ನವದೆಹಲಿ: ಐತಿಹಾಸಿಕ ಸರ್ಕಾರಿ ಕಚೇರಿ ಸಂಕೀರ್ಣಗಳಾದ ಶಾಸ್ತ್ರಿ ಭವನ ಹಾಗೂ ಕೃಷಿ ಭವನಗಳನ್ನು ತೆರವುಗೊಳಿಸಿ ಹೊಸ ಕಟ್ಟಡಗಳ ನಿರ್ಮಾಣ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು, ಸೆಪ್ಟೆಂಬರ್ ಅಂತ್ಯದ ವೇಳೆಗೆ ಕಟ್ಟಡಗಳನ್ನು ಸಂಪೂರ್ಣವಾಗಿ ಖಾಲಿ ಮಾಡುವಂತೆ ಕೇಂದ್ರ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯೂಡಿ) ಸೂಚಿಸಿದೆ.
ಸೆಂಟ್ರಲ್ ವಿಸ್ತಾ ಪುನರಾಭಿವೃದ್ಧಿ ಯೋಜನೆಯಡಿ ಈ ಜಾಗದಲ್ಲಿ ನೂತನ 'ಕರ್ತವ್ಯ ಭವನ 4 ಮತ್ತು 5' ನಿರ್ಮಾಣಗೊಳ್ಳಲಿವೆ. 1956 ಮತ್ತು 1968ರ ಅವಧಿಯಲ್ಲಿ ನಿರ್ಮಾಣಗೊಂಡಿದ್ದ ಈ ಕಟ್ಟಡಗಳು ದಶಕಗಳಿಂದ ಪ್ರಮುಖ ಕೇಂದ್ರ ಸಚಿವಾಲಯಗಳ ಕೇಂದ್ರಸ್ಥಾನವಾಗಿದ್ದವು.
ನೂತನ ಕರ್ತವ್ಯ ಭವನ ನಿರ್ಮಾಣದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಹೊಸ ಕಟ್ಟಡಗಳು ಶಾಸ್ತ್ರಿ ಭವನ ಮತ್ತು ಕೃಷಿ ಭವನದ ಜಾಗದಲ್ಲೇ ತಲೆ ಎತ್ತಲಿರುವುದರಿಂದ ಈ ತಿಂಗಳ ಅಂತ್ಯದ ವೇಳೆಗೆ ಕಾಮಗಾರಿ ನಿರ್ವಹಿಸುವ ಸಂಸ್ಥೆಗೆ ಸ್ಥಳವನ್ನು ಹಸ್ತಾಂತರಿಸುವುದು ಕಡ್ಡಾಯವಾಗಿದೆ ಎಂದು ಸಿಪಿಡಬ್ಲ್ಯೂಡಿ ಪ್ರಕಟಣೆಯಲ್ಲಿ ತಿಳಿಸಿದೆ.
ಆದ್ದರಿಂದ ನಿಗದಿತ ಅವಧಿಯೊಳಗೆ ಶಾಸ್ತ್ರಿ ಭವನ ಮತ್ತು ಕೃಷಿ ಭವನ ಸಂಕೀರ್ಣಗಳನ್ನು ಖಾಲಿ ಮಾಡಿ ಹಸ್ತಾಂತರಿಸಲು ಆದ್ಯತೆಯ ಮೇರೆಗೆ ಕ್ರಮ ಕೈಗೊಳ್ಳಬೇಕು ಎಂದು ಇಲಾಖೆಯು ಅಧಿಕೃತ ಪ್ರಕಟಣೆ ಮೂಲಕ ತಿಳಿಸಿದೆ.
ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಹೆಸರನ್ನಿಡಲಾದ ಏಳು ಮಹಡಿಯ ಶಾಸ್ತ್ರಿ ಭವನವು ಶಿಕ್ಷಣ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಹಾಗೂ ಕಲ್ಲಿದ್ದಲು ಸೇರಿದಂತೆ ಹಲವು ಪ್ರಮುಖ ಸಚಿವಾಲಯಗಳ ಪ್ರಧಾನ ಕಚೇರಿಯಾಗಿತ್ತು. ಕೃಷಿ ಭವನದಲ್ಲಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯಗಳು ಕಾರ್ಯಾಚರಿಸುತ್ತಿದ್ದವು.
ವಿವಿಧೆಡೆ ಹಂಚಿ ಹೋಗಿರುವ ಕೇಂದ್ರ ಸರ್ಕಾರದ ಸಚಿವಾಲಯಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ಸೆಂಟ್ರಲ್ ವಿಸ್ತಾ ಯೋಜನೆಯಡಿ ಒಟ್ಟು 10 'ಕರ್ತವ್ಯ ಭವನ'ಗಳನ್ನು ನಿರ್ಮಿಸಲು ಸರ್ಕಾರ ಉದ್ದೇಶಿಸಿದೆ. ಇವು ಸುಸಜ್ಜಿತ, ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಕಚೇರಿ ಸ್ಥಳಾವಕಾಶವನ್ನು ಒದಗಿಸಲಿವೆ ಎಂದು ಸಿಪಿಡಬ್ಲ್ಯೂಡಿ ಹೇಳಿದೆ.

