ಕಾಸರಗೋಡು: ಮಾನ್ಯ ಮುಟ್ಟತ್ತೋಡಿಯಲ್ಲಿ ತಂದೆ ಮತ್ತು ಸಹೋದರಿಯ ಜತೆ ಹೊಳೆ ಸನಿಹ ಬಂದಿದ್ದ ಬಾಲಕ ನೀರಲ್ಲಿ ಮುಳುಗಿ ದಾರುಣವಾಗಿ ಸಾವಿಗೀಡಾಗಿದ್ದಾನೆ. ಮುಟ್ಟತ್ತೋಡಿ ಕಲ್ಲಕಟ್ಟ ಕೋಪ ಕಡಂಬಟ್ಟಿ ಹೌಸ್‍ನ ಕೆ. ಅಬ್ದುಲ್ ರಹ್ಮಾನ್-ಆಯಿಷತ್ ಶಿಬೀನಾ ದಂಪತಿ ಪುತ್ರ, ಮಾನ್ಯದ ಖಾಸಗಿ ಆಂಗ್ಲ ಮಾಧ್ಯಮ ಶಾಲಾ ಎರಡನೇ ತರಗತಿ ವಿದ್ಯಾರ್ಥಿ ಕೆ.ಎ. ಅಬ್ದುಲ್ಲ (8) ಸಾವನ್ನಪ್ಪಿದ ಬಾಲಕ.
ಗಲ್ಫ್ ಉದ್ಯೋಗಿಯಾಗಿರುವ ತಂದೆ ಅಬ್ದುಲ್ ರಹ್ಮಾನ್, ಸಹೋದರಿ ಖದೀಜತ್ ಶೈಮಾ ಹಾಗೂ ತಂದೆಯ ಸಹೋದರಿಯ ಪುತ್ರಿ ಜತೆ ಅಬ್ದುಲ್ಲ ಕೋಪಾ ಸೇತುವೆ ಸನಿಹ ಮಧುವಾಹಿನಿ ಹೊಳೆ ಬಳಿ ಬಂದಿದ್ದನು. ದಡದಲ್ಲಿ ನಿಂತಿದ್ದ ಪುತ್ರ ಅಬ್ದುಲ್ಲ ನಾಪತ್ತೆಯಾಗಿದ್ದು, ಇದನ್ನು ಗಮನಿಸಿ ಹುಡುಕಾಡುವ ಮಧ್ಯೆ, ಅಬ್ದುಲ್ಲ ನೀರಲ್ಲಿ ಮುಳುಗೇಳುತ್ತಿರುವುದು ಕಂಡುಬಂದಿತ್ತು. ತಕ್ಷಣ ಈತನನ್ನು ಮೇಲಕ್ಕೆತ್ತಿ ಮೊದಲು ಕಾಸರಗೋಡಿನ ಆಸ್ಪತ್ರೆಗೂ, ನಂತರ ಚೆಂಗಳದ ಖಾಸಗಿ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿರಲಿಲ್ಲ. ವಿದ್ಯಾನಗರ ಠಾಣೆ ಪೆÇಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.


