ಕಾಸರಗೋಡು: ವಿದ್ಯಾರ್ಥಿಗಳು ಮತ್ತು ಯುವಜನರು ಕನ್ನಡದ ವಿವಿಧ ಕಾರ್ಯಕ್ರಮ ಮತ್ತು ತರಬೇತಿ ಶಿಬಿರಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಕೌಶಲ್ಯ ಹೆಚ್ಚಿಸುವುದರೊಂದಿಗೆ ಕನ್ನಡದ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ ಡಾ. ರಮಾನಂದ ಬನಾರಿ ಹೇಳಿದರು.
ಅವರು ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಆಶ್ರಯದಲ್ಲಿ ಬಾಯಿಕಟ್ಟೆ ಶ್ರೀ ಅಯ್ಯಪ್ಪ ಭಜನಾ ಮಂದಿರ ವಠಾರದಲ್ಲಿ ನಡೆದ ಕನ್ನಡ ಭಾಷಾ ತರಬೇತಿ ಕಮ್ಮಟದಲ್ಲಿ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಉತ್ತಮ ಓದುಗಾರಿಕೆ ಹಾಗೂ ಆಲಿಸುವಿಕೆ ಸೃಜನಶೀಲ ರಚನೆಗಳಿಗೆ ಬೆಂಬಲ ನೀಡುವುದರ ಜತೆಗೆ ಕೌಶಲ್ಯ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಪಾಂಡ್ಯಡ್ಕ ವೆಂಕಟರಮಣ ಮೂಡಿತ್ತಾಯ ಸಮಾರಂಭ ಉದ್ಘಾಟಿಸಿದರು. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯಾಧ್ಯಕ್ಷ, ನಿವೃತ್ತ ಪ್ರಾಂಶುಪಾಲ ಪೆÇ್ರ. ಪಿ .ಎನ್ ಮೂಡಿತ್ತಾಯ, ಲೇಖಕರ ಸಂಘದ ಕೋಶಾಧಿಕಾರಿ ವಿಶಾಲಾಕ್ಷ ಪುತ್ರಕಳ ತರಗತಿ ನಡೆಸಿದರು.
ಸಮಾರೋಪ ಸಮಾರಂಭದಲ್ಲಿ ರಾಘವೇಂದ್ರ ಭಟ್ ಉಡುಪು ಮೂಲೆ, ರಘುರಾಮ ಭಟ್ ಪುಣೆ, ಕುಸುಮಾ ಭಟ್ ಮೊದಲಾದವರು ಶಿಬಿರಾರ್ಥಿಗಳಿಗೆ ಪುಸ್ತಕದ ಉಡುಗೊರೆ ನೀಡಿದರು. ಸುದರ್ಶನಪಾಣಿ ಬಲ್ಲಾಳ್, ಸುಭಾಷ್ ಪೆರ್ಲಮತ್ತು ಆನಂದ ಉಪಸ್ಥಿತರಿದ್ದರು. ರಾಜೇಶ್ ಕನ್ನಾಟಿಪಾರೆ ಸ್ವಾಗತಿಸಿದರು. ಆದಿಶ್ರೀ ಕೆ. ಎಸ್ ವಂದಿಸಿದರು.



