಬಂಧ ಪಾಕಿಸ್ತಾನ ಹೈಕಮಿಷನ್‌ನ ಅಧಿಕಾರಿಯನ್ನು ಕರೆಸಿಕೊಂಡು, ತನ್ನ ಬಲವಾದ ಪ್ರತಿಭಟನೆಯನ್ನು ದಾಖಲಿಸಿದೆ.
'ಅರಬ್ಬಿ ಸಮುದ್ರದ ಉತ್ತರ ಭಾಗದಲ್ಲಿ ನಿಯಮಿತ ಕಣ್ಗಾವಲು ನಡೆಸುತ್ತಿದ್ದ ಭಾರತೀಯ ನೌಕಾಸೇನೆಯ ಹಡಗಿಗೆ ಪಾಕಿಸ್ತಾನದ ನೌಕೆಯು ಡಿಕ್ಕಿ ಹೊಡೆದಿದೆ' ಎಂಬುದು ಭಾರತದ ವಾದ. ಪಾಕಿಸ್ತಾನದ ಆರ್ಥಿಕ ವಲಯದೊಳಗೆ ಭಾರತದ ಹಡಗು ಪ್ರವೇಶಿಸಿರುವುದು ತೀವ್ರ ಪ್ರಚೋದನಕಾರಿ ಹಾಗೂ ಸ್ವೀಕರಾರ್ಹವಲ್ಲದ ಕ್ರಮವಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆಯು ತಿಳಿಸಿದೆ.
'ನಾವು ಪಾಕಿಸ್ತಾನದ ಪ್ರತಿಕ್ರಿಯೆಯನ್ನು ಗಮನಿಸಿ, ನಮ್ಮ ಬಲವಾದ ಪ್ರತಿಭಟನೆಯನ್ನು ದಾಖಲಿಸಿದ್ದೇವೆ. ಇದು ಆಗಾಗ್ಗೆ ಪ್ರಚೋದಿಸುವ ಕ್ರಮವಾಗಿದೆ. ಅವರ ಆರೋಪಗಳನ್ನು ಸಂಪೂರ್ಣವಾಗಿ ತಿರಸ್ಕರಿಸಲಾಗಿದೆ' ಎಂದು ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ ಅವರು ತಿಳಿಸಿದ್ದಾರೆ.
ಅರಬ್ಬಿ ಸಮುದ್ರದಲ್ಲಿ ಭಾರತದ ನೌಕಾಪಡೆಯ ಐಎನ್‌ಎಸ್ ಕೋಲ್ಕತ್ತ ನೌಕೆ ಗಸ್ತು ತಿರುಗುತ್ತಿದ್ದ ವೇಳೆ, ಪಾಕಿಸ್ತಾನ ನೌಕಾಪಡೆಯ ಹುನೈನ್ ಹಡಗು ಡಿಕ್ಕಿ ಹೊಡೆದಿತ್ತು. ಇದರಿಂದ ಭಾರತದ ಹಡಗಿಗೆ ದೊಡ್ಡ ಮಟ್ಟಿನ ಹಾನಿ ಉಂಟಾಗಿಲ್ಲ ಎಂದು ಭಾರತವು ಸ್ಪಷ್ಟಪಡಿಸಿದೆ.
ರಣಧೀರ ಜೈಸ್ವಾಲ್

